ADVERTISEMENT

ಮೈಸೂರು ಓಪನ್‌ ಟೂರ್ನಿ: ‍ಪ್ರಧಾನ ಸುತ್ತಿಗೆ ಫೈಸಲ್‌

ಮೈಸೂರು ಓಪನ್‌ ಟೂರ್ನಿ: ಮುಖ್ಯಸುತ್ತಿನ ಪಂದ್ಯಗಳು ಇಂದು ಆರಂಭ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 18:43 IST
Last Updated 27 ಮಾರ್ಚ್ 2023, 18:43 IST
ಮೈಸೂರು ಟೆನಿಸ್‌ ಕ್ಲಬ್‌ ಅಂಗಳದಲ್ಲಿ ಸೋಮವಾರ ಆರಂಭವಾದ ಐಟಿಎಫ್– ಮೈಸೂರು ಓಪನ್ ಟೂರ್ನಿಯಲ್ಲಿ ಭಾರತದ ಫೈಸಲ್‌ ಕಮರ್ ಆಟದ ವೈಖರಿ– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರು ಟೆನಿಸ್‌ ಕ್ಲಬ್‌ ಅಂಗಳದಲ್ಲಿ ಸೋಮವಾರ ಆರಂಭವಾದ ಐಟಿಎಫ್– ಮೈಸೂರು ಓಪನ್ ಟೂರ್ನಿಯಲ್ಲಿ ಭಾರತದ ಫೈಸಲ್‌ ಕಮರ್ ಆಟದ ವೈಖರಿ– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ಭಾರತದ ಫೈಸಲ್ ಕಮರ್‌ ಸೋಮವಾರ ಆರಂಭವಾದ ಐಟಿಎಫ್‌– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಧಾನ ಸುತ್ತು ಪ್ರವೇಶಿಸಿದರು.

ಚಾಮರಾಜಪುರಂನ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ)ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಫೈಸಲ್‌ ಅವರು 7–6, 7–6ರಲ್ಲಿ ಭಾರತದವರೇ ಆದ ಲಕ್ಷಿತ್‌ ಸೂದ್‌ ವಿರುದ್ಧ ಜಯ ಸಾಧಿಸಿದರು.

ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಬಲಿಷ್ಠ ಸರ್ವ್‌ ಹಾಗೂ ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಾಡಿದ ಫೈಸಲ್‌, 2 ಗಂಟೆ 2ನಿಮಿಷದಲ್ಲಿ ಗೆಲುವು ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನ ಪಂದ್ಯದಲ್ಲಿ ರಿಷಿ ರೆಡ್ಡಿ ವಿರುದ್ಧ ಪೈಪೋಟಿ ನಡೆಸುವರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ಫರ್ದೀನ್‌ ಕ್ವಾಮರ್‌ ಅವರು 3–7, 7–6, 10–5ರಲ್ಲಿ ಥಾಯ್ಲೆಂಡ್‌ನ ಇಸರೊ ಪ್ರುಚ್ಯಾ ಅವರನ್ನು ಮಣಿಸಿ ಮುಖ್ಯಸುತ್ತಿಗೆ ಪ್ರವೇಶಿಸಿದರು. ಮೊದಲ ಸೆಟ್‌ನಲ್ಲಿ ಸೋತರೂ ಪುಟಿದೆದ್ದ ಫರ್ದೀನ್‌, 2 ಗಂಟೆ 9 ನಿಮಿಷದಲ್ಲಿ ಗೆಲುವು ಸಾಧಿಸಿದರು.

ದಕ್ಷಿಣ ಕೊರಿಯಾದ ಶಿನ್‌ ವೂಬಿನ್‌ 6–2, 6–3ರಲ್ಲಿ ಭಾರತದ ಭರತ್‌ ಕುಮಾರನ್‌ ಅವರನ್ನು ಮಣಿಸಿದರೆ, ಮಲೇಷ್ಯಾದ ಮಿತ್ಸುಕಿ ವೈಕಾಂಗ್ ಲಿಯಾಂಗ್‌ 6–4, 4–6, 10–7ರಲ್ಲಿ ಭಾರತದ ಅಭಿನವ್‌ ಷಣ್ಮುಗಂ ವಿರುದ್ಧ ಗೆದ್ದರು. 3 ಗಂಟೆ 53 ನಿಮಿಷ ಕಾಡಿದರು. ಭಾರತದ ರಣಜಿತ್ ಮುರುಗೇಶನ್‌, ಇಶಾಖ್ ಇಕ್ಬಾಲ್‌ ಅವರು ಕ್ರಮವಾಗಿ ಬೆಲ್ಜಿಯಂನ ರೊಮೈನ್‌ ಫಾಕನ್‌ ಮತ್ತು ಭಾರತದ ಸಂದೇಶ್‌ ದತ್ತಾತ್ರೇಯ ಅವರನ್ನು ಮೊದಲ ಸೆಟ್‌ನಲ್ಲಿಯೇ ಮಣಿಸಿ ಮುಖ್ಯ ಸುತ್ತಿಗೆ ಪ್ರವೇಶಿಸಿದರು.

ಸಿದ್ದಾರ್ಥ ವಿಶ್ವಕರ್ಮ ಅವರು ದೀಪಕ್‌ ಅನಂತರಾಮು ವಿರುದ್ಧ 6–1, 6–2ರಲ್ಲಿ ಗೆಲುವು ಸಾಧಿಸಿದರೆ, ವಿಷ್ಣುವರ್ಧನ್‌ ಅವರು 6–1, 6–1ರಲ್ಲಿ ಯಶ್‌ ಚೌರಾಸಿಯಾ ಅವರನ್ನು ಮಣಿಸಿದರು. ಮುಖ್ಯಸುತ್ತಿಗೆ 6
ಮಂದಿ ಭಾರತೀಯ ಆಟಗಾರರು ಪ್ರವೇಶ ಪಡೆದರು.

ಉದ್ಘಾಟನೆ ಇಂದು: ಎಂಟು ವರ್ಷಗಳ ನಂತರ ನಡೆಯುತ್ತಿರುವ ಐಟಿಎಫ್‌– ಮೈಸೂರು ಓಪನ್‌ ಟೂರ್ನಿಯ ಉದ್ಘಾಟನೆ ಮಂಗಳವಾರ ಬೆಳಿಗ್ಗೆ 9ಕ್ಕೆ ನಡೆಯಲಿದೆ. ನಂತರ ನಡೆಯುವ ಮುಖ್ಯ ಸುತ್ತಿನ ಪಂದ್ಯಗಳಲ್ಲಿ ಸೂರಜ್‌ ಪ್ರಬೋದ್‌, ರಿಷಿ ರೆಡ್ಡಿ, ಸಿದ್ದಾರ್ಥ್‌ ರಾವತ್‌, ಕರಣ್‌ ಸಿಂಗ್‌ ಹಾಗೂ ಸಂದೇಶ್‌ ಸೇರಿದಂತೆ 8 ಮಂದಿ ಭಾರತೀಯ ಆಟಗಾರರು ಸೆಣಸಲಿದ್ದಾರೆ.

2017ರಲ್ಲಿ ರೋಜರ್‌ ಫೆಡರರ್ ಅವರನ್ನು ಸೋಲಿಸಿದ್ದ ರಷ್ಯಾದ ಡಾನ್ಸ್ಕೊಯ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರನಡೆದಿದ್ದಾರೆ. ಅಮೆರಿಕದ ಡಾಲಿ ಬ್ಲೆಂಚ್‌,
ಕಜಕಸ್ತಾನದ ಗ್ರಿಗೋರಿ ಲೊಮಕಿನ್‌ ಕಣದಲ್ಲಿದ್ದಾರೆ. ಸಿಂಗಲ್ಸ್ ಹಾಗೂ ಡಬಲ್ಸ್‌ ವಿಭಾಗದ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.