ADVERTISEMENT

ವಿಂಬಲ್ಡನ್‌ ಟೆನಿಸ್‌: ಸಬಲೆಂಕಾ, ಕ್ವಿಟೋವಾ ಮುನ್ನಡೆ, ಮೂರನೇ ಸುತ್ತಿಗೆ ಅಲ್ಕರಾಜ್

ರಾಯಿಟರ್ಸ್
Published 7 ಜುಲೈ 2023, 23:30 IST
Last Updated 7 ಜುಲೈ 2023, 23:30 IST
ಗೆಲುವಿನ ಸಂಭ್ರಮದಲ್ಲಿ ಅರಿನಾ ಸಬಲೆಂಕಾ –ಎಎಫ್‌ಪಿ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಅರಿನಾ ಸಬಲೆಂಕಾ –ಎಎಫ್‌ಪಿ ಚಿತ್ರ   

ಲಂಡನ್‌: ವಿಶ್ವದ ಅಗ್ರಮಾನ್ಯ ಆಟಗಾರ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ನೇರ ಸೆಟ್‌ಗಳ ಗೆಲುವಿನೊಂದಿಗೆ ಮೂರನೇ ಸುತ್ತಿಗೆ ಮುನ್ನಡೆದರು.

ಶುಕ್ರವಾರ ನಡೆದ ಪಂದ್ಯದಲ್ಲಿ ವೇಗದ ಸರ್ವ್‌ ಮತ್ತು ಪರಿಣಾಮಕಾರಿ ರಿಟರ್ನ್‌ಗಳ ಮೂಲಕ ಮಿಂಚಿದ ಅಲ್ಕರಾಜ್‌ 6–4, 7–6, 6–3 ರಿಂದ ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲೆರ್‌ ವಿರುದ್ಧ ಗೆದ್ದರು.

ಮೊದಲ ಸೆಟ್‌ನಲ್ಲಿ ಒಂದು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಅಲ್ಕರಾಜ್‌ 6–4 ರಲ್ಲಿ ಜಯಿಸಿದರು. ಎರಡನೇ ಸೆಟ್‌ನ್ನು ಟೈಬ್ರೇಕರ್‌ನಲ್ಲಿ ಗೆದ್ದು ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದರು. ಮೂರನೇ ಸೆಟ್‌ನ ಎಂಟನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ, ಮುಂದಿನ ಗೇಮ್‌ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು. ಪಂದ್ಯದಲ್ಲಿ 41 ಸ್ವಯಂಕೃತ ತಪ್ಪುಗಳನ್ನು ಮಾಡಿದರೂ ಅಲ್ಕರಾಜ್‌, ಎದುರಾಳಿಗೆ ಒಂದೂ ಸೆಟ್‌ ಬಿಟ್ಟುಕೊಡಲಿಲ್ಲ.

ADVERTISEMENT

ಮೂರನೇ ಶ್ರೇಯಾಂಕದ ಆಟಗಾರ ರಷ್ಯಾದ ಡೇನಿಯಲ್‌ ಮೆಡ್ವೆಡೇವ್ ಮತ್ತು ಆರನೇ ಶ್ರೇಯಾಂಕದ ಆಟಗಾರ ಡೆನ್ಮಾರ್ಕ್‌ನ ಹೋಲ್ಗರ್‌ ರೂನ್‌ ಅವರೂ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು.

ಮೆಡ್ವೆಡೇವ್ 6-3, 6-3, 7-6 ರಿಂದ ಫ್ರಾನ್ಸ್‌ನ ಅಡ್ರಿಯಾನ್‌ ಮೊನಾರಿನೊ ವಿರುದ್ಧ ಗೆದ್ದರೆ, ರೂನ್‌ 6–3, 7–6, 6–4 ರಲ್ಲಿ ಸ್ಪೇನ್‌ನ ಕಾರ್ಬಲೆಸ್‌ ಬಯೆನಾ ಅವರನ್ನು ಸೋಲಿಸಿದರು.

ಸಬಲೆಂಕಾ, ಕ್ವಿಟೋವಾ ಮುನ್ನಡೆ: ಬೆಲಾರಸ್‌ನ ಅರಿನಾ ಸಬಲೆಂಕಾ ಮತ್ತು ಜೆಕ್‌ ರಿಪಬ್ಲಿಕ್‌ನ ಪೆಟ್ರಾ ಕ್ವಿಟೊವಾ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿಗೆ ಮುನ್ನಡೆದರು.

ಮೊದಲ ಸೆಟ್‌ ಸೋತರೂ ತಿರುಗೇಟು ನೀಡಿದ ಎರಡನೇ ಶ್ರೇಯಾಂಕದ ಆಟಗಾರ್ತಿ ಸಬಲೆಂಕಾ 2-6, 7-5, 6-2 ರಿಂದ ಫ್ರಾನ್ಸ್‌ನ ವರ್ವರಾ ಗ್ರಶೇವಾ ಅವರನ್ನು ಮಣಿಸಿದರು. ಈ ಹೋರಾಟ ಒಂದು ಗಂಟೆ 58 ನಿಮಿಷ ನಡೆಯಿತು.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಸಬಲೆಂಕಾ ನಿರ್ಣಾಯಕ ಸೆಟ್‌ನಲ್ಲಿ ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 5–2 ರಲ್ಲಿ ಮೇಲುಗೈ ಸಾಧಿಸಿದರು. ಆ ಬಳಿಕ ಏಸ್‌ ಸಿಡಿಸಿ ಪಂದ್ಯ ಗೆದ್ದರು. ಮುಂದಿನ ಸುತ್ತಿನಲ್ಲಿ ಅವರು ರಷ್ಯಾದ ಅನಾ ಬ್ಲಿಂಕೊವಾ ವಿರುದ್ಧ ಪೈಪೋಟಿ ನಡೆಸುವರು.

ಬ್ಲಿಂಕೋವಾ ಅವರು ಎರಡನೇ ಸುತ್ತಿನಲ್ಲಿ 7–5, 6–3 ರಲ್ಲಿ ರೊಮೇನಿಯದ ಐರಿನಾ ಕ್ಯಾಮಿಲಿಯಾ ಬೆಗು ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಅಮೆರಿಕದ ಮ್ಯಾಡಿಸನ್‌ ಕೀಸ್ 7–5, 6–3 ರಿಂದ ಸ್ವಿಟ್ಜರ್‌ಲೆಂಡ್‌ನ ವಿಕ್ಟೋರಿಯಾ ಗೊಲುಬಿಚ್‌ ವಿರುದ್ಧ; ಏಕ್ತರೀನಾ ಅಲೆಕ್ಸಾಂಡ್ರೊವಾ 6–7, 7–6, 7–6 ರಿಂದ ಅಮೆರಿಕದ ಮ್ಯಾಡಿಸನ್ ಬ್ರೆಂಗ್ಲ್‌ ವಿರುದ್ಧ; ಉಕ್ರೇನ್‌ನ ಮಾರ್ಟಾ ಕೊತ್ಸುಕ್ 6–2, 1–0 ರಿಂದ ಪೌಲಾ ಬಡೊಸಾ ವಿರುದ್ಧ ಗೆದ್ದರು.

ಪ್ರಧಾನ ಸುತ್ತಿಗೆ ಮಾನಸ್

ಭಾರತದ ಮಾನಸ್‌ ಧಾಮನೆ ಅವರು ಬಾಲಕರ ಸಿಂಗಲ್ಸ್‌ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಿದರು. ಅರ್ಹತಾ ಹಂತದ ಎರಡನೇ ಸುತ್ತಿನಲ್ಲಿ ಅವರು 6–2 6–7 10–8 ರಲ್ಲಿ ಟರ್ಕಿಯ ಅತಾಕನ್ ಕರಹಾನ್‌ ಅವರನ್ನು ಮಣಿಸಿದರು. ಭಾರತದ ಇನ್ನೊಬ್ಬ ಆಟಗಾರ ಆರ್ಯನ್‌ ಶಾ ಎರಡನೇ ಸುತ್ತಿನಲ್ಲಿ ಸೋತು ಪ್ರಧಾನ ಹಂತಕ್ಕೇರಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.