ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ದಾಖಲೆಯತ್ತ ನಡಾಲ್ ನಾಗಾಲೋಟ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಎಂಟರಘಟ್ಟಕ್ಕೆ ಬಾರ್ಟಿ

ಏಜೆನ್ಸೀಸ್
Published 15 ಫೆಬ್ರುವರಿ 2021, 13:17 IST
Last Updated 15 ಫೆಬ್ರುವರಿ 2021, 13:17 IST
ರಫೆಲ್ ನಡಾಲ್‌–ರಾಯಿಟರ್ಸ್ ಚಿತ್ರ
ರಫೆಲ್ ನಡಾಲ್‌–ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ಸ್ಪೇನ್‌ನ ರಫೆಲ್ ನಡಾಲ್ ದಾಖಲೆಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯತ್ತ ತಮ್ಮ ನಾಗಾಲೋಟವನ್ನು ಮುಂದುರಿಸಿದರು. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಮವಾರ ಅಮೋಘ ಆಟವಾಡಿದ ಅವರು ಇಟಲಿಯ ಫ್ಯಾಬಿಯೊ ಫಾಗ್ನಿನಿ ಎದುರು6-3, 6-4, 6-2ರ ಜಯ ಗಳಿಸಿ ಎಂಟರ ಘಟ್ಟ ಪ್ರವೇಶಿಸಿದರು. ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರೋಜರ್ ಫೆಡರರ್ ದಾಖಲೆಯನ್ನು ಅವರು ಮುರಿಯಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಶೆಲ್ಬಿ ರಾಜರ್ಸ್ ಸವಾಲು ಮೀರಿನಿಂತ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು 43 ವರ್ಷಗಳ ನಂತರ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಸ್ಥಳೀಯ ಆಟಗಾರ್ತಿ ಎಂಬ ಗರಿಮೆ ತಮ್ಮದಾಗಿಸುವತ್ತ ಹೆಜ್ಜೆ ಹಾಕಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಇಟಲಿಯ ಮಟಿಯೊ ಬರೆಟಿನಿ ಅವರಿಂದ ವಾಕ್ ಓವರ್ ‍ಪಡೆದ ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್ ಎಂಟರ ಘಟ್ಟದಲ್ಲಿ ನಡಾಲ್ ವಿರುದ್ಧ ಸೆಣಸುವರು.

2015ರ ಅಮೆರಿಕ ಓಪನ್‌ ಟೂರ್ನಿಯಲ್ಲಿ ನಡಾಲ್ ವಿರುದ್ಧದ ಐದು ಸೆಟ್‌ಗಳ ಪಂದ್ಯದಲ್ಲಿ ಜಯ ಗಳಿಸಿದ್ದ ಫಾಗ್ನಿನಿ ಸೋಮವಾರ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದರು. ಅರಂಭದಲ್ಲಿ 4–2ರ ಮುನ್ನಡೆ ಸಾಧಿಸುವಲ್ಲೂ ಯಶಸ್ವಿಯಾದರು. ಆದರೆ ಪುಟಿದೆದ್ದ ನಡಾಲ್ ಬಲಶಾಲಿ ಹೊಡೆತ ಮತ್ತು ತಂತ್ರಶಾಲಿ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ADVERTISEMENT

ಪುರುಷರ ಸಿಂಗಲ್ಸ್ ಇತರ ಪಂದ್ಯಗಳಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ 6-4, 6-2, 6-3ರಿಂದ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ಎದುರು ರಷ್ಯಾದ ಇನ್ನೋರ್ವ ಆಟಗಾರ ಆ್ಯಂಡ್ರೆ ರುಬ್ಲೆವ್‌ ಅವರು ನಾರ್ವೆಯ ಕ್ಯಾಸ್ಪರ್ ರೂಡ್ ಎದುರು ಗೆದ್ದರು. ಪಂದ್ಯದಲ್ಲಿ ಮೊದಲ ಎರಡು ಸೆಟ್‌ ಸೋತ ಬಳಿಕ ರೂಡ್‌ ನಿವೃತ್ತರಾದರು.

ಟೂರ್ನಿಯಲ್ಲಿ ಈ ವರೆಗೆ ಏಕೈಕ ಸೆಟ್ ಕೂಡ ಎದುರಾಳಿಗಳಿಗೆ ಬಿಟ್ಟುಕೊಡದಿರುವ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್‌ ಬಾರ್ಟಿ ಸೋಮವಾರ ಶೆಲ್ಬಿ ರಾಜರ್ಸ್ ವಿರುದ್ಧವೂ ಮೋಹಕ ಆಟವಾಡಿ 6-3, 6-4ರಲ್ಲಿ ಗೆಲುವು ಸಾಧಿಸಿದರು. ಟೂರ್ನಿಯಲ್ಲಿ ಚಾಂಪಿಯನ್ ಆದರೆ 1978ರಲ್ಲಿ ಕ್ರಿಸ್ ಒನೀಲ್ ಅವರ ನಂತರ ಪ್ರಶಸ್ತಿ ಗೆಲ್ಲುವ ಆಸ್ಟ್ರೇಲಿಯಾದ ಮೊದಲ ಮಹಿಳೆ ಅವರಾಗಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬೆಲ್ಜಿಯಂನ ಎಲಿಸ್ ಮರ್ಟೆನ್ಸ್ ಅವರನ್ನು ಜೆಕ್ ಗಣರಾಜ್ಯದ ಕರೊಲಿನಾ ಮುಚೋವ 7-6 (7/5), 7-5ರಲ್ಲಿ ಮಣಿಸಿದರು.

ಶ್ರೇಯಾಂಕರಹಿತ ಆಟಗಾರ್ತಿಅಮೆರಿಕದ ಜೆಸ್ಸಿಕಾ ಪೆಗುಲಾ 6-4, 3-6, 6-3ರಿಂದ ಐದನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಎದುರು ಗೆದ್ದು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಎಂಟರಘಟ್ಟ ತಲುಪಿದರು. ಮತ್ತೊಂದು ಸೆಣಸಾಟದಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ 6–1, 7–5ರಿಂದ ಕ್ರೊವೇಷ್ಯಾದ ಡೊನ್ನಾ ವೆಕಿಕ್ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.