ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ಎರಡನೇ ಸುತ್ತಿನಲ್ಲಿ ಯೂಕಿಗೆ ಸೋಲು

ಅರ್ಹತಾ ಹಂತದ ಪಂದ್ಯಗಳು

ಪಿಟಿಐ
Published 26 ಆಗಸ್ಟ್ 2022, 10:07 IST
Last Updated 26 ಆಗಸ್ಟ್ 2022, 10:07 IST
ಯೂಕಿ ಭಾಂಭ್ರಿ
ಯೂಕಿ ಭಾಂಭ್ರಿ   

ನ್ಯೂಯಾರ್ಕ್‌: ಅಮೆರಿಕ ಓಪನ್ ಅರ್ಹತಾ ಹಂತದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಯೂಕಿ ಭಾಂಭ್ರಿ ಅವರು ನೇರ ಸೆಟ್‌ಗಳಿಂದ ಬೆಲ್ಜಿಯಂನ ಜಿಜೊ ಬರ್ಗ್ಸ್ ಎದುರು ನಿರಾಸೆ ಅನುಭವಿಸಿದರು.

30 ವರ್ಷದ ಯೂಕಿ 3–6, 2–6ರಿಂದ ಬರ್ಗ್ಸ್ ವಿರುದ್ಧ ಸೋತರು. 155ನೇ ರ‍್ಯಾಂಕಿನ ಬೆಲ್ಜಿಯಂ ಆಟಗಾರನ ಎದುರು 552ನೇ ಕ್ರಮಾಂಕದ ಯೂಕಿ ಆರಂಭದಲ್ಲಿ ಉತ್ತಮ ಆಟವಾಡಿದರು.

ಮೊದಲ ಸೆಟ್‌ನಲ್ಲಿ 3–3ರಿಂದ ಸಮಬಲ ಸಾಧಿಸಿದ್ದ ಯೂಕಿ ಬಳಿಕ ಎಡವಿದರು. ಚುರುಕಿನ ಆಟದಿಂದ 5–3ಕ್ಕೆ ಮುನ್ನಡೆದ ಬರ್ಗ್ಸ್ ಅದೇ ಲಯದೊಂದಿಗೆ ಮುನ್ನಡೆದು ಸೆಟ್‌ ಜಯಿಸಿದರು. ಎರಡನೇ ಸೆಟ್‌ನಲ್ಲಿ ಬೆಲ್ಜಿಯಂ ಆಟಗಾರ ಸಂಪೂರ್ಣ ಪಾರಮ್ಯ ಮೆರೆದರು.

ADVERTISEMENT

ಗಾಯದ ಕಾರಣ ಸುಮಾರು ಮೂರು ವರ್ಷ ಟೆನಿಸ್‌ನಿಂದ ದೂರವುಳಿದಿದ್ದ ಯೂಕಿ, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡಿದ್ದರು. ಅಲ್ಲಿ ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಸೋತಿದ್ದರು.

ಸೋಮವಾರ ಸುಮಿತ್ ನಗಾಲ್ ಮತ್ತು ರಾಮಕುಮಾರ್ ರಾಮನಾಥನ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೋತು ಹೊರಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.