ನ್ಯೂಯಾರ್ಕ್ (ಎಎಫ್‌ಪಿ): ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿರುವ ಅರಿನಾ ಸಬಲೆಂಕಾ ಮತ್ತು ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್ ಅವರು ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಶುಭಾರಂಭ ಮಾಡಿದರು. ಆದರೆ, ಮಾಜಿ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್ ಆರಂಭಿಕ ಸುತ್ತಿನಲ್ಲೇ ಆಘಾತ ಅನುಭವಿಸಿದರು.
ಹಾಲಿ ಚಾಂಪಿಯನ್, ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸಬಲೆಂಕಾ 7-5, 6-1ರ ನೇರ ಸೆಟ್‌ಗಳಿಂದ ಸ್ವಿಟ್ಜರ್ಲೆಂಡ್‌ನ ರೆಬೆಕಾ ಮಸರೋವಾ ಅವರನ್ನು ಹಿಮ್ಮೆಟ್ಟಿಸಿದರು. ಅಮೆರಿಕದ ಸೆರೆನಾ ವಿಲಿಯಮ್ಸ್ ಬಳಿಕ ಇಲ್ಲಿ 27 ವರ್ಷದ ಸಬಲೆಂಕಾ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸೆರೆನಾ ಅವರು 2012ರಿಂದ 14ರವರೆಗೆ ಸತತ ಮೂರು ಬಾರಿ ಚಾಂಪಿಯನ್ ಆಗಿದ್ದರು.
ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡತಿಯಾಗಿರುವ ಸಬಲೆಂಕಾ ಅವರಿಗೆ ಮೊದಲ ಸೆಟ್‌ನಲ್ಲಿ ವಿಶ್ವದ 108ನೇ ರ‍್ಯಾಂಕ್‌ನ ರೆಬೆಕಾ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. ಆದರೆ, ಎರಡನೇ ಸೆಟ್ ಏಕಪಕ್ಷೀಯವಾಗಿ ಸಾಗಿತು. ಬೆಲಾರೂಸ್‌ನ ಸಬಲೆಂಕಾ ಎರಡನೇ ಸುತ್ತಿನಲ್ಲಿ ರಷ್ಯಾದ ಶ್ರೇಯಾಂಕರಹಿತ ಆಟಗಾರ್ತಿ ಪೋಲಿನಾ ಕುಡೆರ್ಮೆಟೋವಾ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ಹಾಲಿ ಚಾಂಪಿಯನ್, ಅಗ್ರಶ್ರೇಯಾಂಕದ ಯಾನಿಕ್ ಸಿನ್ನರ್ (ಇಟಲಿ) ಮತ್ತು ಎರಡನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ (ಸ್ಪೇನ್) ಅವರು ತಮ್ಮ ಅಭಿಯಾನವನ್ನು ಮಂಗಳವಾರ ಆರಂಭಿಸಲಿದ್ಧಾರೆ. ಅದಕ್ಕೂ ಮುನ್ನ ಎಲ್ಲರ ಆಕರ್ಷಣೆಯಾಗಿದ್ದ ಏಳನೇ ಶ್ರೇಯಾಂಕದ ಜೊಕೊವಿಚ್ 6-1, 7-6 (7/3), 6-2ರಿಂದ ಅಮೆರಿಕದ ಲರ್ನರ್ ಟಿಯೆನ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಇಲ್ಲಿ ನಾಲ್ಕು ಬಾರಿ ಚಾಂಪಿಯನ್ ಆಗಿರುವ 38 ವರ್ಷದ ಜೊಕೊವಿಚ್ ಅವರು 19 ವರ್ಷದ ಟಿಯೆನ್ ಅವರನ್ನು ಮಣಿಸಲು 2 ಗಂಟೆ 25 ನಿಮಿಷ ತೆಗೆದುಕೊಂಡರು. ಎರಡನೇ ಸೆಟ್‌ನಲ್ಲಿ ಟಿಯೆನ್ ಅವರ ಪ್ರಬಲ ಸವಾಲನ್ನು ಮೀರಿ, ಟೈಬ್ರೇಕರ್‌ನಲ್ಲಿ ಜೊಕೊವಿಚ್ ಮೇಲುಗೈ ಸಾಧಿಸಿದರು. ಪದೇ ಪದೇ ಕಾಡುತ್ತಿದ್ದ ಬಲಗಾಲಿನ ನೋವಿಗೆ ಅನುಭವಿ ಆಟಗಾರ ಪಂದ್ಯದ ನಡುವೆ ವೈದ್ಯಕೀಯ ನೆರವು ಪಡೆದರು. ಅವರಿಗೆ ಮುಂದಿನ ಸುತ್ತಿನಲ್ಲಿ ಆತಿಥೇಯ ದೇಶದ ಝಚಾರಿ ಸ್ವಜ್ಡಾ ಎದುರಾಳಿಯಾಗಿದ್ದಾರೆ.
ಮೆಡ್ವೆಡೇವ್‌ಗೆ ಆಘಾತ: ಫ್ರಾನ್ಸ್‌ನ ಬೆಂಜಮಿನ್ ಬೊಂಜಿ ಅವರು 2021ರ ಚಾಂಪಿಯನ್, 13ನೇ ಶ್ರೇಯಾಂಕದ ಮೆಡ್ವೆಡೇವ್ ಅವರಿಗೆ ಆಘಾತ ನೀಡಿದರು. 51ನೇ ಕ್ರಮಾಂಕದ ಬೆಂಜಮಿನ್ 6-3, 7-5, 6-7 (5/7), 0-6, 6-4ರಲ್ಲಿ ಐದು ಸೆಟ್‌ಗಳ ಹೋರಾಟದಲ್ಲಿ ರಷ್ಯಾ ಆಟಗಾರನ ವಿರುದ್ಧ ಗೆಲುವು ಸಾಧಿಸಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ 14ನೇ ಶ್ರೇಯಾಂಕದ ಕ್ಲಾರಾ ಟೌಸನ್ ಅವರೂ ಮೊದಲ ಸುತ್ತಿನಲ್ಲಿ ಹೊರಬಿದ್ದರು. ಶ್ರೇಯಾಂಕರಹಿತ ಆಟಗಾರ್ತಿ ಅಲೆಕ್ಸಾಂಡ್ರಾ ಈಲಾ 6-3, 2-6, 7-6 (13/11)ರಿಂದ ಡೆನ್ಮಾರ್ಕ್‌ನ ಕ್ಲಾರಾ ಅವರನ್ನು ಮಣಿಸಿದರು. ಈ ಮೂಲಕ 20 ವರ್ಷದ ಅಲೆಕ್ಸಾಂಡ್ರಾ, ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪಂದ್ಯವನ್ನು ಗೆದ್ದ ಫಿಲಿಪ್ಪಿನ್ಸ್‌ನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇಂಡೊನೇಷ್ಯಾದ ಜಾನಿಸ್ ಟ್ಜೆನ್ ಅವರು 6-4, 4-6, 6-4ರಿಂದ 24ನೇ ಶ್ರೇಯಾಂಕದ ವೆರೋನಿಕಾ ಕುಡೆರ್ಮೆಟೋವಾ (ರಷ್ಯಾ) ಅವರಿಗೆ ಆಘಾತ ನೀಡಿದರು. 149ನೇ ಕ್ರಮಾಂಕದ ಟ್ಜೆನ್ ಎರಡನೇ ಸುತ್ತಿನಲ್ಲಿ ಬ್ರಿಟನ್‌ನ ಅನುಭವಿ ಎಮ್ಮಾ ರಾಡುಕಾನು ಅವರನ್ನು ಎದುರಿಸಲಿದ್ದಾರೆ. ರಾಡುಕಾನು ಅವರು 6-1, 6-2ರಿಂದ ಜಪಾನ್‌ನ ಎನಾ ಶಿಬಹರಾ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.