ಬುಕಾರೆಸ್ಟ್ (ರುಮೇನಿಯಾ): ಎರಡು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಸಿಮೊನಾ ಹಲೆಪ್ ಅವರು ಟೆನಿಸ್‌ಗೆ ವಿದಾಯ ಹೇಳಿದ್ದಾರೆ. ತವರಿನಲ್ಲಿ ಮಂಗಳವಾರ ಟ್ರಾನ್ಸಿಲ್ವೇನಿಯ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ.
33 ವರ್ಷ ವಯಸ್ಸಿನ ಹಲೆಪ್, ಉದ್ದೀಪನ ಮದ್ದು ಸೇವನೆ ಕಾರಣ 2022ರಲ್ಲಿ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಆದರೆ ಕ್ರೀಡಾ ನ್ಯಾಯಾಲಯಕ್ಕೆ ಮೊರೆಹೋದ ನಂತರ ಈ ಅವಧಿಯನ್ನು 9 ತಿಂಗಳಿಗೆ ಇಳಿಸಲಾಗಿತ್ತು. ಪುನರಾಗಮನದ ನಂತರ ಅವರನ್ನು ಗಾಯದ ಸಮಸ್ಯೆ ಪದೇ ಪದೇ ಕಾಡಿತು.
2017ರಲ್ಲಿ ಅವರು ಮೊದಲ ಬಾರಿ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೆ ಏರಿದ್ದರು. ಪ್ರಸ್ತುತ 870ನೇ ಸ್ಥಾನದಲ್ಲಿದ್ದಾರೆ. 2019ರಲ್ಲಿ ವಿಂಬಲ್ಡನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿದ್ದರು. 2018ರಲ್ಲಿ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸ್ಲೋನ್ ಸ್ಟೀಫನ್ಸ್ ಅವರನ್ನು ಮಣಿಸಿ ಚಾಂಪಿಯನ್ ಆಗಿದ್ದರು.
ಮೂರು ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ರುಮೇನಿಯಾದ ಆಟಗಾರ್ತಿ ರನ್ನರ್ ಅಪ್ ಆಗಿದ್ದರು. 2018ರಲ್ಲಿ ಆಸ್ಟ್ರೇಲಿಯನ್ ಓಪನ್, 2014 ಮತ್ತು 2017ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಫೈನಲ್ ಆಡಿದ್ದರು.
ಕೊನೆಯ ಬಾರಿ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದು 2022ರ ಅಮೆರಿಕ ಓಪನ್‌ನಲ್ಲಿ. ಆ ಬಾರಿ ಮೊದಲ ಸುತ್ತಿನಲ್ಲಿ ಡೇರಿಯಾ ಸ್ನಿಗುರ್ (ಉಕ್ರೇನ್) ಅವರಿಗೆ ಮೂರು ಸೆಟ್‌ಗಳ ಸೆಣಸಾಟದಲ್ಲಿ ಮಣಿದಿದ್ದರು. ನಂತರ ಅವರು ನಿಷೇಧಿತ ಮದ್ದು ರೊಕ್ಸಾಡುಸ್ಟಾಟ್ ಸೇವನೆ ದೃಢಪಟ್ಟ ಕಾರಣ ನಿಷೇಧ ಶಿಕ್ಷೆಗೆ ಒಳಗಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.