ಒಂದು ಇ-ಮೇಲ್ ಬಳಸುವಾಗಲೇ ಮತ್ತೊಂದು ಇ-ಮೇಲ್ ವೀಕ್ಷಿಸಬೇಕೆಂದರೆ ಹೊಸ ಟ್ಯಾಬ್ ತೆರೆದು ಅಲ್ಲಿ ಮತ್ತೆ ಬಳಕೆದಾರನ ಗುರುತು(ಐಡಿ) ಹಾಗೂ ಪಾಸ್‌ವರ್ಡ್ ಕೀ ಮಾಡಬೇಕಿದೆ. ಒಂದೇ ಬಾರಿ ವಿವಿಧ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಲೂ ಇದೇ ಪ್ರಯತ್ನ ನಡೆಸಬೇಕಿದೆ. ಇದರಿಂದ ಸಮಯ ವ್ಯರ್ಥ, ಜತೆಗೆ ಕಿರಿಕಿರಿ. ಇನ್ನು ಈ ರೀತಿಯ ಕಷ್ಟ ಇರದು. ಕಂಪ್ಯೂಟರ್ ತೆರೆ ಮೇಲೆ ಏಕಕಾಲದಲ್ಲಿ 12 ಇ-ಮೇಲ್‌ಗಳನ್ನು ಬಳಸಬಹುದಾದ ಹೊಸ ಸಾಫ್ಟ್‌ವೇರ್ ಈಗ ಉಚಿತವಾಗಿ ಲಭ್ಯವಿದೆ.
ಸಿಸ್‌ನೆಟ್ ಅಸೋಸಿಯೇಟ್ `ಕ್ವಿಕ್ ಟೂಲ್ಸ್' ಎಂಬ ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ. 1 ಎಂ.ಬಿ ಇರುವ ಈ ತಂತ್ರಾಂಶವನ್ನು ಒಂದೇ ನಿಮಿಷದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ಗಣಕಕ್ಕೆ ಅನುಸ್ಥಾಪಿಸಿಕೊಳ್ಳದೆಯೇ ಬಳಸಬಹುದು. ಡೌನ್‌ಲೋಡ್ ಬಳಿಕ ಡಾಟ್‌ಇಎಕ್ಸ್‌ಇ (.exe) ಎಂದು ಬರುವ ಫೈಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅದು ಕಾರ್ಯ ಆರಂಭಿಸುತ್ತದೆ.
ಬಹಳ ಸರಳ ಹಾಗೂ ಸುಲಭವಾಗಿ ಕಾರ್ಯನಿರ್ವಹಿಸಬಲ್ಲ ಈ ಕ್ವಿಕ್‌ಟೂಲ್ಸ್ ತಂತ್ರಾಂಶದಲ್ಲಿ 12 ಅಂಶಗಳನ್ನು ಏಕಕಾಲದಲ್ಲಿ ಬಳಸಬಹುದು. ಅಲ್ಲದೆ, ಒಂದು ಬಾರಿ ಈ ತಂತ್ರಾಂಶದಲ್ಲಿ ಇಮೇಲ್ ಹಾಗೂ ಪಾಸ್‌ವರ್ಡ್ ದಾಖಲಿಸಿದರೆ ಸಾಕು ಅದು ಬೇಕೆಂದಾಗ ಅಷ್ಟೂ ಇ-ಮೇಲ್ ಐ.ಡಿ ಒಮ್ಮೆಗೇ ತೆರೆದುಕೊಳ್ಳುತ್ತವೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಸ್.ಬಿ. ಚಂದ್ರಶೇಖರ್.
ಯಾವ ಮೊಬೈಲ್‌ಗೆ ಬೇಕಾದರೂ ಕಂಪ್ಯೂಟರ್‌ನಿಂದ ಸಂಪರ್ಕ ಕಲ್ಪಿಸಿ ಒಂದೇ ಬಾರಿ ಹಲವರಿಗೆ ಸಂದೇಶ(ಬಲ್ಕ್ ಎಸ್‌ಎಂಎಸ್) ಕಳುಹಿಸಬಹುದು. ಉಚಿತ ಸಂದೇಶ ಕಳುಹಿಸುವ ವ್ಯವಸ್ಥೆ ಸಹ ಇದರಲ್ಲಿದೆ. ಆದರೆ ಉಚಿತ ಸಂದೇಶಗಳನ್ನು ಒಂದು ಬಾರಿ ಒಬ್ಬರಿಗೆ ಮಾತ್ರ ಕಳುಹಿಸಬಹುದು. ಈ ರೀತಿ ದಿನದಲ್ಲಿ ಎಷ್ಟು ಜನರಿಗೆ ಬೇಕಾದರೂ ಉಚಿತ ಸಂದೇಶ ಕಳುಹಿಸಬಹುದು ಎಂಬುದು ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಎ.ಕ್ರಿಷಿ ವಿವರಣೆ.
ಈ ತಂತ್ರಾಂಶವನ್ನು ಒಂದು ಕಂಪ್ಯೂಟರ್‌ನಲ್ಲಿ ಮೂರು ಮಂದಿ ಮೂರು ರೀತಿಯಲ್ಲಿ ಬಳಸಬಹುದು. ಆದರೆ ಸುರಕ್ಷತೆಗಾಗಿ `ಪಾರ್ಸ್‌ವರ್ಡ್' ಕೊಡಬೇಕು. ಅಲ್ಲದೆ `ಆರ್‌ಎಸ್‌ಎಸ್ ಫೀಡ್'ನಿಂದ ತಾಜಾ ಸುದ್ದಿಗಳನ್ನು ಪಡೆಯಲು 15 ಲಿಂಕ್‌ಗಳಿಂದ ಸಂಪರ್ಕ ಪಡೆದು ಬಳಸಬಹುದು ಎನ್ನುತ್ತಾರೆ ಅವರು.
ಕೇವಲ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ ಕಾರ್ಯನಿರ್ವಹಿಸುವ ಈ ಕ್ವಿಕ್ ಟೂಲ್ಸ್ ತಂತ್ರಾಂಶ ಪಡೆಯಲು ಸಂಪರ್ಕಿಸಬೇಕಾದ ವಿಳಾಸ www.sysnetindia.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.