ADVERTISEMENT

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ: ನಡಾಲ್‌, ಜೊಕೊವಿಚ್ ‘ಫೇವರಿಟ್’

ಸೆರೆನಾ ವಿಲಿಯಮ್ಸ್‌ ಕಣಕ್ಕೆ

ಏಜೆನ್ಸೀಸ್
Published 27 ಜೂನ್ 2022, 5:09 IST
Last Updated 27 ಜೂನ್ 2022, 5:09 IST
   

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿ ಸೋಮವಾರ ಆರಂಭವಾಗಲಿದ್ದು, ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನೊವಾಕ್‌ ಜೊಕೊವಿಚ್‌ ಮತ್ತು ರಫೆಲ್‌ ನಡಾಲ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಅಗ್ರಶ್ರೇಯಾಂಕ ಹೊಂದಿರುವ ಸರ್ಬಿಯದ ಜೊಕೊವಿಚ್‌, ಇಲ್ಲಿ ಏಳನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಬಾರಿಯ ಫೈನಲ್‌ನಲ್ಲಿ ಅವರು ಇಟಲಿಯ ಮಾಟಿಯೊ ಬೆರೆಟಿನಿ ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಫ್ರೆಂಚ್‌ ಓಪನ್‌ ಗೆದ್ದಿರುವ ನಡಾಲ್‌, ಇಲ್ಲಿ ಪ್ರಶಸ್ತಿ ಗೆದ್ದಿರುವುದು ಎರಡು ಸಲ ಮಾತ್ರ. 2008 ರಲ್ಲಿ ಚೊಚ್ಚಲ ಕಿರೀಟ ಜಯಿಸಿದ್ದ ಅವರು 2010 ರಲ್ಲಿ ಕೊನೆಯದಾಗಿ ಗೆದ್ದಿದ್ದರು. ಒಂದು ದಶಕದ ಬಿಡುವಿನ ಬಳಿಕ ಇಲ್ಲಿ ಚಾಂಪಿಯನ್‌ ಅಗುವುದು ಅವರ ಗುರಿ.

ADVERTISEMENT

ವೃತ್ತಿಜೀವನದಲ್ಲಿ 20 ಗ್ರ್ಯಾನ್‌ಸ್ಲಾಮ್‌ ಗೆದ್ದಿರುವ ಜೊಕೊವಿಚ್‌ ಅಥವಾ ದಾಖಲೆಯ 22 ಗ್ರ್ಯಾನ್‌ಸ್ಲಾಮ್‌ ಜಯಿಸಿರುವ ನಡಾಲ್‌ ಎಡವಿದರೆ, ಇಲ್ಲಿ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿರುವ ಇನ್ನೊಬ್ಬ ಆಟಗಾರನೆಂದರೆ ಮಾಟಿಯೊ ಬೆರೆಟಿನಿ. ಹುಲ್ಲುಹಾಸಿನ ಅಂಕಣದಲ್ಲಿ ನಡೆದ ಸತತ ಎರಡು ಟೂರ್ನಿಗಳಲ್ಲಿ (ಸ್ಟಟ್‌ಗರ್ಟ್‌ ಮತ್ತು ಕ್ವೀನ್ಸ್‌ ಕ್ಲಬ್‌) ಪ್ರಶಸ್ತಿ ಗೆದ್ದು ಅವರು ಇಲ್ಲಿಗೆ ಬಂದಿದ್ದಾರೆ.

ಫೆಡರರ್‌ ಗೈರು: ಪುರುಷರ ಸಿಂಗಲ್ಸ್‌ನಲ್ಲಿ ಇಲ್ಲಿ ಅತಿಹೆಚ್ಚು ಸಲ ಪ್ರಶಸ್ತಿ ಗೆದ್ದಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್‌ ಈ ಬಾರಿ ಆಡುತ್ತಿಲ್ಲ. 1999 ರಲ್ಲಿ ಅವರು ಮೊದಲ ಬಾರಿ ಆಡಿದ್ದರು. ಅಂದಿನಿಂದ ಪ್ರತಿ ಟೂರ್ನಿಯಲ್ಲೂ ಪಾಲ್ಗೊಂಡಿದ್ದರು. ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಅವರ ಅನುಪಸ್ಥಿತಿ ಕಾಡಲಿದೆ.

ಸೆರೆನಾ ಆಕರ್ಷಣೆ: ಅಮೆರಿಕದ ಸೆರೆನಾ ವಿಲಿಯಮ್ಸ್‌ ಆಡಲು ಸಜ್ಜಾಗಿರುವುದು ಟೆನಿಸ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ವಿಂಬಲ್ಡನ್‌ ಮೊದಲ ಸುತ್ತಿನಲ್ಲಿ ಗಾಯಗೊಂಡು ಹೊರನಡೆದಿದ್ದ ಅವರು 12 ತಿಂಗಳಲ್ಲಿ ಯಾವುದೇ ಟೂರ್ನಿಯಲ್ಲೂ ಆಡಿಲ್ಲ. ಇದರಿಂದ ರ‍್ಯಾಂಕಿಂಗ್‌ನಲ್ಲಿ 1,204ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.