
ಈಗಲ್ಸ್ ತಂಡದ ಪರ ಸಿಂಗಲ್ಸ್ ಪಂದ್ಯದಲ್ಲಿ ಆಡಿದ ಪೌಲಾ ಬಡೋಸಾ
ಪ್ರಜಾವಾಣಿ ಚಿತ್ರಗಳು: ಬಿ.ಕೆ.ಜನಾರ್ದನ
ಬೆಂಗಳೂರು: ವಿಶ್ವ ಪ್ರಸಿದ್ಧ ಆಟಗಾರರಾದ ಡೇನಿಯಲ್ ಮೆಡ್ವೆಡೇವ್, ಡೆನಿಸ್ ಶಪೊವಲೋವ್, ನಿಕ್ ಕಿರ್ಗಿಯೋಸ್, ಆಟಗಾರ್ತಿಯರಾದ ಎಲಿನಾ ಸ್ವಿಟೋಲಿನಾ, ಮಾರ್ತಾ ಕೊಸ್ಟಿಯುಕ್, ಪೌಲಾ ಬಡೋಸಾ ಮೊದಲಾದವರ ಆಟವನ್ನು ಉದ್ಯಾನಗರಿಯ ಟೆನಿಸ್ ಅಭಿಮಾನಿಗಳು ಕಣ್ತುಂಬಿಕೊಂಡರು. ಬುಧವಾರ ಆರಂಭವಾದ ವಿಶ್ವ ಟೆನಿಸ್ ಲೀಗ್‌ನಲ್ಲಿ ಭಾರತ–ವಿದೇಶಿ ಆಟಗಾರರನ್ನು ಒಳಗೊಂಡ ತಂಡಗಳ ನಡುವೆ ಉತ್ತಮ ಹೋರಾಟವೂ ಕಂಡುಬಂತು.
ಆಗಾಗ ಕ್ರೀಡಾ ತಾರೆಯರ ಜೊತೆ ಸಿನಿ ತಾರೆಯರೂ ಲೀಗ್‌ಗೆ ಹಾಜರಾಗಿ ರಂಗೇರಿಸಿದರು. ಕಬ್ಬನ್‌ಪಾರ್ಕ್‌ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ಬಿಸಿಲು ಇಳಿಯುತ್ತಿದ್ದಂತೆ ಪ್ರೇಕ್ಷಕರೂ ಭರ್ತಿಯಾಗತೊಡಗಿದರು. ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಕ್ಸ್ ತಂಡ 25–21 ಪಾಯಿಂಟ್‌ಗಳಿಂದ ಕೈಟ್ಸ್ ತಂಡವನ್ನು ಸೋಲಿಸಿತು.
ಹಿನ್ನಡೆಯಿಂದ ಗೆದ್ದ ಎಲಿನಾ:
ಹಾಕ್ಸ್ ತಂಡಕ್ಕೆ ಮೊದಲ ಡಬಲ್ಸ್ ಪಂದ್ಯ ಆಡಿದ ಎಲಿನಾ ಸ್ವಿಟೋಲಿನಾ (ಉಕ್ರೇನ್)– ಮಾಯಾ ಆರ್.ರೇವತಿ ಜೋಡಿ 7–5 ರಿಂದ ಕೈಟ್ಸ್ ತಂಡದ ಉಕ್ರೇನ್ ಆಟಗಾರ್ತಿ ಮಾರ್ತಾ ಕೊಸ್ಟಿಯುಕ್– ಭಾರತದ ಅಂಕಿತಾ ರೈನಾ ಜೋಡಿಯನ್ನು ಸೋಲಿಸಿತು.
ನಂತರ ಸಿಂಗಲ್ಸ್‌ನಲ್ಲಿ ಸ್ವಿಟೋಲಿನಾ ಹಿನ್ನಡೆಯಿಂದ ಚೇತರಿಸಿ ಮಾರ್ತಾ ಅವರನ್ನು 7–5 ರಿಂದ ಮಣಿಸಿ ಹಾಕ್ಸ್ ತಂಡದ ಮುನ್ನಡೆ ಹೆಚ್ಚಿಸಿದರು. ಒಂದು ಹಂತದಲ್ಲಿ ಮಾರ್ತಾ 4–1 ರಿಂದ, ಬಳಿಕ 5–3ರಲ್ಲಿ ಮುನ್ನಡೆಯಲ್ಲಿದ್ದರು. ಪಂದ್ಯದ ಪಾಯಿಂಟ್ ಪಡೆಯುವ ಅವಕಾಶವನ್ನೂ ಹೊಂದಿದ್ದರು. ಆದರೆ ಈ ಹಂತದಲ್ಲಿ ತಪ್ಪುಗಳನ್ನೆಸಗಿದರು. ಒಂದು ಡಬಲ್ ಫಾಲ್ಟ್, ಒಂದು ‘ಲಾಬ್’ ಹೊಡೆತ ಆಚೆ ಬಿದ್ದ ಕಾರಣ ಮಾರ್ತಾ ಗೇಮ್ ಕಳೆದುಕೊಂಡರು. ಹೀಗಾಗಿ ಚೇತರಿಸಿದ ಸ್ವಿಟೋಲಿನಾ ಗೇಮ್ ಬ್ರೇಕ್ ಮಾಡಿ, ನಂತರ ಪಂದ್ಯವನ್ನೂ ಗೆದ್ದರು.
ಎರಡನೇ ಡಬಲ್ಸ್‌ನಲ್ಲಿ ಕೈಟ್ಸ್‌ನ ನಿಕ್ ಕಿರ್ಗಿಯೋಸ್/ ದಕ್ಷಿಣೇಶ್ವರ ಸುರೇಶ್ 6–4 ರಿಂದ ಹಾಕ್ಸ್ ತಂಡಕ್ಕೆ ಆಡಿದ ಕೆನಡಾದ ಶಪೊವಲೋವ್/ ಯುಕಿ ಭಾಂಬ್ರಿ ಜೋಡಿಯನ್ನು ಸೋಲಿಸಿತು. ಗಾಯ ಮತ್ತು ಶಸ್ತ್ರಚಿಕಿತ್ಸೆಯ ನಂತರ ಪುನರಾಗಮನದ ಯತ್ನದಲ್ಲಿರುವ ಆಸ್ಟ್ರೇಲಿಯಾದ ಆಟಗಾರ ಕಿರ್ಗಿಯೋಸ್ ಅವರು ಸುರೇಶ್ ಅವರೊಂದಿಗೆ ತಮ್ಮ ಆಟದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
‘ನಾನು ಅರ್ಧ ಮಲೇಷ್ಯಾದವನು. ಹೀಗಾಗಿ ಇಲ್ಲಿನ ಸಂಸ್ಕೃತಿ, ಆಹಾರ ಅಲ್ಲಿನಂತೆ ಇದ್ದು, ತವರಿ ನಲ್ಲಿದ್ದಂತೆ ಭಾಸವಾಯಿತು. ಹಾಕ್ಸ್ ತಂಡವನ್ನು ಗೆಲ್ಲಿಸಲಾಗಲಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಆಟವಾಡಲು ಯತ್ನಿಸುವೆ’ ಎಂದು ಕಿರ್ಗಿಯೋಸ್ ಹೇಳಿದರು.
ಕೊನೆಯ (ಸಿಂಗಲ್ಸ್) ಪಂದ್ಯದಲ್ಲಿ ವಿಶ್ವದ 23ನೇ ಕ್ರಮಾಂಕದ ಆಟಗಾರ ಶಪೊವಲೋವ್ 7–5 ರಿಂದ ದಕ್ಷಿಣೇಶ್ವರ ಸುರೇಶ್ ಅವರನ್ನು ಹಿಮ್ಮೆಟ್ಟಿಸಿದರು. ಮೊದಲ 10 ಗೇಮ್‌ಗಳಲ್ಲಿ ಇಬ್ಬರಿಂದಲೂ ಸಮಬಲದ ಆಟ ಕಂಡುಬಂತು. ಅದರಲ್ಲೂ ಸುರೇಶ್ ತಮ್ಮ ಭರ್ಜರಿ ಸರ್ವ್‌ಗಳ ಮೂಲಕವೇ ಹೆಚ್ಚಿನ ಪಾಯಿಂಟ್ಸ್ ಪಡೆದರು. ಆದರೆ ಶಪೊವಲೋವ್ 11ನೇ ಗೇಮ್‌ನಲ್ಲಿ ನಿರ್ಣಾಯಕ ಬ್ರೇಕ್ ಪಡೆದರು. ಆ ಗೇಮ್‌ನಲ್ಲಿ ಸ್ಕೋರ್ 30–30 ಆಗಿದ್ದ ವೇಳೆ ಎರಡು ಅಮೋಘ ಬ್ಯಾಕ್‌ಹ್ಯಾಂಡ್ ಹೊಡೆತಗಳಿಂದ ಅಂಕ ಪಡೆದು ಗೇಮ್ ಪಡೆದ ಕೆನಡಾದ ಆಟಗಾರ ನಂತರ ಪಂದ್ಯವನ್ನೂ ತಮ್ಮದಾಗಿಸಿಕೊಂಡರು.
ಈಗಲ್ಸ್‌ಗೆ ಜಯ:
ಹೊನಲು ಬೆಳಕಿನಡಿ ನಡೆದ ದಿನದ ಎರಡನೇ ಪಂದ್ಯದಲ್ಲಿ ಈಗಲ್ಸ್ ತಂಡ 18–16 ರಿಂದ ಫಾಲ್ಕನ್ಸ್ ತಂಡವನ್ನು ಮಣಿಸಿತು. ಮಗ್ದಾ ಲಿನೆಟ್ (ಫಾಲ್ಕನ್ಸ್) ಅವರು 6–4 ರಿಂದ ಪೌಲಾ ಬಡೋಸಾ (ಈಗಲ್ಸ್) ಅವರನ್ನು ಸೋಲಿಸಿದರು. ಡಬಲ್ಸ್‌ನಲ್ಲಿ ಬಡೋಸಾ– ಸುಮಿತ್ ನಗಾಲ್ ಜೋಡಿ (ಈಗಲ್ಸ್) 6–1 ರಿಂದ ರೋಹನ್ ಬೋಪಣ್ಣ– ಮಗ್ದಾಗ ಜೋಡಿಯನ್ನು ಮಣಿಸಿದ್ದರಿಂದ ಪಂದ್ಯ ಕುತೂಹಲ ಕೆರಳಿಸಿತು. ನಂತರ ಇನ್ನೊಂದು ಡಬಲ್ಸ್‌ನಲ್ಲಿ ಬೋಪಣ್ಣ– ಡೇನಿಯಲ್ ಮೆಡ್ವೆಡೇವ್ (ಫಾಲ್ಕನ್ಸ್) 6–2 ರಿಂದ ನಗಾಲ್– ಗೇಲ್ ಮಾನ್ಫಿಲ್ಸ್ (ಈಗಲ್ಸ್) ಜೋಡಿಯನ್ನು ಸೋಲಿಸಿತು. ಕೊನೆಯ ಸಿಂಗಲ್ಸ್‌ನಲ್ಲಿ ಮಾನ್ಫಿಲ್ಸ್ 6–3 ರಿಂದ ಮೆಡ್ವೆಡೇವ್ (ಫಾಲ್ಕನ್ಸ್) ಅವರನ್ನು ಸೋಲಿಸಿದರು.
ತಾರೆಯರ ದಂಡು
ಟೆನಿಸ್ ಅಭಿಮಾನಿಗಳಿಗೆ ಒಂದು ಕಡೆ ಅಗ್ರ ಟೆನಿಸಿಗರ ಆಟವನ್ನು ಆಸ್ವಾದಿಸುವ ಜೊತೆಗೆ ಇನ್ನೊಂದೆಡೆ ಸಿನಿ ತಾರೆಯನ್ನು ವೀಕ್ಷಿಸುವ ಅವಕಾಶವೂ ದೊರೆಯಿತು. ಮೊದಲ ದಿನ ಪಂದ್ಯ ವೀಕ್ಷಿಸಲು ಆಗಾಗ ಚಿತ್ರ ತಾರೆಯರು ಬಂದು ಹೋದರು. ರಕುಲ್ ಪ್ರೀತ್ ಸಿಂಗ್, ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ, ಜಾಕ್ವೆಲಿನ್ ಫರ್ನಾಂಡಿಸ್ ಮೊದಲ ದಿನ ಆಗಮಿಸಿದ್ದರು. ಭಾರತದ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರೂ ಗಣ್ಯರ ಗ್ಯಾಲರಿಯಲ್ಲಿದ್ದು ಕೆಲಹೊತ್ತು ಪಂದ್ಯ ವೀಕ್ಷಿಸಿದರು.
ಅಸಮಾಧಾನ:
ಆಟಗಾರರು ಪ್ರವೇಶಿಸಲು ನಿರ್ಮಿಸಿದ್ದ ದ್ವಾರವು, ಕ್ರೀಡಾಂಗಣದ ಎಡಭಾಗದ ಪ್ರೇಕ್ಷಕರಿಗೆ ಪಂದ್ಯ ವೀಕ್ಷಕಣೆಗೆ ಅಡ್ಡಿಯಾಗುತ್ತಿತ್ತು. ಹೀಗಾಗಿ ಮೊದಲ ಪಂದ್ಯ ಮೊದಲ ಗೇಮ್ ವೇಳೆ ಆ ಕಡೆಯ ಎದ್ದುನಿಂತು ಅಸಮಾಧಾನ ವ್ಯಕ್ತಪಡಿಸಿದರು. ಹೀಗಾಗಿ ಪಂದ್ಯವನ್ನು ಐದು ನಿಮಿಷ ಸ್ಥಗಿತಗೊಳಿಸಿ, ಪ್ರೇಕ್ಷಕರನ್ನು ಪಕ್ಕದ ಸ್ಟ್ಯಾಂಡ್‌ಗೆ ಸ್ಥಳಾಂತರಿಸಲಾಯಿತು. ಸುಮಾರು ಎರಡು ಸಾವಿರ ಪ್ರೇಕ್ಷಕರು ಪಂದ್ಯ ವೀಕ್ಷಿಸಿದರು. ಮೊದಲ ಬಾರಿ ಈ ಲೀಗ್ ಭಾರತದಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.