ಕಾರ್ಲೋಸ್ ಅಲ್ಕರಾಜ್
ಲಂಡನ್: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಶುಕ್ರವಾರ 6-3, 6-3, 6-4 ರಲ್ಲಿ ನೇರ ಸೆಟ್‌ಗಳಿಂದ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿ ಮೊದಲ ಬಾರಿ ವಿಂಬಲ್ಡನ್ ಫೈನಲ್ ತಲುಪಿದರು.
ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅವರು ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ.
ಇದಕ್ಕೆ ಮೊದಲು ಎರಡು ಬಾರಿಯ ಚಾಂಪಿಯನ್ ಹಾಗೂ ಎರಡನೇ ಶ್ರೇಯಾಂಕದ ಅಲ್ಕರಾಜ್ ಮೊದಲ ಸೆಮಿಫೈನಲ್‌ನಲ್ಲಿ ಅಮೆರಿಕದ ಆಟಗಾರ, ಐದನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು 6-4, 5-7, 6-3, 7-6 (6) ರಿಂದ ಸೋಲಿಸಿ ಸತತ ಮೂರನೇ ಬಾರಿ ಫೈನಲ್ ತಲುಪಿದ್ದರು.
ಈ ಮೂಲಕ ಅಲ್ಕರಾಜ್ ಅವರು ವಿಂಬಲ್ಡನ್‌ನಲ್ಲಿ ಸತತ 20 ಪಂದ್ಯಗಳನ್ನು ಗೆದ್ದಂತಾಗಿದೆ.
ನಾಲ್ಕು ವಾರಗಳ ಹಿಂದೆ ಫ್ರೆಂಚ್ ಓಪನ್‌ನಲ್ಲಿ ರೋಮಾಂಚಕಾರಿ ಫೈನಲ್ ಆಡಿದ್ದ 22 ವರ್ಷ ವಯಸ್ಸಿನ ಸ್ಪೇನ್ ಆಟಗಾರ ಮತ್ತು 23 ವರ್ಷ ವಯಸ್ಸಿನ ಇಟಲಿಯ ಆಟಗಾರನ ಮಧ್ಯೆ ಮತ್ತೊಂದು ಫೈನಲ್‌ಗೆ ವೇದಿಕೆ ಸಜ್ಜಾಗಿದೆ. ಫ್ರೆಂಚ್ ಓಪನ್‌ನಲ್ಲಿ ಅಲ್ಕರಾಜ್ ಜಯಶಾಲಿಯಾಗಿದ್ದರು.
ಗ್ರ್ಯಾನ್‌ಸ್ಲಾಮ್ ಫೈನಲ್ ಪಂದ್ಯಗಳಲ್ಲಿ ಅಲ್ಕರಾಜ್ 5-0 ಗೆಲುವಿನ ದಾಖಲೆ ಹೊಂದಿದ್ದಾರೆ. ಸಿನ್ನರ್ ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ವಿಜೇತರಾಗಿದ್ದಾರೆ.
‘ಈ ಪಂದ್ಯವೂ ಕಳೆದ ಪಂದ್ಯದಂತೆ (ಫ್ರೆಂಚ್ ಓಪನ್)ನಂತೆ ಉತ್ತಮ ಪಂದ್ಯವಾಗುವ ವಿಶ್ವಾಸವಿದೆ. ಅದಕ್ಕಿಂತ ಉತ್ತಮವಾಗುವುದೇ ತಿಳಿಯದು. ಯಾಕೆಂದರೆ ಅದು ಅಸಂಭವದಂತೆ ಕಾಣುತ್ತದೆ’ ಎಂದು ಸಿನ್ನರ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.
ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಗೆಲ್ಲುವ 38 ವರ್ಷ ವಯಸ್ಸಿನ ಸರ್ಬಿಯಾ ಆಟಗಾರನ ಕನಸು ಈ ಬಾರಿಯೂ ಈಡೇರಲಿಲ್ಲ. ಅವರು ಸೆಮಿಫೈನಲ್ ಪಂದ್ಯದಲ್ಲಿ ಪೂರ್ಣವಾಗಿ ಫಿಟ್ ಆಗಿರುವಂತೆಯೂ ಕಾಣಲಿಲ್ಲ.
ಐದನೇ ಶ್ರೇಯಾಂಕದ ಜೊಕೊವಿಚ್ ಅವರು ಈ ವರ್ಷ ಮೂರೂ ಸ್ಲ್ಯಾಮ್‌ಗಳ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದಂತೆ ಆಗಿದೆ. ಆಸ್ಟ್ರೇಲಿಯಾ ಓಪನ್ ನಾಲ್ಕರ ಘಟ್ಟದಲ್ಲಿ ಮೊಣಕಾಲಿನ ಸ್ನಾಯುರಜ್ಜು ನೋವಿನಿಂದ ಅಲೆಕ್ಸಾಂಡರ್ ಜ್ವರೇವ್ ಎದುರು ಅರ್ಧದಲ್ಲೇ ಹಿಂದೆಸರಿದಿದ್ದರು. ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಸಿನ್ನರ್‌ಗೆ ಮಣಿದಿದ್ದರು.
ಲಂಡನ್: ಮಹಿಳೆಯರ ವಿಭಾಗದಲ್ಲಿ ಸತತ ಎಂಟನೇ ಬಾರಿ ಹೊಸ ಚಾಂಪಿಯನ್ ಸ್ವಾಗತಕ್ಕೆ ವಿಂಬಲ್ಡನ್ ಸಜ್ಜಾಗಿದೆ. ಪೋಲೆಂಡ್‌ನ ಇಗಾ ಶ್ವಾಂಟೆಕ್ ಮತ್ತು ಅಮೆರಿಕದ ಅಮಂಡಾ ಅನಿಸಿಮೋವಾ ಅವರು ಮೊದಲ ಬಾರಿ ಫೈನಲ್ ತಲುಪಿದ್ದು, ವೀನಸ್ ರೋಸ್‌ವಾಟರ್ ಡಿಶ್ (ಮಹಿಳೆಯ ಸಿಂಗಲ್ಸ್ ವಿಜೇತರಿಗೆ ನೀಡುವ ಪ್ರಶಸ್ತಿ) ಟ್ರೋಫಿಯ ಮೇಲೆ ಹೊಸ ಹೆಸರು ಮೂಡಲಿದೆ.
ಎಂಟನೇ ಶ್ರೇಯಾಂಕದ ಇಗಾ ಶ್ವಾಂಟೆಕ್ ಆರನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 13ನೇ ಶ್ರೇಯಾಂಕದ ಅನಿಸಿಮೋವಾ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಫೈನಲ್ ಆಡುತ್ತಿದ್ದಾರೆ.
ನಾಲ್ಕು ಬಾರಿ ಫ್ರೆಂಚ್ ಓಪನ್ ಹಾಗೂ ಒಮ್ಮೆ (2022ರಲ್ಲಿ) ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿರುವ 24 ವರ್ಷ ವಯಸ್ಸಿನ ಶ್ವಾಂಟೆಕ್ ಮೊದಲ ಬಾರಿ ಹುಲ್ಲಿನಂಕಣದ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 13 ತಿಂಗಳಿಂದ ಅವರು ಯಾವುದೇ ಪ್ರಮುಖ ಪ್ರಶಸ್ತಿ ಗೆದ್ದಿಲ್ಲ.
ಅನಿಸಿಮೋವಾ ಈ ವರ್ಷ ಅಮೆರಿಕದ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮ್ಯಾಡಿಸನ್ ಕೀಸ್ ಹಾಗೂ ಫ್ರೆಂಚ್ ಓಪನ್‌ನಲ್ಲಿ ಕೋಕೊ ಗಾಫ್ ವಿಜೇತರಾಗಿದ್ದರು. 2016ರಲ್ಲಿ ವೀನಸ್ ವಿಲಿಯಮ್ಸ್ ನಂತರ ಈ ಪ್ರಶಸ್ತಿ ಗೆದ್ದ ಅಮೆರಿಕದ ಮೊದಲ ಆಟಗಾರ್ತಿ ಎನಿಸುವ ವಿಶ್ವಾಸದಲ್ಲಿ ಅವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.