ADVERTISEMENT

ಫ್ರೆಂಚ್ ಓಪನ್‌: ಪತ್ರಿಕಾಗೋಷ್ಠಿಗೆ ಒಸಾಕ ಬಹಿಷ್ಕಾರ

ಏಜೆನ್ಸೀಸ್
Published 27 ಮೇ 2021, 13:27 IST
Last Updated 27 ಮೇ 2021, 13:27 IST
ನವೊಮಿ ಒಸಾಕ –ರಾಯಿಟರ್ಸ್ ಚಿತ್ರ
ನವೊಮಿ ಒಸಾಕ –ರಾಯಿಟರ್ಸ್ ಚಿತ್ರ   

ಪ್ಯಾರಿಸ್: ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಸಂದರ್ಭದಲ್ಲಿ ಮಾಧ್ಯಮಗೋಷ್ಠಿಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟೆನಿಸ್ ಪಟು, ಜಪಾನ್‌ನ ನವೊಮಿ ಒಸಾಕ ಗುರುವಾರ ತಿಳಿಸಿದ್ದಾರೆ. ಬಹಿಷ್ಕಾರದ ಹಿನ್ನೆಲೆಯಲ್ಲಿ ವಸೂಲಿ ಮಾಡುವ ಶುಲ್ಕವನ್ನು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಕಾರ್ಯಕ್ಕೆ ನೀಡುವಂತೆ ಕೋರಲಾಗುವುದು ಎಂದು ಅವರು ವಿವರಿಸಿದ್ದಾರೆ.

ವಿಶ್ವದ ಮಹಿಳಾ ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ಗಳಿಕೆ ಇರುವವರು 23 ವರ್ಷದ ಒಸಾಕ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ವರೆಗೆ ನಾಲ್ಕು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗಳಿಸಿದ್ದಾರೆ. ಕಳೆದ ವರ್ಷ ನಡೆದ ಅಮೆರಿಕ ಓಪನ್ ಮತ್ತು ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲೂ ಚಾಂಪಿಯನ್‌ ಆಗಿದ್ದಾರೆ.

‘ಅಥ್ಲೀಟ್‌ಗಳ ಮಾನಸಿಕ ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ. ಮಾಧ್ಯಮಗೋಷ್ಠಿಗಳಲ್ಲಿ ಇದು ಹೆಚ್ಚು ಪ್ರತಿಫಲನವಾಗುತ್ತಿದೆ. ಸೋತ ನಂತರ ಪತ್ರಿಕಾಗೋಷ್ಠಿ ನಡೆಸುವ ಕೆಲವು ಕ್ರೀಡಾಪಟುಗಳು ಬೇಸರದಲ್ಲೇ ಉತ್ತರಿಸಲು ತಡಕಾಡುವುದನ್ನು ನಾನು ಕಂಡಿದ್ದೇನೆ’ ಎಂದು ಒಸಾಕ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಫ್ರೆಂಚ್ ಓಪನ್ ಟೂರ್ನಿ ಮುಂದಿನ ಭಾನುವಾರ ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ. ಒಸಾಕ ಈಗ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.