ADVERTISEMENT

ವಿಂಬಲ್ಡನ್ ಟೆನಿಸ್: ಕ್ವಿಟೊವಾ, ಅಲ್ಕರಾಜ್‌ ಮುನ್ನಡೆ

ಎಎಫ್‌ಪಿ
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಕಾರ್ಲೋಸ್ ಅಲ್ಕರಾಜ್ ಜಯದ ಸಂಭ್ರಮ 
ಕಾರ್ಲೋಸ್ ಅಲ್ಕರಾಜ್ ಜಯದ ಸಂಭ್ರಮ     –ಎಎಫ್‌ಪಿ ಚಿತ್ರ

ಲಂಡನ್: ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ಪೆಟ್ರಾ ಕ್ವಿಟೊವಾ ಈ ಬಾರಿಯೂ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಪುರುಷರ ವಿಭಾಗದಲ್ಲಿ ಅಗ್ರಶ್ರೇಯಾಂಕದ ಆಟಗಾರ ಕಾರ್ಲೊಸ್ ಅಲ್ಕರಾಜ್ ಮುನ್ನಡೆ ಸಾಧಿಸಿದ್ದಾರೆ.

ಗ್ರಾಸ್‌ ಕೋರ್ಟ್‌ನಲ್ಲಿ  ನಡೆದ ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕ್ವಿಟೊವಾ 6–3, 7–5ರಿಂದ ಸರ್ಬಿಯಾದ ನತಾಲಿಯಾ ಸ್ಟಿವಾನೊವಿಚ್ ಎದುರು ಗೆದ್ದರು.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ 2014ರಲ್ಲಿ ಎರಡನೇ ಬಾರಿ  ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದರು. ಅದರ ನಂತರದ ಟೂರ್ನಿಗಳಲ್ಲಿ ಅವರು ಮೂರನೇ ಸುತ್ತು ದಾಟಲು ಪರದಾಡಿದ್ದಾರೆ.

ADVERTISEMENT

ಒಂಬತ್ತನೇ ಶ್ರೇಯಾಂಕದ ಕ್ವಿಟೊವಾ ಹೋದ ತಿಂಗಳು ಬರ್ಲಿನ್‌ನಲ್ಲಿ ಗ್ರಾಸ್‌ಕೋರ್ಟ್ ನಲ್ಲಿ ನಡೆದಿದ್ದ ಡಬ್ಲ್ಯುಟಿಎ ಟೂರ್ನಿಯಲ್ಲಿ ಗೆದ್ದ ನಂತರ ಇಲ್ಲಿಗೆ ಬಂದಿದ್ದಾರೆ. ಈ ಪಂದ್ಯದಲ್ಲಿ ಸರ್ಬಿಯಾದ ಅಟಗಾರ್ತಿ ಮೊದಲ ಸೆಟ್‌ನಲ್ಲಿ ಹೆಚ್ಚು ಪ್ರತಿರೋಧ ಕಂಡುಬರಲಿಲ್ಲ. ಆದರೆ ಎರಡನೇ ಸೆಟ್‌ ಟೈಬ್ರೇಕರ್‌ ಆಯಿತು. ಅದರಲ್ಲಿಯೂ ಕ್ವಿಟೊವಾ ಮೇಲುಗೈ ಸಾಧಿಸಿದರು.

ಅಲ್ಕರಾಜ್‌ಗೆ ಮುನ್ನಡೆ: ಸ್ಪೇನ್ ದೇಶದ ಕಾರ್ಲೋಸ್ ಅಲ್ಕರಾಜ್ ಪುರುಷರ ಸಿಂಗಲ್ಸ್‌ನಲ್ಲಿ ಜಯದ ಓಟ ಮುಂದುವರಿಸಿದ್ದಾರೆ.

ಮೂರನೇ ಸುತ್ತಿನಲ್ಲಿ ಅಲ್ಕರಾಜ್ 6–3, 6–7, 6–3, 7–5ರಿಂದ ಚಿಲಿಯ ನಿಕೊಲಸ್ ಜೆರಿ ವಿರುದ್ಧ ಗೆದ್ದರು.

ಅಗ್ರಶ್ರೇಯಾಂಕದ ಆಟಗಾರ ಅಲ್ಕರಾಜ್ ಅವರಿಗೆ ಎರಡು ಮತ್ತು ನಾಲ್ಕನೇ ಸೆಟ್‌ನಲ್ಲಿ 28ನೇ ಶ್ರೇಯಾಂಕದ ನಿಕೊಲಸ್ ಕಠಿಣ ಪೈಪೋಟಿಯೊಡ್ಡಿದರು. ಇದರಿಂದಾಗಿ ಅಲ್ಕರಾಜ್ ಎರಡನೇ ಸೆಟ್‌ನಲ್ಲಿ ನಿರಾಶೆ ಅನುಭವಿಸಿದರು. ಆದರೆ ನಾಲ್ಕನೇ ಸೆಟ್‌ನಲ್ಲಿ ಟೈಬ್ರೇಕರ್‌ನಲ್ಲಿ ಜಯಸಾಧಿಸುವಲ್ಲಿ ಅಲ್ಕರಾಜ್ ಯಶಸ್ವಿಯಾದರು.

ಮೂರನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ರಷ್ಯಾದ   ಡೇನಿಯಲ್ ಮೆಡ್ವೆಡೇವ್  ಮೇಲುಗೈ ಸಾಧಿಸಿದರು. ಈ ಪಂದ್ಯದಲ್ಲಿ ಅವರು 4–6, 6–3, 6–4, 6–4ರಿಂದ ಫ್ರಾನ್ಸ್‌ನ ಆಡ್ರಿನೊ ಮನಾನಿನೊ ವಿರುದ್ಧ ಜಯಭೇರಿ ಬಾರಿಸಿದರು.

ಮಳೆಯಿಂದ ಅಡ್ಡಿ: ವಿಂಬಲ್ಡನ್ ಟೂರ್ನಿಯ ಆರನೇ ದಿನದಾಟಕ್ಕೆ ಮಳೆಯಿಂದಾಗಿ ಅಡಚಣೆಯಾಯಿತು.

ಶನಿವಾರ ಕೇವಲ ಒಂದು ಪಂದ್ಯ ಮಾತ್ರ ನಡೆಯಿತು.  ಮೂರನೇ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್‌ನ 13ನೇ ಶ್ರೇಯಾಂಕದ ಹದಾದ್ ಮಯಾ 6–2, 6–2ರಿಂದ ಸೊರಾನಾ ಕ್ರಿಸ್ಟಾ ವಿರುದ್ಧ ಜಯಿಸಿದರು. ನಂತರದ ಪಂದ್ಯಗಳು ನಡೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.