ಶುಭಮನ್ ಗಿಲ್
ಪಿಟಿಐ ಚಿತ್ರ
ನವದೆಹಲಿ: ಭಾರತ ಕ್ರಿಕೆಟ್ ತಂಡವು ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ತನ್ನ ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಕ್ಟೋಬರ್ 11ರಂದು ಕಣಕ್ಕಿಳಿಯಲಿದೆ. ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರು ಈ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಮೊದಲ ಪಂದ್ಯದಲ್ಲಿ ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಿತ್ತು. ಈ ಪಂದ್ಯಕ್ಕೂ ಅಲಭ್ಯರಾಗಿದ್ದ ಗಿಲ್, ವೈದ್ಯಕೀಯ ತಪಾಸಣೆ ಸಲುವಾಗಿ ಚೆನ್ನೈನಲ್ಲೇ ಉಳಿದುಕೊಂಡಿದ್ದಾರೆ. ಉಳಿದ ಆಟಗಾರರ ತಂಡ ಸೋಮವಾರ ದೆಹಲಿಗೆ ತೆರಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, 'ಭಾರತದ ಬ್ಯಾಟರ್ ಶುಭಮನ್ ಗಿಲ್ 2023ರ ಅಕ್ಟೋಬರ್ 9ರಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿಲ್ಲ. ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಆರಂಭಿಕ ಬ್ಯಾಟರ್, ದೆಹಲಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಕ್ಟೋಬರ್ 11ರಂದು ನಡೆಯುವ ಮುಂದಿನ ಪಂದ್ಯಕ್ಕೂ ಲಭ್ಯರಿರುವುದಿಲ್ಲ. ಗಿಲ್ ಚೆನ್ನೈನಲ್ಲಿಯೇ ಉಳಿಯಲಿದ್ದು, ವೈದ್ಯಕೀಯ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ' ಎಂದು ತಿಳಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಿಲ್ ಬದಲು ಇಶಾನ್ ಕಿಶನ್‌ಗೆ ಸ್ಥಾನ ನೀಡಲಾಗಿತ್ತು. ಆದರೆ, ಅವರು ಒಂದೂ ರನ್ ಗಳಿಸಿದೆ ನಿರಾಸೆ ಮೂಡಿಸಿದರು. ಕಿಶನ್ ಮಾತ್ರವಲ್ಲದೆ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಸಹ ಖಾತೆ ತೆರೆಯದೆ ಔಟಾಗಿದ್ದರು. ಆದಾಗ್ಯೂ ಭಾರತ, ಅನುಭವಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬ್ಯಾಟಿಂಗ್ ಬಲದಿಂದ 6 ವಿಕೆಟ್ ಅಂತರದ ಗೆಲುವು ಸಾಧಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.