ಮ್ಯಾಡಿಸನ್ ಕೀಸ್
(ಚಿತ್ರ ಕೃಪೆ: X/@AustralianOpen)
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಇಂದು ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ 29 ವರ್ಷದ ಮ್ಯಾಡಿಸನ್ ಅವರು ಅಗ್ರ ಶ್ರೇಯಾಂಕಿತೆ ಬೆಲರೂಸ್‌ನ ಅರಿನಾ ಸಬಲೆಂಕಾ ವಿರುದ್ಧ 6-3, 2-6, 7-5ರ ಅಂತರದಲ್ಲಿ ರೋಚಕ ಜಯ ಗಳಿಸಿದ್ದಾರೆ.
ಇದರೊಂದಿಗೆ 26 ವರ್ಷದ ಸಬಲೆಂಕಾ ಅವರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಹ್ಯಾಟ್ರಿಕ್ ಕನಸು ಭಗ್ನಗೊಂಡಿದೆ. 2023 ಹಾಗೂ 2024ನೇ ಸಾಲಿನಲ್ಲಿ ಸಬಲೆಂಕಾ ಚಾಂಪಿಯನ್ ಎನಿಸಿಕೊಂಡಿದ್ದರು. ಕಳೆದ ವರ್ಷ ಅಮೆರಿಕನ್ ಓಪನ್ ಪ್ರಶಸ್ತಿ ಕೂಡ ಗೆದ್ದಿದ್ದರು.
ಮತ್ತೊಂದೆಡೆ 19ನೇ ಶ್ರೇಯಾಂಕಿತೆ ಮ್ಯಾಡಿಸನ್ ಅವರಿಗೆ ಇದು ಚೊಚ್ಚಲ ಗ್ರ್ಯಾನ್‌ಸ್ಲಾಸ್ ಪ್ರಶಸ್ತಿ ಸಾಧನೆಯಾಗಿದೆ.
ಮೊದಲ ಸೆಟ್ 6-3ರ ಅಂತರದಲ್ಲಿ ಗೆದ್ದ ಮ್ಯಾಡಿಸನ್ ಮುನ್ನಡೆ ಸಾಧಿಸಿದರು. ಆದರೆ ಸಬಲೆಂಕಾ ಎರಡನೇ ಸೆಟ್ 6-2ರಲ್ಲಿ ಗೆದ್ದು ಸಮಬಲ ಸಾಧಿಸಿದರು.
ಮೂರನೇ ಹಾಗೂ ಅಂತಿಮ ಸೆಟ್‌ನಲ್ಲಿ ಇಬ್ಬರು ಸಮಬಲದ ಹೋರಾಟ ನೀಡಿದರು. ಆದರೆ ಕೊನೆಯ ಕ್ಷಣದಲ್ಲಿ ಒತ್ತಡವನ್ನು ನಿಭಾಯಿಸಿದ ಮ್ಯಾಡಿಸನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಮ್ಯಾಡಿಸನ್ ಕೀಸ್, ಅರಿನಾ ಸಬಲೆಂಕಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.