ADVERTISEMENT

ಟೆನಿಸ್‌: ನಿಕ್ಷೇಪ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:00 IST
Last Updated 15 ಮಾರ್ಚ್ 2019, 20:00 IST
ಪ್ರಶಸ್ತಿಯೊಂದಿಗೆ ನಿಕ್ಷೇಪ್‌ ಸಂಭ್ರಮ
ಪ್ರಶಸ್ತಿಯೊಂದಿಗೆ ನಿಕ್ಷೇಪ್‌ ಸಂಭ್ರಮ   

ಬೆಂಗಳೂರು: ಅಪೂರ್ವ ಆಟ ಆಡಿದ ಕರ್ನಾಟಕದ ಬಿ.ಆರ್‌.ನಿಕ್ಷೇಪ್‌, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜನೆಯಾಗಿದ್ದ ಎಐಟಿಎ 50ಕೆ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಆರ್‌.ಜಿ.ಪಿ.ಎಂ. ಕಾಲೇಜಿನ ಅಂಗಳದಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ನಿಕ್ಷೇಪ್‌ 6–1, 1–6, 6–3ರಲ್ಲಿ ತೆಲಂಗಾಣದ ತಾಹ ಕಪಾಡಿಯ ಅವರನ್ನು ಸೋಲಿಸಿದರು.

ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಆಟಗಾರರನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ನಿಕ್ಷೇಪ್‌ ಮೊದಲ ಸೆಟ್‌ನಲ್ಲಿ ಮೋಡಿ ಮಾಡಿದರು.

ADVERTISEMENT

ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಿಕ್ಷೇಪ್‌, ಶರವೇಗದ ಸರ್ವ್‌ ಮತ್ತು ಆಕರ್ಷಕ ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಆರಂಭಿಕ ನಿರಾಸೆಯಿಂದ ಕಪಾಡಿಯ ಎದೆಗುಂದಲಿಲ್ಲ. ಎರಡನೇ ಸೆಟ್‌ನಲ್ಲಿ ಮಿಂಚಿನ ಆಟ ಆಡಿದ ತೆಲಂಗಾಣದ ಆಟಗಾರ, ನಿಕ್ಷೇಪ್‌ಗೆ ತಿರುಗೇಟು ನೀಡಿದರು. ಹೀಗಾಗಿ 1–1 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನ ಶುರುವಿನಲ್ಲಿ ಉಭಯ ಆಟಗಾರರು ಸಮಬಲದ ಪೈಪೋಟಿ ನಡೆಸಿದರು. ನಂತರ ನಿಕ್ಷೇಪ್‌ ಆಟ ರಂಗೇರಿತು. ಅಮೋಘ ಬ್ಯಾಕ್‌ಹ್ಯಾಂಡ್‌ ಹೊಡೆತಗಳನ್ನು ಬಾರಿಸಿದ ಅವರು ಏಸ್‌ಗಳನ್ನೂ ಸಿಡಿಸಿ ಸುಲಭವಾಗಿ ಗೇಮ್‌ ಜಯಿಸಿದರು. ಈ ಮೂಲಕ ಎದುರಾಳಿಯ ಪ್ರಶಸ್ತಿ ಕನಸನ್ನು ಭಗ್ನಗೊಳಿಸಿದರು.

ಡಬಲ್ಸ್‌ನಲ್ಲಿ ನಿರಾಸೆ: ಡಬಲ್ಸ್‌ ವಿಭಾಗದಲ್ಲಿ ಆಂಧ್ರಪ್ರದೇಶದ ಅಪರೂಪ್‌ ರೆಡ್ಡಿ ಜೊತೆಗೂಡಿ ಆಡಿದ ನಿಕ್ಷೇಪ್‌, ರನ್ನರ್ಸ್‌ ಅಪ್‌ ಆದರು.

ಫೈನಲ್‌ನಲ್ಲಿ ನಿಕ್ಷೇಪ್‌ ಮತ್ತು ಅಪರೂಪ್‌ 3–6, 3–6 ನೇರ ಸೆಟ್‌ಗಳಿಂದ ತಾಹ ಕಪಾಡಿಯ ಮತ್ತು ಪರೀಕ್ಷಿತ್‌ ಸೋಮಾನಿ ಎದುರು ಶರಣಾದರು.

ನಿಕ್ಷೇಪ್‌ ಮತ್ತು ಅಪರೂಪ್‌ ಎರಡು ಸೆಟ್‌ಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.