ADVERTISEMENT

ದಿವಾಳಿಯಾದ ಜರ್ಮನ್ ಟೆನಿಸ್‌ ತಾರೆ| ಸಾಲ ತೀರಿಸಲು ಟ್ರೋಫಿ ಹರಾಜು!

ಏಜೆನ್ಸೀಸ್
Published 25 ಜೂನ್ 2019, 2:46 IST
Last Updated 25 ಜೂನ್ 2019, 2:46 IST
ಬೋರಿಸ್‌ ಬೆಕರ್‌ -ಎಎಫ್‌ಪಿ ಚಿತ್ರ
ಬೋರಿಸ್‌ ಬೆಕರ್‌ -ಎಎಫ್‌ಪಿ ಚಿತ್ರ   

ಲಂಡನ್‌: ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವಜರ್ಮನಿಯ ಟೆನಿಸ್‌ ತಾರೆ ಬೋರಿಸ್‌ ಬೆಕರ್‌ಗೆ ಅದನ್ನು ತೀರಿಸಲು ಈಗ ಟ್ರೋಫಿ, ಸ್ಮರಣಿಕೆಗಳನ್ನು ಹರಾಜಿಗೆ ಹಾಕುವ ಪರಿಸ್ಥಿತಿ ಎದುರಾಗಿದೆ. ಬ್ರಿಟನಿನ ‘ವೈಲ್ಸ್‌ ಹಾರ್ಡಿ’ ಸೋಮವಾರದಿಂದ ಆನ್‌ಲೈನ್‌ನಲ್ಲಿ ಹರಾಜು ಆರಂಭಿಸಲಿದೆ.

ವಿಂಬಲ್ಡನ್‌ ಇತಿಹಾಸದಲ್ಲೇ ಅತ್ಯಂತ ಕಿರಿಯ ಚಾಂಪಿಯನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬೆಕರ್‌, ಮೂರು ಪ್ರಶಸ್ತಿ ಗಳಲ್ಲಿ ಮೊದಲನೆಯದನ್ನು 17ನೇ ವಯಸ್ಸಿನಲ್ಲೇ ಗೆದ್ದುಕೊಂಡಿದ್ದರು. ವಿಪರೀತ ಸಾಲದ ಕಾರಣಕ್ಕೆ 51 ವರ್ಷದ ಬೆಕರ್‌ ಅವರನ್ನು 2017ರಲ್ಲಿ ದಿವಾಳಿ ಎಂದು ಘೋಷಿಸಲಾಗಿತ್ತು.

ಪದಕಗಳು, ಟ್ರೋಫಿಗಳು, ಕಪ್‌ಗಳು, ಛಾಯಾಚಿತ್ರಗಳು ಸೇರಿ ದಂತೆ 82 ವಸ್ತುಗಳನ್ನು ಹರಾಜು ಹಾಕಲಾಗುವುದು. ಹರಾಜು ಜುಲೈ 11ರವರೆಗೆ ನಡೆಯಲಿದೆ ಎಂದು ‘ವೈಲ್ಸ್ ಹಾರ್ಡಿ’ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ADVERTISEMENT

ವಿಂಬಲ್ಡನ್‌ ಟ್ರೋಫಿಯೊಂದನ್ನು ಗೆದ್ದಾಗ ಅವರಿಗೆ ನೀಡಿದ ‘ಚಾಲೆಂಜ್‌ ಕಪ್‌’ನ ಪ್ರತಿಕೃತಿ, ಅತಿ ಕಿರಿಯ ಗ್ರ್ಯಾಂಡ್‌ಸ್ಲಾಮ್‌ ಸಿಂಗಲ್ಸ್‌ ಚಾಂಪಿಯನ್‌ ಆದಾಗ ಪ್ರದಾನ ಮಾಡಲಾಗಿದ್ದ ರೆನ್‌ಷಾ ಕಪ್‌ನ ಮಾದರಿ ಹರಾಜಿಗಿಟ್ಟಿರುವ ವಸ್ತುಗಳಲ್ಲಿ ಒಳಗೊಂಡಿವೆ. 1990ರಲ್ಲಿ ವಿಂಬಲ್ಡನ್‌ ಫೈನಲಿಸ್ಟ್‌ ಆಗಿದ್ದಾಗ (ಸ್ಟೀಫನ್‌ ಎಡ್‌ಬರ್ಗ್‌ ಆ ವರ್ಷ ವಿಜೇತರಾಗಿದ್ದರು) ಪ‍ಡೆದ ಪದಕ, 1989ರಲ್ಲಿ ಇವಾನ್‌ ಲೆಂಡ್ಲ್ ಅವರನ್ನು ಸೋಲಿಸಿ ಅಮೆರಿಕ ಓಪನ್‌ ಗೆದ್ದಾಗ ಪಡೆದ ಕಪ್‌ನ ಬೆಳ್ಳಿಯ ಮಾದರಿಯನ್ನು ಮಾರಾಟಕ್ಕಿಡಲಾಗಿದೆ.

ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರನ ಟ್ರೋಫಿ, ಸ್ಮರಣಿಕೆಗಳನ್ನು ಹರಾಜಿಗಿಟ್ಟರೂ, ಲಕ್ಷಗಟ್ಟಲೆ ಪೌಂಡ್‌ ನಷ್ಟಿರುವ ಸಾಲ ಪೂರ್ಣ ತೀರಿಸಲು ಸಾಲದು ಎನ್ನಲಾಗುತ್ತಿದೆ. ‌

ಮೆಲೊರ್ಕಾದ ಐಷಾರಾಮಿ ಬಂಗಲೆಯಲ್ಲಿ ಕೈಗೊಂಡ ಕೆಲಸಗಳಿಗೆ ಬಾಕಿವುಳಿಸಿಕೊಂಡ ಮೊತ್ತಕ್ಕೆ ಸಂಬಂಧಿಸಿ ಅವರು ಸ್ಪೇನ್‌ನ ನ್ಯಾಯಾಲಯಗಳ ಜೊತೆ ಕಾನೂನು ಗೋಜಲಿನಲ್ಲಿ ಸಿಲುಕಿಕೊಂಡಿದ್ದಾರೆ. ತೆರಿಗೆ ಪಾವತಿಸದಿರುವುದಕ್ಕೆ ಜರ್ಮನಿಯ ನ್ಯಾಯಾಲಯ ಅವರಿಗೆ ಸುಮಾರು ₹ 3.99 ಕೋಟಿ ದಂಡ ವಿಧಿಸಿತ್ತು.

ವೇಗದ ಸರ್ವ್‌ಗಳಿಗಾಗಿ ‘ಬೂಮ್‌ ಬೂಮ್‌’ ಎನ್ನುವ ಹೆಸರು ಪಡೆದಿದ್ದ ಬೆಕರ್‌ ವೃತ್ತಿ ಜೀವನದಲ್ಲಿ ಆರು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 49 ಪ್ರಶಸ್ತಿಗಳ ಜೊತೆಗೆ ಸುಮಾರು ₹ 158 ಕೋಟಿ ಬಹುಮಾನ ಮೊತ್ತವನ್ನು ಅವರು ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.