ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಆ್ಯಂಡಿ ಮುರ್ರೆ ಆಟದ ವೈಖರಿ –ರಾಯಿಟರ್ಸ್ ಚಿತ್ರ
ಲಂಡನ್: ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್‌ನ ಬಹುಮಾನ ಹಣದ ಮೊತ್ತವನ್ನು ದಾಖಲೆಯ ₹622 ಕೋಟಿಗೆ (53.5 ದಶಲಕ್ಷ ಪೌಂಡ್) ಹೆಚ್ಚಿಸಲಾಗಿದೆ. ಸಿಂಗಲ್ಸ್ ಚಾಂಪಿಯನ್ನರು ಸುಮಾರು ₹35 ಕೋಟಿ ಬಹುಮಾನ ಮೊತ್ತ ಸಂಪಾದಿಸಲಿದ್ದಾರೆ ಎಂದು ಅಲ್ ಇಂಗ್ಲೆಂಡ್ ಕ್ಲಬ್ ಅಧಿಕಾರಿಗಳು ಗುರುವಾರ ಪ್ರಕಟಿಸಿದ್ದಾರೆ.
ಒಟ್ಟು ಬಹುಮಾನ ಮೊತ್ತ ಕಳೆದ ವರ್ಷಕ್ಕಿಂತ ಸುಮಾರು ₹41 ಕೋಟಿಯಷ್ಟು ಹೆಚ್ಚು ಆಗಿದೆ. ಹುಲ್ಲಿನಂಕಣದ ಈ ಟೂರ್ನಿಯಲ್ಲಿ ಸ್ಪರ್ಧಿಗಳು ಕಳೆದ ಬಾರಿ ಪಡೆದ ಮೊತ್ತಕ್ಕಿಂತ ಹೆಚ್ಚು ಹಣ ಪಡೆಯಲಿದ್ದಾರೆ ಎಂದು ಆಲ್ ಇಂಗ್ಲೆಂಡ್ ಚೇರ್ಮನ್ ಡೆಬೊರಾ ಜೆವನ್ಸ್ ತಿಳಿಸಿದರು.
‘ನಾವು ಆಟಗಾರರ ಮಾತು ಆಲಿಸಿದ್ದೇವೆ. ಅವರೊಂದಿಗೆ ಸಮಯ ಕಳೆದಿದ್ದೇವೆ’ ಎಂದು ಹೇಳಿದರು.
ಮೊದಲ ಸುತ್ತಿನಲ್ಲಿ ಸೋಲುವ ಆಟಗಾರ ಸುಮಾರು ₹76.80 ಲಕ್ಷ (66,000 ಪೌಂಡ್) ಮೊತ್ತ ಪಡೆಯಲಿದ್ದಾರೆ. ಇದು ಕಳೆದ ಬಾರಿಯ ಮೊತ್ತಕ್ಕಿಂತ ಶೇ 10ರಷ್ಟು ಏರಿಕೆಯಾಗಿದೆ.
ಈ ಬಾರಿಯ ವಿಂಬಲ್ಡನ್ ಚಾಂಪಿಯನ್‌ಷಿಪ್ ಜೂನ್ 30ರಂದು ಆರಂಭವಾಗಲಿದ್ದು ಜುಲೈ 13ರವರೆಗೆ ನಡೆಯಲಿದೆ. ಅತ್ಯಂತ ಹಳೆಯ ಈ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಈ ವರ್ಷ ಮೊದಲ ಬಾರಿ ಲೈನ್ ಜಜ್‌ಗಳ ಬದಲು ಎಲೆಕ್ಟ್ರಾನಿಕ್ ಲೈನ್ ಕಾಲಿಂಗ್ ವ್ಯವಸ್ಥೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.