ADVERTISEMENT

ಲಿವುಜೌ ಚಾಲೆಂಜರ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಪ್ರಜ್ಞೇಶ್‌

ಪಿಟಿಐ
Published 26 ಅಕ್ಟೋಬರ್ 2018, 16:22 IST
Last Updated 26 ಅಕ್ಟೋಬರ್ 2018, 16:22 IST
ಪ್ರಜ್ಞೇಶ್‌ ಗುಣೇಶ್ವರನ್‌
ಪ್ರಜ್ಞೇಶ್‌ ಗುಣೇಶ್ವರನ್‌   

ನವದೆಹಲಿ: ಬಲಿಷ್ಠ ಆಟಗಾರನ ಎದುರು ದಿಟ್ಟ ಆಟ ಆಡಿದ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌, ಚೀನಾದಲ್ಲಿ ನಡೆಯುತ್ತಿರುವ ಲಿವುಜೌ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಜ್ಞೇಶ್‌ 6–7, 6–1, 6–3ರಲ್ಲಿ ಇಟಲಿಯ ಥಾಮಸ್‌ ಫಾಬಿಯಾನೊ ಅವರನ್ನು ಪರಾಭವಗೊಳಿಸಿದರು. ಈ ಮೂಲಕ ಹೋದ ವಾರ ನಿಂಗ್ಬೊ ಚಾಲೆಂಜರ್‌ ಟೂರ್ನಿಯ ಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

ಮೊದಲ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಮೂರನೇ ಶ್ರೇಯಾಂಕದ ಆಟಗಾರ ಥಾಮಸ್‌, ‘ಟೈ ಬ್ರೇಕರ್‌’ನಲ್ಲಿ ಮಿಂಚಿನ ಆಟ ಆಡಿ ಗೆಲುವು ಒಲಿಸಿಕೊಂಡರು.

ADVERTISEMENT

ಆರಂಭಿಕ ನಿರಾಸೆಯಿಂದ ಎದೆಗುಂದದ ಭಾರತದ ಆಟಗಾರ ಎರಡನೇ ಸೆಟ್‌ನಲ್ಲಿ ಮೋಡಿ ಮಾಡಿದರು. ಬೇಸ್‌ಲೈನ್‌ ಮತ್ತು ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿ 1–1ರಲ್ಲಿ ಸಮಬಲ ಮಾಡಿಕೊಂಡರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲೂ ಪ್ರಜ್ಞೇಶ್‌ ಪಾರಮ್ಯ ಮೆರೆದರು. ಆರಂಭದ ಆರು ಗೇಮ್‌ಗಳಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದ ಭಾರತದ ಆಟಗಾರ ನಂತರ ಅಬ್ಬರಿಸಿದರು. ಥಾಮಸ್‌ ಅವರ ಸರ್ವ್‌ ಮುರಿದ ಪ್ರಜ್ಞೇಶ್‌, ತಾವು ಮಾಡಿದ ಸರ್ವ್‌ ಕಾಪಾಡಿಕೊಂಡು ಗೆಲುವಿನ ತೋರಣ ಕಟ್ಟಿದರು.

ಈ ಹೋರಾಟ ಎರಡು ಗಂಟೆ ಎಂಟು ನಿಮಿಷ ನಡೆಯಿತು.

ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ನಾಲ್ಕನೇ ಶ್ರೇಯಾಂಕದ ಜೋಡಿ ಎನ್‌.ಶ್ರೀರಾಮ್‌ ಬಾಲಾಜಿ ಮತ್ತು ಸಾಕೇತ್‌ ಮೈನೇನಿ 7–5, 0–6, 5–10ರಲ್ಲಿ ಎರಡನೇ ಶ್ರೇಯಾಂಕದ ಮಾವೊ ಕ್ಸಿನ್‌ ಗೊಂಗ್‌ ಮತ್ತು ಜೀ ಜಾಂಗ್‌ ವಿರುದ್ಧ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.