ADVERTISEMENT

Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

ಏಜೆನ್ಸೀಸ್
Published 13 ಜುಲೈ 2025, 0:27 IST
Last Updated 13 ಜುಲೈ 2025, 0:27 IST
ಅಲ್ಕರಾಜ್‌
ಅಲ್ಕರಾಜ್‌    

ಲಂಡನ್‌ : ಪುರುಷರ ಟೆನಿಸ್‌ನಲ್ಲಿ ಉತ್ತುಂಗಕ್ಕೇರಲು ಇಬ್ಬರು ಯುವ ತಾರೆಗಳ ಪೈಪೋಟಿ ತೀವ್ರಗೊಂಡಿದೆ. ಈ ಪೈಪೋಟಿಯ ಮುಂದುವರಿದ ಭಾಗ ಎನ್ನುವಂತೆ ಭಾನುವಾರ ವಿಂಬಲ್ಡನ್‌ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕಾರ್ಲೋಸ್‌ ಅಲ್ಕರಾಜ್ ಅವರು ಯಾನಿಕ್‌ ಸಿನ್ನರ್ ಅವರನ್ನು ಎದುರಿಸಲಿದ್ದಾರೆ.

ಕೊನೆಯ ಎಂಟು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಲ್ಲಿ ಏಳನ್ನು ಇವರಿಬ್ಬರು ಹಂಚಿಕೊಂಡಿದ್ದಾರೆ. 2024ರ ಬಳಿಕ ತಲಾ ಮೂರು ಪ್ರಮುಖ ಟೂರ್ನಿಗಳಲ್ಲಿ ಇವರಿಬ್ಬರು ಚಾಂಪಿಯನ್ ಆಗಿದ್ದಾರೆ.

ಟೆನಿಸ್‌ನ ‘ಬಿಗ್‌ ತ್ರೀ’ ಎನಿಸಿದ್ದ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌, ಸ್ಪೇನ್‌ನ ರಫೆಲ್‌ ನಡಾಲ್ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರ ಪ್ರಾಬಲ್ಯದ ಯುಗ ಅಂತ್ಯಗೊಂಡಿದೆ.

ADVERTISEMENT

ಸ್ಪೇನ್‌ನ ಅಲ್ಕರಾಜ್‌ ತಮ್ಮ ಬೆಡಗಿನ ಆಟದಿಂದ ಸೆಂಟರ್‌ ಕೋರ್ಟ್‌ ಪ್ರೇಕ್ಷಕರ ಹೃದಯ ಗೆದ್ದು ಶೋಮ್ಯಾನ್ ಎನಿಸಿದ್ದಾರೆ. ಇಟಲಿಯ ಸಿನ್ನರ್ ಅವರದ್ದು ಜೊಕೊವಿಚ್‌ ತದ್ರೂಪದ ಆಟ. ತೀಕ್ಷ್ಣ ಹೊಡೆತಗಳ ಜೊತೆ ಮೇಲುಗೈ ಅವಕಾಶಗಳನ್ನು ಅವರು ತಪ್ಪಿಸಿಕೊಳ್ಳುವುದೇ ವಿರಳ.

ಎರಡು ಬಾರಿಯ ಚಾಂಪಿಯನ್, 22 ವರ್ಷದ ಅಲ್ಕರಾಜ್ ಅವರು ಮೇಲ್ನೋಟಕ್ಕೆ ಭಾನುವಾರ ಪ್ರಶಸ್ತಿಗೆ ಫೇವರಿಟ್‌ ಎನಿಸಿದ್ದಾರೆ. ಸ್ಪೇನ್‌ನ ಆಟಗಾರ, ಇಟಲಿಯ ಆಟಗಾರನ ವಿರುದ್ಧ 12 ಮುಖಾಮುಖಿಗಳಲ್ಲಿ ಕೊನೆಯ ಐದರಲ್ಲಿ ಸೇರಿದಂತೆ ಎಂಟರಲ್ಲಿ ಜಯಗಳಿಸಿದ್ದಾರೆ. ಅಲ್ಕರಾಜ್‌ ಐದು ಗ್ರ್ಯಾನ್‌ಸ್ಲಾಮ್ ಮತ್ತು 23 ವರ್ಷದ ಸಿನ್ನರ್ ಮೂರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.