
ಬೆಂಗಳೂರು: ಉದಯೋನ್ಮುಖ ಆಟಗಾರ್ತಿ ವೈಷ್ಣವಿ ಅಡ್ಕರ್ ಅವರು ಕಲಬುರಗಿಯಲ್ಲಿ ಮಾರ್ಚ್ 1ರಿಂದ 8ರ ವರೆಗೆ ನಡೆಯಲಿರುವ ಐಟಿಎಫ್ ಡಬ್ಲ್ಯು35 ಟೆನಿಸ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.
ಪುಣೆಯ 21 ವರ್ಷ ವಯಸ್ಸಿನ ವೈಷ್ಣವಿ ಅವರು ಬೆಂಗಳೂರಿನಲ್ಲಿ ಭಾನುವಾರ ಮುಕ್ತಾಯಗೊಂಡ ಐಟಿಎಫ್ ಡಬ್ಲ್ಯು100 ಟೂರ್ನಿಯಲ್ಲಿ ರನ್ನರ್ಸ್‌ಅಪ್ ಆಗಿದ್ದರು. ಡಬ್ಲ್ಯು100 ದರ್ಜೆಯ ಟೆನಿಸ್ ಟೂರ್ನಿಯಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದರು.
ಅನುಭವಿ ಆಟಗಾರ್ತಿ ಶ್ರೀವಲ್ಲಿ ರಶ್ಮಿಕಾ ಭಮಿಟಿಪಾಟಿ, ಅಂಕಿತಾ ರೈನಾ, ಆಕಾಂಕ್ಷಾ ದಿಲೀಪ್ ನಿಟ್ಟುರೆ, ಶ್ರುತಿ ಅಹ್ಲಾವತ್ ಹಾಗೂ ಸೋನಾಲಿ ಪಾಟೀಲ್ ಅವರು ಸಿಂಗಲ್ಸ್ ಮುಖ್ಯ ಸುತ್ತಿನಲ್ಲಿರುವ ಭಾರತದ ಇತರ ಆಟಗಾರ್ತಿಯರು.
ವಿಶ್ವ ಕ್ರಮಾಂಕದಲ್ಲಿ 443ನೇ ಸ್ಥಾನದಲ್ಲಿರುವ, ಥಾಯ್ಲೆಂಡ್‌ನ ಅಚಿಸಾ ಚಾಂಟಾ ಹಾಗೂ ನೆದರ್ಲೆಂಡ್ಸ್‌ನ ಜಾಸ್ಮಿನ್ ಗಿಂಬ್ರೆರೆ (453) ಕ್ರಮವಾಗಿ ಮೊದಲ ಎರಡು ಶ್ರೇಯಾಂಕ ಪಡೆದಿದ್ದಾರೆ. ಶ್ರೀವಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.