ADVERTISEMENT

ಯೂರೋಪ್‌ಗೆ ಲೇವರ್‌ ಕಪ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 19:30 IST
Last Updated 24 ಸೆಪ್ಟೆಂಬರ್ 2018, 19:30 IST
ಯೂರೋ‍ಪ್‌ ತಂಡದ ಆಟಗಾರರು ಲೇವರ್‌ ಕಪ್‌ನೊಂದಿಗೆ ಸಂಭ್ರಮಿಸಿದರು -ಎಪಿ/ಪಿಟಿಐ ಚಿತ್ರ
ಯೂರೋ‍ಪ್‌ ತಂಡದ ಆಟಗಾರರು ಲೇವರ್‌ ಕಪ್‌ನೊಂದಿಗೆ ಸಂಭ್ರಮಿಸಿದರು -ಎಪಿ/ಪಿಟಿಐ ಚಿತ್ರ   

ಷಿಕಾಗೊ (ರಾಯಿಟರ್ಸ್‌/ಎಎಫ್‌ಪಿ): ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಮೋಡಿ ಮಾಡಿದರು.

ಇವರ ಅಪೂರ್ವ ಆಟದ ನೆರವಿನಿಂದ ಯೂರೋಪ್‌ ತಂಡ ಲೇವರ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ 13–8ರಿಂದ ವಿಶ್ವ ತಂಡವನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿತು.

ಭಾನುವಾರ ನಡೆದ ಹಣಾಹಣಿಯಲ್ಲಿ ಫೆಡರರ್‌ 6–7, 7–6, 10–7ರಲ್ಲಿ ಅಮೆರಿಕದ ಜಾನ್ ಇಸ್ನರ್‌ ಅವರನ್ನು ಪರಾಭವಗೊಳಿಸಿದರು.

ADVERTISEMENT

ಮೊದಲ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. 12 ಗೇಮ್‌ಗಳ ಆಟ ಮುಗಿದಾಗ ಇಬ್ಬರೂ 6–6ರಲ್ಲಿ ಸಮಬಲ ಮಾಡಿಕೊಂಡಿದ್ದರು. ‘ಟೈ ಬ್ರೇಕರ್‌’ನಲ್ಲಿ ವಿಶ್ವ ತಂಡದ ಇಸ್ನರ್‌ ಮೇಲುಗೈ ಸಾಧಿಸಿದರು.

ಎರಡನೇ ಸೆಟ್‌ನಲ್ಲೂ ತುರುಸಿನ ಪೈಪೋಟಿ ಕಂಡುಬಂತು. ‘ಟೈ ಬ್ರೇಕರ್‌’ನಲ್ಲಿ ಪಾರಮ್ಯ ಮೆರೆದ ಫೆಡರರ್‌ 1–1ರಲ್ಲಿ ಸಮಬಲ ಸಾಧಿಸಿದರು.

ಮೂರನೇ ಸೆಟ್‌ನಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಫೆಡರರ್ ಮಿಂಚಿದರು. ಶರವೇಗದ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಇನ್ನೊಂದು ಪಂದ್ಯದಲ್ಲಿ ಜ್ವೆರೆವ್‌ 6–7, 7–5, 10–7ರಲ್ಲಿ ವಿಶ್ವ ತಂಡದ ಕೆವಿನ್‌ ಆ್ಯಂಡರ್ಸನ್‌ ಎದುರು ಗೆದ್ದರು.

21 ವರ್ಷ ವಯಸ್ಸಿನ ಜ್ವೆರೆವ್‌ ಮೊದಲ ಸೆಟ್‌ನಲ್ಲಿ ನಿರಾಸೆ ಕಂಡರು. ಇದರಿಂದ ವಿಚಲಿತರಾಗದ ಅವರು ನಂತರದ ಎರಡು ಸೆಟ್‌ಗಳಲ್ಲೂ ಆಧಿಪತ್ಯ ಸಾಧಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಡಬಲ್ಸ್‌ ವಿಭಾಗದ ಹಣಾಹಣಿಯಲ್ಲಿ ಫೆಡರರ್‌ ಮತ್ತು ಜ್ವೆರೆವ್‌ 6–4, 6–7, 9–11ರಲ್ಲಿ ಜಾನ್‌ ಇಸ್ನರ್‌ ಮತ್ತು ಜಾಕ್‌ ಸಾಕ್‌ ವಿರುದ್ಧ ಸೋತಿದ್ದರು. ಯೂರೋಪ್‌ ತಂಡದ ಪ್ರಶಸ್ತಿಯ ಕನಸು ಸಾಕಾರಗೊಳ್ಳಬೇಕಾದರೆ ಇವರು ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಗೆಲ್ಲಲೇಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.