ADVERTISEMENT

ಫ್ರೆಂಚ್ ಓಪನ್: ಅರ್ಹತಾ ಸುತ್ತಿನಲ್ಲಿ ಸೋತ ಸುಮಿತ್ ನಗಾಲ್‌

ಪಿಟಿಐ
Published 27 ಮೇ 2021, 12:38 IST
Last Updated 27 ಮೇ 2021, 12:38 IST
ಸುಮಿತ್ ನಗಾಲ್– ಪಿಟಿಐ ಸಂಗ್ರಹ ಚಿತ್ರ
ಸುಮಿತ್ ನಗಾಲ್– ಪಿಟಿಐ ಸಂಗ್ರಹ ಚಿತ್ರ   

ಪ್ಯಾರಿಸ್‌ : ಭಾರತದ ಪ್ರಮುಖ ಆಟಗಾರ ಸುಮಿತ್ ನಗಾಲ್ ಅವರು ಫ್ರೆಂಚ್ ಓಪನ್ ಟೆನಿಸ್‌ ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಅರ್ಹತಾ ಟೂರ್ನಿಯ ಎರಡನೇ ಸುತ್ತಿನಲ್ಲಿ ನೇರ ಸೆಟ್‌ಗಳಲ್ಲಿ ಸೋಲುವುದರೊಂದಿಗೆ ಮೂರನೇ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಮುಖ್ಯ ಸುತ್ತು ಪ್ರವೇಶಿಸುವ ಅವರ ಆಸೆ ಕಮರಿತು.

ಹರಿಯಾಣದ ಈ ಯುವ ಆಟಗಾರ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 3–6, 3–6ರಿಂದ ಚಿಲಿಯ ಅಲೆಜಾಂಡ್ರೊ ಟ್ಯಾಬಿಲೊ ಎದುರು ಎಡವಿದರು. ಒಂದೂವರೆ ತಾಸು ನಡೆದ ಈ ಹಣಾಹಣಿಯಲ್ಲಿ ಸುಮಿತ್‌, ಎರಡು ಬಾರಿ ಎದುರಾಳಿಯ ಸರ್ವ್‌ ಮುರಿದರೆ, ಐದು ಬಾರಿ ತಮ್ಮ ಸರ್ವ್‌ ಕೈಚೆಲ್ಲಿದರು.

ರಾಮಕುಮಾರ್ ರಾಮನಾಥನ್‌, ಪ್ರಜ್ಞೇಶ್ ಗುಣೇಶ್ವರನ್ ಹಾಗೂ ಅಂಕಿತಾ ರೈನಾ ಅವರು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ADVERTISEMENT

ಫ್ರೆಂಚ್ ಓಪನ್ ಟೂರ್ನಿಯ ಮುಖ್ಯ ಸುತ್ತಿನ ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ–ದಿವಿಜ್ ಶರಣ್ ಜೋಡಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರೂ ಆಟಗಾರರಿಗೆ ಈ ಟೂರ್ನಿ ನಿರ್ಣಾಯಕವಾಗಲಿದ್ದು, ಉತ್ತಮ ಸಾಮರ್ಥ್ಯ ತೋರಬೇಕಿದೆ. ಏಕೆಂದರೆ ಜೂನ್‌ 10ರಂದು ಪ್ರಕಟವಾಗುವ ರ‍್ಯಾಂಕಿಂಗ್‌ ಪಾಯಿಂಟ್ಸ್‌ ಆಧರಿಸಿ ಒಲಿಂಪಿಕ್ಸ್ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ.

ಸಾನಿಯಾ ಮಿರ್ಜಾ ಅವರು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ‘ವಿಶೇಷ ರ‍್ಯಾಂಕಿಂಗ್‌‘ ಬಳಸಿಕೊಂಡು ಅವರು ವಿಂಬಲ್ಡನ್ ಚಾಂಪಿಯನ್‌ಷಿಪ್‌ಗೆ ಪ್ರವೇಶ ಪಡೆಯಲು ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.