ಮೆಲ್ಬರ್ನ್ (ಎಎಫ್‌ಪಿ): ನೊವಾಕ್ ಜೊಕೊವಿಚ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಮತ್ತೆ ಚರ್ಚೆಯ ಕೇಂದ್ರವಾದರು. ಒಂದೆಡೆ ಬಿಸಿಲಿನ ಮಟ್ಟ ಏರುತ್ತಿದ್ದು ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರಿಗೆ ಪಂದ್ಯದ ವೇಳೆ ಆರೈಕೆ ಬೇಕಾಯಿತು. ಇನ್ನೊಂದೆಡೆ, ಪೋಲೆಂಡ್‌ನ ಇಗಾ ಶ್ವಾಂಟೆಕ್ ಲೀಲಾಜಾಲ ಗೆಲುವಿನೊಡನೆ ಎಂಟರ ಘಟ್ಟಕ್ಕೆ ದಾಪುಗಾಲಿಟ್ಟರು.
ಆದರೆ ಅಮೆರಿಕದ ಹದಿಹರೆಯದ ಕ್ವಾಲಿಫೈಯರ್ ಲರ್ನರ್ ಟಿಯೆನ್ ಅವರ ರೋಚಕ ಯಶಸ್ಸಿನ ಓಟಕ್ಕೆ ಇಟಲಿಯ ಲೊರೆಂಝೊ ಸೊನೆಗೊ ವಿರಾಮ ಹಾಕಿದರು. ಉಕ್ರೇನ್‌ನ ಎಲಿನಾ ಸ್ವಿಟೊಲಿನಾ ಅವರು ವೆರೊನಿಕಾ ಕುದೆರ್‌ಮೆಟೊವಾ ಅವರನ್ನು ಸೋಲಿಸಿದ ನಂತರ ರಷ್ಯದ ಆಟಗಾರ್ತಿಗೆ ಹಸ್ತಲಾಘವಕ್ಕೆ ನಿರಾಕರಿಸಿದರು. 28ನೇ ಶ್ರೇಯಾಂಕದ ಸ್ವಿಟೊಲಿನಾ 6–4, 6–1 ರಿಂದ ಗೆದ್ದರು. ಇವೆರಡು ದೇಶಗಳ ನಡುವೆ ಯುದ್ಧ ನಡೆಯುತ್ತಿದೆ.
ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಐದು ಪ್ರಶಸ್ತಿಗಳ ಒಡತಿ ಇಗಾ ಶ್ವಾಂಟೆಕ್ ಸೋಮವಾರ 6–0, 6–1 ರಿಂದ ‘ಲಕ್ಕಿ ಲೂಸರ್’ ಇವಾ ಲಿಸ್ ಅವರನ್ನು ಸದೆ ಬಡಿದು ಎಂಟರ ಘಟ್ಟ ತಲುಪಿದರು.
ಜೊಕೊವಿಚ್ ಅವರು ಭಾನುವಾರ ಸಮಾಧಾನದೊಡನೆ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ. ತಮ್ಮನ್ನು ಮತ್ತು ಅಭಿಮಾನಿಗಳನ್ನು ಚಾನೆಲ್ 9 ವಾಹಿನಿಯ ಕ್ರೀಡಾ ನಿರೂಪಕ ಟೋನಿ ಜೋನ್ಸ್ ಲೇವಡಿ ಮಾಡಿದ್ದಾರೆಂದು ದೂರಿ ಸರ್ಬಿಯಾದ ಆಟಗಾರ ಬಹಿರಂಗ ಕ್ಷಮೆಗೆ ಪಟ್ಟುಹಿಡಿದಿದ್ದರು. ನಾಲ್ಕನೇ ಸುತ್ತಿನ ಪಂದ್ಯದ ನಂತರ ಸಂದರ್ಶನಕ್ಕೂ ನಿರಾಕರಿಸಿದ್ದರು. ಸೋಮವಾರ ನೇರಪ್ರಸಾರದ ವೇಲೆ ಟೋನಿ ಕ್ಷಮೆ ಯಾಚಿಸಿದರು.
ಈ ಕುರಿತು ಜೊಕೊವಿಚ್ ಅವರು ಎಕ್ಸ್‌ನಲ್ಲಿ ಕಿರು ವಿಡಿಯೊ ಬಿಡುಗಡೆ ಮಾಡಿದ್ದು, ಅದು ಸೈಟ್‌ನ ಮಾಲೀಕ ಎಲಾನ್ ಮಸ್ಕ್ ಗಮನವನ್ನೂ ಸೆಳೆದಿದೆ. ‘ಬಹಿರಂಗವಾಗಿ ಕೇಳಿದ ಕ್ಷಮೆಯನ್ನು ನೊವಾಕ್ ಒಪ್ಪಿಕೊಂಡಿದ್ದಾರೆ. ಅವರು ಈಗ ಮುಂದಿನ ಪಂದ್ಯದ ಕಡೆ ಚಿತ್ತ ಹರಿಸಲಿದ್ದಾರೆ’ ಎಂದು ಆಯೋಜಕರು ಹೇಳಿದ್ದಾರೆ.
ಇದೇ ಟೂರ್ನಿಯಲ್ಲಿ 2022ರಲ್ಲಿ ಕೋವಿಡ್ ಲಸಿಕೆ ಪಡೆಯಲು ನಿರಾಕರಿಸಿ ನಿಯಮ ಉಲ್ಲಂಘಿಸಿದ್ದಕ್ಕೆ ಜೊಕೊವಿಚ್ ಅವರನ್ನು ವಾಪಸು ತವರಿಗೆ ಕಳಿಸ ಲಾಗಿತ್ತು. ಗಡಿಪಾರು ಮೊದಲು ತಮಗೆ ನೀಡಿದ್ದ ಆಹಾರದಲ್ಲಿ ವಿಷಕಾರಿ ಅಂಶಗಳಿದ್ದವು ಎಂದು ಅವರು ಆರೋಪಿಸಿದ್ದರು.
ಸಿನ್ನರ್ ಮುನ್ನಡೆ:
ಅಗ್ರಮಾನ್ಯ ಆಟಗಾರ ಸಿನ್ನರ್ 6–3, 3–6, 6–3, 6–2 ರಿಂದ 13ನೇ ಶ್ರೇಯಾಂಕದ ಹೋಲ್ಗರ್ ರೂನ್ (ಡೆನ್ಮಾರ್ಕ್) ಅವರನ್ನು ಸೋಲಿಸಿದರು. ಬಿಸಿಲಿನ ಪ್ರಖರತೆ ಎರಡನೇ ದಿನವೂ ಜೋರಾಗಿದ್ದು, ಸಿನ್ನರ್ ಮೂರನೇ ಸೆಟ್‌ನಲ್ಲಿ ಚಿಕಿತ್ಸೆ ಪಡೆಯಲು ಕೆಲಕಾಲ ಕೋರ್ಟ್‌ನಿಂದಾಚೆ ನಡೆದರು.
ಸ್ಥಳೀಯ ಭರವಸೆ ಅಲೆಕ್ಸ್ ಡಿ ಮಿನೋರ್ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಅಲೆಕ್ಸ್ ಮೈಕೆಲ್ಸನ್ ಅವರನ್ನು 6–0, 7–6 (7–5), 6–3 ರಿಂದ ಸೋಲಿಸಿದರು.
ಸ್ವಿಟೊಲಿನಾ ಅವರ ಪತಿ, 38 ವರ್ಷ ವಯಸ್ಸಿನ ಗೇಲ್ ಮಾನ್ಫಿಲ್ಸ್ 16ರ ಘಟ್ಟದ ಪಂದ್ಯದ ಅರ್ಧದಲ್ಲಿ ನಿವೃತ್ತರಾದರು. ಬಳಲಿದಂತೆ ಕಂಡ ಅವರು 21ನೇ ಶ್ರೇಯಾಂಕದ ಬೆನ್ ಶೆಲ್ಟನ್ ಅವರಿಗೆ ನಾಲ್ಕನೇ ಸೆಟ್‌ನ ಆರಂಭದಲ್ಲಿ ಪಂದ್ಯ ಬಿಟ್ಟುಕೊಟ್ಟರು. ಆಗ ಶೆಲ್ಟನ್ 7–6 (7–3), 6–7 (3–7), 7–6 (7–2), 1–0ಯಿಂದ ಮುಂದಿದ್ದರು.
ಲೊರೆಂಜೊ ಸೊನೆಗೊ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 19 ವರ್ಷ ವಯಸ್ಸಿನ ಟಿಯೆನ್ ಅವರನ್ನು 6–3, 6–2, 3–6, 6–1ರಿಂದ ಹಿಮ್ಮೆಟ್ಟಿಸಿದರು. ಟಿಯೆನ್, ಎರಡನೇ ಸುತ್ತಿನಲ್ಲಿ ಮೆಡ್ವೆಡೇವ್ ಅವರಿಗೆ ಆಘಾತ ನಿಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.