ಅಮೆರಿಕದ ಟೇಲರ್ ಫ್ರಿಟ್ಜ್
ಲಂಡನ್ : ಅಮೆರಿಕ ಓಪನ್ ರನ್ನರ್ ಅಪ್ ಟೇಲರ್ ಫ್ರಿಟ್ಜ್, ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದರು. ರಷ್ಯಾದ ಕರೆನ್ ಕಚನೋವ್ ಅವರೂ ಹೆಚ್ಚಿನ ಪ್ರಯಾಸವಿಲ್ಲದೆ ಎಂಟರ ಘಟ್ಟಕ್ಕೆ ಮುನ್ನಡೆದರು.
ಪುರುಷರ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಫ್ರಿಟ್ಜ್ 6-1, 3-0ಯಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ ಜೋರ್ಡಾನ್ ಥಾಂಪ್ಸನ್ (ಆಸ್ಟ್ರೇಲಿಯಾ) ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಇದರಿಂದಾಗಿ ವಾಕ್ಓವರ್ ಪಡೆದ ಅಮೆರಿಕದ 27 ವರ್ಷ ವಯಸ್ಸಿನ ಫ್ರಿಟ್ಜ್, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಎಂಟರ ಘಟ್ಟ ಪ್ರವೇಶಿಸಿದಂತಾಗಿದೆ.
ವಿಶ್ವ ಕ್ರಮಾಂಕದಲ್ಲಿ 44ನೇ ಸ್ಥಾನದಲ್ಲಿರುವ ಥಾಂಪ್ಸನ್ ಇದೇ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು. 31 ವರ್ಷ ವಯಸ್ಸಿನ ಅವರು, ಶನಿವಾರ ಫ್ರಾನ್ಸ್‌ನ ಪಿಯರ್ ಹ್ಯೂಸ್ ಹರ್ಬರ್ಟ್ ಜೊತೆಗೂಡಿ ದೀರ್ಘ ಡಬಲ್ಸ್ ಪಂದ್ಯ ಆಡಿದ್ದರು. ಬೆನ್ನು ಮತ್ತು ಕಾಲು ನೋವಿನೊಂದಿಗೆ ಸಿಂಗಲ್ಸ್ ಸ್ಪರ್ಧೆಗೆ ಇಳಿದಿದ್ದ ಅವರು, 41 ನಿಮಿಷ ಹೋರಾಟ ನಡೆಸಿ ನಂತರ ಹೊರನಡೆದರು.
ಸೆಮಿಫೈನಲ್ ತಲುಪುವ ಗುರಿ ಹೊಂದಿ ರುವ ಫ್ರಿಟ್ಜ್ ಅವರಿಗೆ ಮುಂದಿನ ಸುತ್ತಿನಲ್ಲಿ 17ನೇ ಶ್ರೇಯಾಂಕದ ಕಚನೋವ್ ಎದುರಾಳಿಯಾಗಿದ್ದಾರೆ. ರಷ್ಯಾದ ಅನುಭವಿ ಆಟಗಾರ 6-4, 6-2, 6-3ರ ನೇರ ಸೆಟ್‌ಗಳಿಂದ ಪೋಲೆಂಡ್‌ನ ಕಮಿಲ್ ಮಜ್‌ರ್ಜಾಕ್ ಅವರನ್ನು ಮಣಿಸಿದರು.
2022ರ ಅಮೆರಿಕ ಓಪನ್ ಮತ್ತು 2023ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಕಚನೋವ್, ಇಲ್ಲಿ 2021ರ ಬಳಿಕ ಎರಡನೇ ಬಾರಿ ಎಂಟರ ಘಟ್ಟ ಪ್ರವೇಶಿಸಿದರು. 109ನೇ ಕ್ರಮಾಂಕದ ಮಜ್‌ರ್ಜಾಕ್ ಇದೇ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್
ಟೂರ್ನಿಯೊಂದರಲ್ಲಿ ನಾಲ್ಕನೇ ಸುತ್ತಿನ ಪಂದ್ಯ ಆಡಿದರು.
ಯುಕಿ– ಗ್ಯಾಲವೆ ಜೋಡಿಗೆ ಮುನ್ನಡೆ: ಭಾರತದ ಯುಕಿ ಭಾಂಬ್ರಿ ಮತ್ತು ಅಮೆರಿಕದ ರಾಬರ್ಟ್ ಗ್ಯಾಲವೆ ಜೋಡಿಯು ಪುರುಷರ ಡಬಲ್ಸ್‌ನಲ್ಲಿ ಮೂರನೇ ಸುತ್ತು ಪ್ರವೇಶಿಸಿತು.
16ನೇ ಶ್ರೇಯಾಂಕದ ಭಾಂಬ್ರಿ– ಗ್ಯಾಲವೆ ಜೋಡಿ 6-3, 7-6 (8-6)ರಿಂದ ಪೋರ್ಚುಗಲ್‌ನ ನುನೊ ಬೋರ್ಗೆಸ್ ಮತ್ತು ಮಾರ್ಕೋಸ್ ಗಿರಾನ್ ಅವರನ್ನು ಮಣಿಸಿತು. ಈ ಜೋಡಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಮಾರ್ಸೆಲ್ಲೊ ಗ್ರಾನೊಲ್ಲರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬೆಲ್ಲೊಸ್
ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.