ಯಾನಿಕ್ ಸಿನ್ನರ್ ಆಟದ ವೈಖರಿ ಎಎಫ್‌ಪಿ ಚಿತ್ರ
ನ್ಯೂಯಾರ್ಕ್: ಇಟಲಿಯ ಯಾನಿಕ್ ಸಿನ್ನರ್ ಅವರು ಅಮೆರಿಕ ಓಪನ್ ಟೂರ್ನಿಯ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟರು. ಇಗಾ ಶ್ವಾಂಟೆಕ್ ಅಂತಿಮ 16ರ ಸುತ್ತಿಗೆ ತಲುಪಲು ಪರದಾಡಿದರೆ, ತವರಿನ ಫೇವರಿಟ್ ಕೊಕೊ ಗಾಫ್ ಅವರು ನವೊಮಿ ಒಸಾಕಾ ಜೊತೆ ‘ಬ್ಲಾಕ್‌ಬಸ್ಟರ್’ ಸೆಣಸಾಟಕ್ಕೆ ಅಣಿಯಾದರು.
ಆರ್ಥರ್ ಆ್ಯಷ್ ಕ್ರೀಡಾಂಗಣದಲ್ಲಿ ಶನಿವಾರ ಸೆಟ್ ಹಿನ್ನಡೆಯಿಂದ ಚೇತರಿಸಿದ ಅಗ್ರ ಶ್ರೇಯಾಂಕದ ಸಿನ್ನರ್ 5–7, 6–4, 6–3, 6–3 ರಿಂದ 27ನೇ ಶ್ರೇಯಾಂಕದ ಡೆನಿಸ್ ಶಪೊವಲೋವ್ (ಕೆನಡಾ) ಅವರನ್ನು ಸೋಲಿಸಿದರು. ಸಿನ್ನರ್ ಅವರು ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ (2008 ರಲ್ಲಿ) ಅವರ ನಂತರ ಈ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಂಡ ಮೊದಲ ಆಟಗಾರ ಎನಿಸುವ
ಪ್ರಯತ್ನದಲ್ಲಿದ್ದಾರೆ.
ಸಿನ್ನರ್ ಅವರ ಪ್ರಿಕ್ವಾರ್ಟರ್‌ಫೈನಲ್ ಎದುರಾಳಿ ಕಜಾಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್. 6 ಅಡಿ 5 ಇಂಚು ಎತ್ತರದ ಬುಬ್ಲಿಕ್ ಶನಿವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ 14ನೇ ಶ್ರೇಯಾಂಕದ ಟಾಮಿ ಪಾಲ್ (ಅಮೆರಿಕ) ಅವರನ್ನು 7-6 (7-5), 6-7 (4-7), 6-3, 6–7 (5–7), 6–1 ರಿಂದ ಸೋಲಿಸಿದರು.
ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್, ಏಳು ವರ್ಷಗಳಲ್ಲಿ ಮೊದಲ ಬಾರಿ ಬೇಗ ಹೊರಬಿದ್ದರು. ಸ್ಪೂರ್ತಿಯುತ ಆಟವಾಡಿದ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸಿಮ್ ಮೂರನೇ ಸುತ್ತಿನಲ್ಲಿ 4–6, 7–6 (9–7), 6–4, 6–4 ರಿಂದ ರಷ್ಯಾದ ಆಟಗಾರನನ್ನು ಸೋಲಿಸಿದರು.
ಎಂಟನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್. ಲೊರೆಂಝೊ ಮುಸೆಟ್ಟಿ, 435ನೇ ಕ್ರಮಾಂಕದ ಸ್ವಿಸ್ ಕ್ವಾಲಿಫೈಯರ್ ಲಿಯಾಂಡ್ರೊ ರೀಡಿ 16ರ ಸುತ್ತಿಗೆ ಮುನ್ನಡೆದರು. ಅವರಿಗೆ ಎದುರಾಳಿಗಳು ಗಾಯದ ಕಾರಣ ಅರ್ಧದಲ್ಲೇ ಪಂದ್ಯಬಿಟ್ಟುಕೊಟ್ಟರು.
ಎಂಟನೇ ಶ್ರೇಯಾಂಕದ ಮಿನೋರ್ 6–7 (7–9), 6–3, 6–4, 2–0 ಮುಂದಿದ್ದಾಗ ಜರ್ಮನಿಯ ಡೇನಿಯಲ್ ಅಲ್ಟಮೇರ್ ಪಂದ್ಯ ಬಿಟ್ಟುಕೊಟ್ಟರು. ಲಿಯಾಂಡ್ರೊ ಅವರು ನಾಲ್ಕನೇ ಸುತ್ತಿಗೆ ತಲುಪಿದ ಅತಿ ಕಡಿಮೆ ಶ್ರೇಯಾಂಕದ ಆಟಗಾರ ಎನಿಸಿದ್ದಾರೆ.
ಪ್ರಯಾಸದ ಜಯ: ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಪೋಲೆಂಡ್‌ನ ಶ್ವಾಂಟೆಕ್, 29ನೇ ಶ್ರೇಯಾಂಕದ ಅನ್ನಾ ಕಲಿನ್‌ಸ್ಕಾಯಾ ವಿರುದ್ಧ ಮೊದಲ ಸೆಟ್‌ನಲ್ಲಿ 1–5 ಹಿನ್ನಡೆಯಿಂದ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಟೈಬ್ರೇಕರ್‌ನಲ್ಲಿ ಮೊದಲ ಸೆಟ್ ಗೆದ್ದ ಅವರು ಅಂತಿಮವಾಗಿ 7–6 (7–2), 6–4 ರಲ್ಲಿ ರಷ್ಯಾ ಆಟಗಾರ್ತಿಯೆದುರು ಜಯಶಾಲಿಯಾದರು.
ಅವರು 16ರ ಸುತ್ತಿನಲ್ಲಿ ಎಕಟೆರಿನಾ ಅಲೆಕ್ಸಾಂಡ್ರೋವಾ ಅವರನ್ನು ಎದುರಿಸಲಿದ್ದಾರೆ. ರಷ್ಯಾದ ಅಲೆಕ್ಸಾಂಡ್ರೋವಾ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ನಾಲ್ಕನೇ ಸುತ್ತನ್ನು ತಲುಪಿದರು. ಅಮೋಘ ಲಯಲ್ಲಿರುವ ಅವರು 6–0, 6–1 ರಿಂದ ಲಾರಾ ಸೀಗೆಮುಂಡ್ ಅವರನ್ನು ಸೋಲಿಸಿದರು.
ಅಮೆರಿಕದ ಕೊಕೊ ಗಾಫ್ ಶಿಸ್ತುಬದ್ಧ ಆಟವಾಡಿ 6–3, 6–1ರಿಂದ 28ನೇ ಶ್ರೇಯಾಂಕದ ಮೆಗ್ಧಲಿನಾ ಫ್ರೆಚ್ (ಪೋಲೆಂಡ್) ಅವರನ್ನು ಹಿಮ್ಮೆಟ್ಟಿಸಿದರು. ವಿಂಬಲ್ಡನ್ ರನ್ನರ್ ಅಪ್ ಅಮಂಡಾ ಅನಿಸಿಮೋವಾ 6–4, 4–6, 6–2ರಿಂದ ರುಮೇನಿಯಾದ ಜಾಕ್ವೆಲಿನ್ ಕ್ರಿಸ್ಟಿಯನ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.