ADVERTISEMENT

ಟೆನಿಸ್‌ ಲೋಕದಲ್ಲಿ ಮೂವರ ಮೋಡಿ

ಬಸವರಾಜ ದಳವಾಯಿ
Published 21 ಜುಲೈ 2019, 19:30 IST
Last Updated 21 ಜುಲೈ 2019, 19:30 IST
ರಫೆಲ್‌ ನಡಾಲ್‌, ರೋಜರ್‌ ಫೆಡರರ್‌, ನೊವಾಕ್‌ ಜೊಕೊವಿಚ್‌
ರಫೆಲ್‌ ನಡಾಲ್‌, ರೋಜರ್‌ ಫೆಡರರ್‌, ನೊವಾಕ್‌ ಜೊಕೊವಿಚ್‌    

ಫೆಡರರ್‌, ನಡಾಲ್‌, ಜೊಕೊವಿಚ್‌... ಸುಮಾರು ಒಂದೂವರೆ ದಶಕದಿಂದ ಟೆನಿಸ್‌ ಲೋಕದಲ್ಲಿ ಕೇಳಿಬರುತ್ತಿರುವ ಅಗ್ರ ಹೆಸರುಗಳು ಇವು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಈ ಮೂವರ ಆಟದ ಮೋಡಿಗೆ ಕೆಲ ಪ್ರತಿಭಾನ್ವಿತ ಯುವ ಆಟಗಾರರೇ ತೆರೆಯಮರೆಗೆ ಸರಿದಿದ್ದಾರೆ. ಎಟಿಪಿ ರ‍್ಯಾಂಕಿಂಗ್‌, ಗ್ರ್ಯಾನ್‌ಸ್ಲಾಮ್‌, ಮಾಸ್ಟರ್ಸ್ ಟೂರ್ನಿಗಳ ಗೆಲುವಿನಲ್ಲಿ ಈ ಮೂವರ ಪಾರಮ್ಯ ಇದುವರೆಗೆ ತಡೆರಹಿತವಾಗಿದೆ.

ಜುಲೈ 14ರಂದು ಕೊನೆಗೊಂಡ ವಿಂಬಲ್ಡನ್‌ ಓಪನ್‌ ಟೆನಿಸ್‌ ಪ್ರಶಸ್ತಿ ಮುಡಿಗೇರಿದ್ದು ಜೊಕೊವಿಚ್‌ಗೆ. ಅಂದರೆ ಮತ್ತದೇ ‘ತ್ರಿವಳಿ’ಯಲ್ಲೇಒಬ್ಬರಿಗೆ. ಸ್ವಿಟ್ಜರ್ಲೆಂಡ್‌ ತಾರೆ ರೋಜರ್ ಫೆಡರರ್‌ ಉತ್ಸಾಹಕ್ಕೆಅವರ ವಯಸ್ಸು (37) ಅಡ್ಡಿಯಾಗುತ್ತಲೇ ಇಲ್ಲ. ಟೂರ್ನಿಯಿಂದ ಟೂರ್ನಿಗೆ ಚೈತನ್ಯದ ಚಿಲುಮೆಯಾಗುತ್ತಲೇ ಸಾಗಿರುವ ಅವರು, ನಡಾಲ್‌, ಜೊಕೊವಿಚ್‌ಗಿಂತ ಹೆಚ್ಚು ಯಶಸ್ಸು ಕಂಡವರು. 2003ರಲ್ಲಿ ವಿಂಬ ಲ್ಡನ್‌ ಗೆದ್ದ ಬಳಿಕ ಬೆಳಕಿಗೆ ಬಂದವರು ಈ ಆಟಗಾರ. 2004ರಲ್ಲಿ ವಿಂಬಲ್ಡನ್‌ ಮುಡಿಗೇರಿಸಿಕೊಂಡ ನಂತರ ವಿಶ್ವದ ನಂ.1 ಆಟಗಾರನಾಗಿ ಗುರುತಿಸಿಕೊಂಡರು. ವಿಶ್ವ ಟೆನಿಸ್‌ ಕ್ರಮಾಂಕದ ಅಗ್ರಪಟ್ಟವನ್ನು ಅತಿ ಹೆಚ್ಚು ದಿನಗಳ ಕಾಲ ಕಾಯ್ದುಕೊಂಡ ದಾಖಲೆಯೂ ಫೆಡರರ್‌ ಹೆಸರಲ್ಲಿದೆ. 310 ವಾರಗಳವರೆಗೆ ಅವರು ನಂ.1 ಪಟ್ಟದಲ್ಲಿದ್ದರು.

ಸಿಂಗಲ್ಸ್‌ನಲ್ಲಿ ಒಟ್ಟು 20 ಗ್ರ್ಯಾನ್‌ಸ್ಲಾಮ್‌ (ಎಂಟು ವಿಂಬಲ್ಡನ್‌, ಆರು ಬಾರಿ ಆಸ್ಟ್ರೇಲಿಯಾ ಓಪನ್‌, 5 ಬಾರಿ ಅಮೆರಿಕ ಓಪನ್, ಒಂದು ಬಾರಿ ಫ್ರೆಂಚ್‌ ಒಪನ್)ಪ್ರಶಸ್ತಿ ಗರಿ ಅವರ ಕಿರೀಟ ಸೇರಿವೆ. ಹಲವಾರು ಮಾಸ್ಟರ್ಸ್ ಪ್ರಶಸ್ತಿಗಳೂ ಒಲಿದಿವೆ.

ADVERTISEMENT

ಇನ್ನು 33 ವರ್ಷದ ರಫೆಲ್‌ ನಡಾಲ್‌ 2005ರಲ್ಲಿ ಫ್ರೆಂಚ್‌ ಓಪನ್‌ ಗೆದ್ದು ಪ್ರಬಲವಾಗುತ್ತ ಸಾಗಿದವರು. 18 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳಿಗೆ ಮುತ್ತಿಕ್ಕಿರುವ ನಡಾಲ್‌ ಸಾಧನೆಯೇನೂ ಕಡಿಮೆಯಲ್ಲ. ‘ಕೆಂಪು ಮಣ್ಣಿನ ಅಂಗಳದ ರಾಜ’ ಎಂದೇ ಹೆಸರಾಗಿರುವ ಸ್ಪೇನ್‌ನ ಈ ದಿಗ್ಗಜ, ದಾಖಲೆಯ 12 ಬಾರಿ ಫ್ರೆಂಚ್‌ ಓಪನ್‌ ಜಯಿಸಿದವರು. ಮೂರು ಬಾರಿ ಅಮೆರಿಕ ಓಪನ್‌, ಎರಡು ಬಾರಿ ವಿಂಬಲ್ಡನ್‌, ಒಂದು ಬಾರಿ ಆಸ್ಟ್ರೇಲಿಯಾ ಓಪನ್‌ ಗೆದ್ದವರು. 196 ವಾರಗಳ ಕಾಲ ಅವರು ವಿಶ್ವ ಕ್ರಮಾಂಕ ಆಳಿದವರು.

ಈ ಮೂವರಲ್ಲಿ ಕಿರಿಯವರಾದ, 32 ವರ್ಷ ವಯಸ್ಸಿನ ಸರ್ಬಿಯಾದ ಆಟಗಾರ ನೊವಾಕ್‌ ಜೊಕೊವಿಚ್‌ 2008ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ (ಆಸ್ಟ್ರೇಲಿಯಾ ಓಪನ್‌) ಗೆದ್ದು ಸಾಧನೆಯ ಶಿಖರ ಏರುತ್ತ ಸಾಗಿದ್ದಾರೆ. ಏಳು ಬಾರಿ ಆಸ್ಟ್ರೇಲಿಯಾ ಓಪನ್‌, ಐದು ಬಾರಿ ವಿಂಬಲ್ಡನ್‌, ಮೂರು ಅಮೆರಿಕ ಓಪನ್‌, ಒಂದು ಬಾರಿ ಫ್ರೆಂಚ್‌ ಓಪನ್‌ ಸೇರಿ 16 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ಅವರು. ವಿಶ್ವ ಕ್ರಮಾಂಕದಲ್ಲಿ ಸದ್ಯ ಅಗ್ರಸ್ಥಾನ ಅಲಂಕರಿಸಿರುವ ಜೊಕೊವಿಚ್‌, 250 ವಾರಗಳಿಂದ ಆ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ. 2004ರ ವಿಂಬಲ್ಡನ್‌ನಿಂದ 2019ರ ವಿಂಬಲ್ಡನ್‌ ಟೂರ್ನಿಯವರೆಗೆ 61 ಗ್ರ್ಯಾನ್‌ಸ್ಲಾಮ್‌ಗಳಲ್ಲಿ 51 ಪ್ರಶಸ್ತಿಗಳು ಈ ಮೂವರ ಪಾಲಾಗಿವೆ. ಆ್ಯಂಡಿ ಮರ್ರೆ, ಸ್ಟ್ಯಾನ್‌ ವಾವ್ರಿಂಕಾ ತಲಾ ಮೂರು ಬಾರಿ ಈ ಅವಧಿಯಲ್ಲಿ ಪ್ರಶಸ್ತಿ ಗೆದ್ದವರು. ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌, ಅಸ್ಟ್ರಿಯದ ಡೊಮಿನಿಕ್‌ ಥೀಮ್‌, ಜಪಾನ್‌ನ ಕಿ ನಿಶಿಕೋರಿ, ಗ್ರೀಸ್‌ ಆಟಗಾರ ಸ್ಟೆಫನೋಸ್‌ ಸಿಸಿಪಸ್‌ರಂಥ ಆಟಗಾರರು ಈ ತ್ರಿವಳಿಗಳ ಓಟದ ವೇಗಕ್ಕೆ ತಡೆಯೊಡ್ಡುವ ಕಸರತ್ತು ನಡೆಸುತ್ತಿದ್ದಾರೆ. ಆದರೆ ಹೆಚ್ಚು ಯಶಸ್ಸು ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.