ADVERTISEMENT

Wimbledon: ಜೊಕೊವಿಚ್‌, ಅಲ್ಕರಾಜ್‌ ಮುನ್ನಡೆ

ವಿಂಬಲ್ಡನ್‌ ಟೆನಿಸ್‌: ಹಾಲಿ ರನ್ನರ್ಸ್‌ ಅಪ್‌ ಪಯೋಲಿನಿಗೆ ಆಘಾತ

ಏಜೆನ್ಸೀಸ್
Published 3 ಜುಲೈ 2025, 16:07 IST
Last Updated 3 ಜುಲೈ 2025, 16:07 IST
<div class="paragraphs"><p>ನೊವಾಕ್‌&nbsp;ಜೊಕೊವಿಚ್‌</p></div>

ನೊವಾಕ್‌ ಜೊಕೊವಿಚ್‌

   

ಚಿತ್ರ ಕೃಪೆ: @Wimbledon

ವಿಂಬಲ್ಡನ್‌: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಕಿರೀಟದ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ತಾರೆ ನೊವಾಕ್‌ ಜೊಕೊವಿಚ್‌ ಅವರು ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದರು. ಹಾಲಿ ಚಾಂಪಿಯನ್‌, ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಗೆಲುವಿನ ಓಟ ಮುಂದುವರಿಸಿದರು. 

ADVERTISEMENT

ಮತ್ತೊಂದೆಡೆ ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಮತ್ತಷ್ಟು ಶ್ರೇಯಾಂಕಿತರು ಗಂಟುಮೂಟೆ ಕಟ್ಟಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ರನ್ನರ್‌ ಅಪ್‌, ನಾಲ್ಕನೇ ಶ್ರೇಯಾಂಕದ ಜಾಸ್ಮಿನ್ ಪಯೋಲಿನಿ (ಇಟಲಿ) ಆಘಾತ ಅನುಭವಿಸಿದರು. 12ನೇ ಶ್ರೇಯಾಂಕದ ಡಯಾನಾ ಶ್ನೈಡರ್ (ರಷ್ಯಾ), 21ನೇ ಶ್ರೇಯಾಂಕದ ಬೀಟ್ರಿಜ್ ಹದ್ದದ್ ಮಾಯಾ (ಬ್ರೆಜಿಲ್‌), 22ನೇ ಶ್ರೇಯಾಂಕದ ಡೊನ್ನಾ ವೆಕಿಕ್ (ಕ್ರೋವೇಷ್ಯಾ), 29ನೇ ಶ್ರೇಯಾಂಕದ ಲೇಲಾ ಫೆರ್ನಾಂಡಿಸ್ (ಕೆನಡಾ) ಎರಡನೇ ಸುತ್ತಿನಲ್ಲಿ ಹೊರಬಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ 13 ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ 10 ಸೇರಿದಂತೆ ಒಟ್ಟು 23 ಶ್ರೇಯಾಂಕಿತರು ನಿರ್ಗಮಿಸಿದಂತಾಗಿದೆ. ಇಷ್ಟೊಂದು ಶ್ರೇಯಾಂಕಿತರು ಮೊದಲೆರಡು ಸುತ್ತಿನಲ್ಲೇ ಆಘಾತ ಅನುಭವಿಸಿರುವುದು ಕಳೆದ 25 ವರ್ಷಗಳ ಯಾವುದೇ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ದಾಖಲೆಯಾಗಿದೆ. 

ಮೊದಲ ಐದು ಶ್ರೇಯಾಂಕಿತ ಆಟಗಾರ್ತಿಯರ ಪೈಕಿ ಅರಿನಾ ಸಬಲೆಂಕಾ (ಬೆಲರೂಸ್‌) ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಮೂರು ಗ್ರ್ಯಾನ್‌ಸ್ಲಾಮ್‌ ಕಿರೀಟ ಗೆದ್ದಿರುವ ಅಗ್ರ ಶ್ರೇಯಾಂಕದ ಸಬಲೆಂಕಾ ಇಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿದ್ದಾರೆ. ಎರಡನೇ ಶ್ರೇಯಾಂಕದ ಕೊಕೊ ಗಾಫ್‌ (ಅಮೆರಿಕ), ಮೂರನೇ ಶ್ರೇಯಾಂಕದ ಜೆಸಿಕಾ ಪೆಗುಲಾ (ಅಮೆರಿಕ) ಮತ್ತು ಐದನೇ ಶ್ರೇಯಾಂಕದ ಝೆಂಗ್‌ ಕ್ವಿನ್ವೆನ್‌ (ಚೀನಾ) ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು. 

ಜೊಕೊವಿಚ್‌ಗೆ ಗೆಲುವು: ಏಳು ಬಾರಿಯ ಚಾಂಪಿಯನ್‌ ಜೊಕೊವಿಚ್‌ 6-3, 6-2, 6-0ರ ನೇರ ಸೆಟ್‌ಗಳಿಂದ ಆತಿಥೇಯ ದೇಶದ ವೈಲ್ಡ್‌ಕಾರ್ಡ್ ಸ್ಪರ್ಧಿ ಡಾನ್ ಇವಾನ್ಸ್ ವಿರುದ್ಧ ಗೆಲುವು ಸಾಧಿಸಿದರು. ಒಂದು ಗಂಟೆ 47 ನಿಮಿಷ ನಡೆದ ಹೋರಾಟದಲ್ಲಿ ಜೊಕೊವಿಚ್‌ಗೆ ಇಂಗ್ಲೆಂಡ್‌ನ ಆಟಗಾರನಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿಲ್ಲ. ಇದು ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ 38 ವರ್ಷ ವಯಸ್ಸಿನ ಆಟಗಾರನಿಗೆ 99ನೇ ಗೆಲುವಾಗಿದೆ. 

ಟೆನಿಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಸಿಂಗಲ್ಸ್ ಆಟಗಾರನಾಗಿರುವ ಜೊಕೊವಿಚ್‌ ಅವರು 2023ರ ಅಮೆರಿಕ ಓಪನ್‌ ಚಾಂಪಿಯನ್‌ ಆದ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ. ವಿಂಬಲ್ಡನ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿರುವ ಅವರು, ಅಲ್ಕರಾಜ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. 

ಹ್ಯಾಟ್ರಿಕ್‌ ಪ್ರಶಸ್ತಿಯ ಛಲದಲ್ಲಿರುವ ಎರಡನೇ ಶ್ರೇಯಾಂಕದ ಅಲ್ಕರಾಜ್‌ 6-1, 6-4, 6-4ರಿಂದ ಆಲಿವರ್ ಟಾರ್ವೆಟ್ (ಬ್ರಿಟನ್‌) ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು. 22 ವರ್ಷ ವಯಸ್ಸಿನ ಆಟಗಾರ ಏಪ್ರಿಲ್‌ನಲ್ಲಿ ಬಾರ್ಸಿಲೋನಾ ಓಪನ್‌ ಫೈನಲ್‌ನಲ್ಲಿ ಹೋಲ್ಗರ್ ರೂನ್ ವಿರುದ್ಧ ಸೋತ ನಂತರ ಗೆಲುವಿನ ಓಟವನ್ನು 20 ಪಂದ್ಯಗಳಿಗೆ ವಿಸ್ತರಿಸಿಕೊಂಡರು. ಕಳೆದ ಮೂರು ತಿಂಗಳಿನಲ್ಲಿ ರೋಮ್ ಮಾಸ್ಟರ್ಸ್, ಫ್ರೆಂಚ್ ಓಪನ್ ಮತ್ತು ಕ್ವೀನ್ಸ್ ಕ್ಲಬ್‌ನಲ್ಲಿ ಅವರು ಚಾಂಪಿಯನ್‌ ಆಗಿದ್ದಾರೆ. 

ಮಹಿಳೆಯರ ಸಿಂಗಲ್ಸ್‌ನಲ್ಲಿ ರಷ್ಯಾದ ಕಮಿಲ್ಲಾ ರಾಖಿಮೋವಾ ಅವರು ಪಯೋಲಿನಿ ಅವರಿಗೆ ಆಘಾತ ನೀಡಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 62ನೇ ಸ್ಥಾನದಲ್ಲಿರುವ ಕಮಿಲ್ಲಾ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 4-6, 6-4, 6-4ರಿಂದ ಇಟಲಿಯ ಆಟಗಾರ್ತಿಯನ್ನು ಮಣಿಸಿದರು. ಕಳೆದ ವರ್ಷ ಫೈನಲ್‌ನಲ್ಲಿ ಝೆಕ್‌ ರಿಪಬ್ಲಿಕ್‌ನ ಬಾರ್ಬೊರಾ ಕ್ರೆಜ್ಸಿಕೋವಾ ವಿರುದ್ಧ ಪಯೋಲಿನಿ ಸೋತಿದ್ದರು. 

ಪಯೋಲಿನಿ ಜೂನ್‌ನಲ್ಲಿ ತನ್ನ ಸಂಗಾತಿ ಸಾರಾ ಎರಾನಿ ಜೊತೆಗೂಡಿ ರೋಲ್ಯಾಂಡ್ ಗ್ಯಾರೋಸ್ ಡಬಲ್ಸ್ ಕಿರೀಟವನ್ನು ಗೆದ್ದಿದ್ದಾರೆ. ಆದರೆ, ತನ್ನ ಕೊನೆಯ ನಾಲ್ಕು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್ ತಲುಪಲು  ವಿಫಲರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.