ADVERTISEMENT

ಅಮೆರಿಕ ಓಪನ್‌: ಮುಖ್ಯ ಸುತ್ತಿಗೆ ಸುಮಿತ್‌ ನಗಾಲ್ ನೇರ ಪ್ರವೇಶ

ಪಿಟಿಐ
Published 5 ಆಗಸ್ಟ್ 2020, 9:34 IST
Last Updated 5 ಆಗಸ್ಟ್ 2020, 9:34 IST
ಸುಮಿತ್‌ ನಗಾಲ್‌–ಎಎಫ್‌ಪಿ ಚಿತ್ರ
ಸುಮಿತ್‌ ನಗಾಲ್‌–ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಭಾರತದ ಯುವ ಟೆನಿಸ್‌ ಪಟು ಸುಮಿತ್ ನಗಾಲ್ ಅವರು‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮುಖ್ಯ ಸುತ್ತಿಗೆ ನೇರ ಅರ್ಹತೆ ಗಳಿಸಿದ್ದಾರೆ. ಟೂರ್ನಿಗೆ ಆಗಸ್ಟ್‌ 31ರಂದು ಚಾಲನೆ ದೊರೆಯಲಿದೆ.

ವಿಶ್ವ ಪುರುಷರ ಸಿಂಗಲ್ಸ್‌ ಕ್ರಮಾಂಕದಲ್ಲಿ 127ನೇ ಸ್ಥಾನದಲ್ಲಿರುವ ನಗಾಲ್‌, 128 ಮಂದಿಯ ಪಟ್ಟಿಯಲ್ಲಿ ಕೊನೆಯವರಾಗಿ ಪ್ರವೇಶ ಗಿಟ್ಟಿಸಿದರು. ಇತ್ತೀಚಿನ ಎಟಿಪಿ ಕ್ರಮಾಂಕಗಳ ಆಧಾರದ ಮೇಲೆ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಟೂರ್ನಿಯ ವೆಬ್‌ಸೈಟ್‌ ತಿಳಿಸಿದೆ.

ಮುಖ್ಯ ಸುತ್ತಿಗೆ ಅರ್ಹತೆ ಪಡೆದ ಭಾರತದ ಏಕೈಕ ಆಟಗಾರ ನಗಾಲ್‌. 132ನೇ ಕ್ರಮಾಂಕದಲ್ಲಿರುವ ಪ್ರಜ್ಞೇಶ್‌ ಗುಣೇಶ್ವರನ್‌ ಅವರಿಗೆ ಈ ಅದೃಷ್ಟ ಲಭಿಸಲಿಲ್ಲ.

ADVERTISEMENT

ಹೋದ ವರ್ಷದ ಟೂರ್ನಿಯ ಎಲ್ಲ ಅರ್ಹತಾ ಸುತ್ತುಗಳಲ್ಲಿ ಗೆದ್ದ ನಗಾಲ್‌ ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ವೊಂದರ ಮುಖ್ಯ ಸುತ್ತಿಗೆ ಪ್ರವೇಶ ಪಡೆದ ಸಾಧನೆ ಮಾಡಿದ್ದರು. ಮುಖ್ಯ ಡ್ರಾನ ಮೊದಲ ಹಣಾಹಣಿಯಲ್ಲಿ 6–4, 1–6, 2–6, 4–6ರಿಂದ ದಿಗ್ಗಜ ಆಟಗಾರ ರೋಜರ್‌ ಫೆಡರರ್‌ ಅವರ ಎದುರು ಸೋತಿದ್ದರು. ಆದರೂ 22 ವರ್ಷದ ನಗಾಲ್‌ ಹೋರಾಟ ಗಮನಸೆಳೆದಿತ್ತು.

ಈ ಬಾರಿಯ ಟೂರ್ನಿಯಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಕಣಕ್ಕಿಳಿಯುತ್ತಿದ್ದಾರೆ. ಫೆಡರರ್‌, ನಡಾಲ್‌ ಅವರಿಲ್ಲದ ಟೂರ್ನಿಯಲ್ಲಿ ಜೊಕೊವಿಚ್‌ ಪ್ರಮುಖ ಆಕರ್ಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.