ವಿಮಾನ ರಕ್ಕೆ ತಯಾರಿಕೆ ಚಿತ್ರಕೃಪೆ: ಏಕಸ್
ವಿಮಾನ ಏರುವುದು, ಬಾನಂಗಳದಲ್ಲಿ ತೇಲುವುದು, ಕಿಟಕಿ ಹತ್ತಿರ ಕೂತು ಮೇಲಿನಿಂದಲೇ ಮೋಡಗಳ ಸಂಚಾರ ನೋಡುವುದು, ಆಕಾಶ ಮತ್ತೂ ಎತ್ತರ ಇರಬಹುದೇ ಎಂದು ಕಿಟಕಿಯಿಂದ ಇಣುಕಿ ಮೇಲೆ ನೋಡುವುದು... ಮೊದಲ ಬಾರಿಗೆ ವಿಮಾನ ಏರಿದ ಭಯದ ನಡುವೆಯೂ ನಾನು–ನೀವು ಅನುಭವಿಸಿದ, ಕುತೂಹಲಿಸಿದ ವಿಚಾರಗಳೇ ಇವು.
ಬಾನಂಗಳದಲ್ಲಿ ಸದ್ದು ಮಾಡುತ್ತಿದ್ದಂತೆಯೇ, ಇದು ವಿಮಾನವೇ ಎಂದು ಆಟ ಬಿಟ್ಟು ಮನೆಯಂಗಳದಲ್ಲಿ ನಿಂತು ನಭಕ್ಕೇರಿದ ವಿಮಾನವನ್ನು, ಅದು ಕಣ್ಣದೂರ ದಾಟುವವರೆಗೂ ನೋಡಿ ನಾನೂ ಅದನ್ನೇರಬೇಕು ಅಂದುಕೊಂಡವರೂ ಹೌದು. ಲಾರಿ, ಬಸ್ಸು, ಕಾರು, ಆಟೊ– ಇವು ನಿತ್ಯದವು. ವಿಮಾನ ಏರುವುದು ಮಾತ್ರ ಎಲ್ಲರ ಕನಸು. ಬೇರೆ ವಾಹನಗಳಿಗಿಂತ ವಿಮಾನ ಹೇಗೆ ಭಿನ್ನವೋ ಅದರ ತಯಾರಿಕೆ ಕೂಡ ಭಿನ್ನವೇ. ಹಾಗಾದರೆ, ಅದು ಹೇಗೆ ಭಿನ್ನ? ಕೆಲವು ಮಾಹಿತಿ ಇಲ್ಲಿವೆ:
ವಿಮಾನ ತಯಾರಿಕೆಯು ಅತ್ಯಂತ ಗರಿಷ್ಠ ಮಟ್ಟದ ನಿಖರತೆ ಬೇಡುವ ಕೆಲಸ. ಇತರ ವಾಹನಗಳಿಗೂ ಇದು ಅಗತ್ಯವೇ ಸರಿ. ಆದರೆ, ಒಂದು ಸಣ್ಣ ತಪ್ಪು, ಅಲಕ್ಷ್ಯ ಕೂಡ ಒಟ್ಟಿಗೆ ನೂರಾರು ಜನರ ಪ್ರಾಣಕ್ಕೆ ಕುತ್ತು ತರಬಹುದು. ಇದೇ ಕಾರಣಕ್ಕೆ ವಿಮಾನ ತಯಾರಿಕೆಯು ಕಠಿಣವಾದ ಕೆಲಸ.
ಇದೊಂದು ಬಹಳ ನಾಜೂಕಿನ ಕೆಲಸ. ವಿಮಾನದ ಪ್ರತಿಯೊಂದು ಬಿಡಿಭಾಗವೂ ಒಂದೇ ಗುಣಮಟ್ಟದಲ್ಲಿ ಇರಬೇಕು. ಅದರ ಆಕಾರ, ಬಣ್ಣ, ಬಾಳಿಕೆ, ಬಿಡಿಭಾಗ ತಯಾರಿಕೆಗೆ ಬಳಸಿದ ಕಚ್ಚಾ ವಸ್ತುವಿನ ಗುಣಮಟ್ಟ... ಒಂದು ಬಿಡಿಭಾಗದಲ್ಲಿ ಒಂದು ರಂಧ್ರ ಇರುತ್ತದೆ ಎಂದುಕೊಳ್ಳಿ. ಆ ರಂಧ್ರದ ಅಳತೆಯಲ್ಲಿ ಕೂದಲೆಳೆಯ ಒಂದನೇ ನೂರರಷ್ಟೂ ವ್ಯತ್ಯಾಸ ಇರಕೂಡದು. ಬೇರೆ ವಾಹನ ತಯಾರಿಕೆಯಲ್ಲಿ ಇದು ಸ್ವಲ್ಪ ಆಚೆ–ಈಚೆಯಾದರೂ ನಡೆಯುತ್ತದೆ.
ಬಿಡಿಭಾಗಗಳ ವಿನ್ಯಾಸ, ಅದರ ಪರೀಕ್ಷೆ ಇವೆಲ್ಲವನ್ನೂ ವಿಮಾನ ತಯಾರಿಕಾ ಕಂಪನಿಗಳೇ ನಿರ್ಧರಿಸುತ್ತವೆ. ಆ ಕಂಪನಿಗಳು ರೂಪಿಸಿದ ನಿಯಮದಂತೆ ಬಿಡಿಭಾಗಗಳ ತಯಾರಿಕಾ ಕಂಪನಿಗಳು ತಯಾರಿಕೆ ಮಾಡುತ್ತವೆ. ಒಂದು ನಟ್ ಅಥವಾ ಬೋಲ್ಟ್ ಇರಲಿ, ಅದರ ಗುಣಮಟ್ಟ ಪರೀಕ್ಷೆಯ ವಿವರವನ್ನು ಬಿಡಿಭಾಗ ತಯಾರಿಕಾ ಕಂಪನಿಗಳು ಸುಮಾರು 40 ವರ್ಷ ಕಾಪಿಡಬೇಕು. ಒಂದು ಸಣ್ಣ ಅಪಘಾತವಾದರೂ ಸರಿ, ಯಾವ ಭಾಗ ಯಾರು ತಯಾರಿಸಿದ್ದು ಎನ್ನುವ ಮಾಹಿತಿ ವಿಮಾನ ತಯಾರಿಕಾ ಕಂಪನಿ ಬಳಿ ಇರಬೇಕು. ಒಂದೊಂದು ಬಿಡಿಭಾಗಕ್ಕೂ ಅದರ ಇಡೀ ಜಾತಕ ಇರುವ ಸಂಖ್ಯೆಯೊಂದನ್ನು ನೀಡಲಾಗುತ್ತದೆ.
ಇಲ್ಲಿ ಸ್ವಚ್ಛತೆಗೆ ಭಾರಿ ಆದ್ಯತೆ ನೀಡಲಾಗುತ್ತದೆ. ಯಾವುದೇ ಬಿಡಿಭಾಗದ ಮೇಲೆಯೂ ಒಂದು ಕೂದಲೆಳೆಯಷ್ಟೂ ಕಸ, ದೂಳು ಇರಬಾರದು. ಬಿಡಿಭಾಗಗಳ ತಯಾರಿಕೆ ಕಂಪನಿಗಳಿಗೆ ಭೇಟಿ ನೀಡಿದರೆ, ಇದು ಚೆನ್ನಾಗಿ ಅರಿವಿಗೆ ಬರುತ್ತದೆ. ಅಲ್ಲಿನ ಕಾರ್ಮಿಕರು ಕೂಡ ಬೂಟು, ತಲೆಗೊಂದು ಟೋಪಿ, ಕೈಗಳಿಗೆ ಗವಸು, ಕಣ್ಣುಗಳಿಗೆ ಕನ್ನಡಕಗಳನ್ನು ಹಾಕಿಕೊಂಡೇ ಇರುತ್ತಾರೆ. ಇಡೀ ತಯಾರಿಕಾ ಘಟಕವನ್ನೇ ಸ್ವಚ್ಛವಾಗಿ ಇಡಲಾಗುತ್ತದೆ.
ಗುಣಮಟ್ಟ ಪರೀಕ್ಷೆಯ ವಿಚಾರ ಕೂಡ ಅಷ್ಟೇ ಕುತೂಹಲಕಾರಿ. ವಿಮಾನ ತಯಾರಿಕಾ ಕಂಪನಿಗಳ ನಿಯಮಗಳ ಅನುಸಾರವೇ ಕೆಲಸಗಳು ನಡೆಯುತ್ತವೆ. ಗುಣಮಟ್ಟ ಪರೀಕ್ಷೆಯಲ್ಲೂ ಹೀಗೆಯೇ. ವಿಮಾನದ ರೆಕ್ಕೆ ಇರಬಹುದು, ಅದರ ಮೂತಿ ಇರಬಹುದು... ಎಲ್ಲಾ ಬಿಡಿ ಭಾಗಗಳಿಗೂ ಅದರ ಬಣ್ಣ ಬಾಳಿಕೆ ವಿಚಾರದಲ್ಲಿಯೂ ಒಂದೊಂದು ರೀತಿಯ ಪರೀಕ್ಷೆ ನಡೆಸಲಾಗುತ್ತದೆ.
ವಿಮಾನವೊಂದು ಅತೀವ ಉಷ್ಣತೆ ಮತ್ತು ವಿಪರೀತ ಚಳಿಯ ವಾತಾವರಣದಲ್ಲಿ ಕಾರ್ಯಾಚರಿಸುತ್ತದೆ. ಕಾರ್ಯಾಚರಣೆಯ ವೇಳೆ ವಿಮಾನದ ಕೆಲ ಬಿಡಿಭಾಗಗಳು 1,000 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿದ್ದರೆ, ಕೆಲವು ಭಾಗಗಳು –70 ಡಿಗ್ರಿಯಷ್ಟು ತಂಪಾಗಿರುತ್ತವೆ. ವಿಮಾನದ ಹೊರಮೈ ಬಿಡಿಭಾಗಗಳು ಇಷ್ಟು ತೀವ್ರ ತಾಪಮಾನ ಮತ್ತು ತಾಪಮಾನದ ಈ ಏರುಪೇರನ್ನು ಏಕಕಾಲದಲ್ಲಿ ತಾಳಿಕೊಳ್ಳಬೇಕು. ಇದಕ್ಕಾಗಿಯೇ ಉತ್ಕೃಷ್ಟ ಗುಣಮಟ್ಟದ ಟೈಟಾನಿಯಂ ಲೋಹದಿಂದ ಕವಚಗಳನ್ನು ರೂಪಿಸಿರಲಾಗುತ್ತದೆ. ಅಲ್ಲದೆ, ತಯಾರಿಕೆಯ ನಂತರ ಹೊರಭಾಗಗದ ಬಿಡಿ ಭಾಗಗಳ ಮಾದರಿಯನ್ನು ಓವನ್ ರೀತಿಯ ಯಂತ್ರವೊಂದರಲ್ಲಿ ತಿಂಗಳುಗಟ್ಟಲೆ ಇಡಲಾಗುತ್ತದೆ. ಇನ್ನೊಂದು ತಿಂಗಳು ನೀರಿನಲ್ಲಿ ಮುಳುಗಿಸಿ ಇಡಲಾಗುತ್ತದೆ! ಇಷ್ಟೆಲ್ಲಾ ಕಠಿಣ ಪರೀಕ್ಷೆಯ ಬಳಿಕ ಬಿಡಿ ಭಾಗದ ಬಣ್ಣವೂ ಸೇರಿದಂತೆ ಯಾವುದಕ್ಕೂ ಹಾನಿಯಾಗಬಾರದು.
ಹೀಗೆ ಪ್ರತಿಯೊಂದು ಬಿಡಿ ಭಾಗವೂ ವಿವಿಧ ಪರೀಕ್ಷೆಗಳಿಗೆ ಒಳಪಟ್ಟು, ಕೊನೆಯಲ್ಲಿ ಒಂದೆಡೆ ಸೇರಿಕೊಂಡು ವಿಮಾನ ಹಾರಾಟಕ್ಕೆ ಸಿದ್ಧವಾಗುತ್ತದೆ. ಮತ್ತೆ ನಮ್ಮ ಕನಸಿಗೆ ರೆಕ್ಕೆ ಹಚ್ಚುತ್ತವೆ.
‘ನೀವು ಜಗತ್ತಿನ ಯಾವ ಮೂಲೆಯಲ್ಲಾದರೂ ವಿಮಾನ ಹತ್ತಿ. ನಮ್ಮ ಕಂಪನಿ ತಯಾರಿಸದ ಬಿಡಿಭಾಗಗಳು ಇಲ್ಲದ ವಿಮಾನಗಳೇ ಇಲ್ಲ’ ಎನ್ನುವುದು ಬೆಳಗಾವಿಯ ಏಕಸ್ ಕಂಪನಿಯ ಹೆಮ್ಮೆಯ ಮಾತುಗಳು. ಪ್ರಮುಖವಾಗಿ ಇದೊಂದು ವಿಮಾನಗಳ ಬಿಡಿಭಾಗಗಳ ತಯಾರಿಕೆ ಕಂಪನಿ. ಅರವಿಂದ ಮೆಳ್ಳಿಗೇರಿ ಅವರು 2006ರಲ್ಲಿ ಇದನ್ನು ಆರಂಭಿಸಿದರು. ಬೆಳಗಾವಿ ನಗರದಿಂದ ತುಸು ದೂರದಲ್ಲಿ ಸುಮಾರು 250 ಎಕರೆ ವಿಸ್ತೀರ್ಣದಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ.
ಏರ್‌ಬಸ್, ಬೋಯಿಂಗ್ ಕಂಪನಿಗಳಿಗೆ ಪ್ರಮುಖವಾಗಿ ಈ ಕಂಪನಿಯು ಬಿಡಿಭಾಗಗಳನ್ನು ತಯಾರಿಸಿ ಕೊಡುತ್ತದೆ. ಫ್ರಾನ್ಸ್‌ನ ಪ್ಯಾರಿಸ್, ಚೋಲೆ ನಗರಗಳಲ್ಲಿ ಮತ್ತು ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಈ ಕಂಪನಿಯ ತಯಾರಿಕಾ ಘಟಕಗಳಿವೆ. ಬೆಳಗಾವಿಯ ಘಟಕದಲ್ಲಿ ಸುಮಾರು 4 ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ವಿಮಾನ ತಯಾರಿಕಾ ಕ್ಷೇತ್ರದಲ್ಲಿ ದೇಶದಲ್ಲೇ ಇರುವ ಅತಿ ದೊಡ್ಡ ತಯಾರಿಕ ಘಟಕ ಇದಾಗಿದೆ. ವಿಮಾನದ ರೆಕ್ಕೆಗಳಿಂದ ಹಿಡಿದು, ನೆಟ್–ಬೋಲ್ಟ್ ವರೆಗೂ ಈ ಕಂಪನಿ ತಯಾರಿಸುತ್ತದೆ.
ಜಗತ್ತಿನ ಬೇರೆ ಬೇರೆ ಕಂಪನಿಗಳಿಗಾಗಿ ಆ ಕಂಪನಿಗಳ ಬ್ರ್ಯಾಂಡ್‌ನಲ್ಲಿಯೇ ಆಟಿಕೆಗಳನ್ನೂ ನಾನ್‌ಸ್ಟಿಕ್ ಪಾತ್ರೆಗಳನ್ನು ಇದೇ ಬೆಳಗಾವಿಯ ಘಟಕದಲ್ಲಿ ತಯಾರಿಕೆ ಮಾಡಲಾಗುತ್ತದೆ.
ಏರ್‌ಬಸ್, ಬೋಯಿಂಗ್; ಜಗತ್ತಿನ ಪ್ರಮುಖ ವಿಮಾನ ತಯಾರಿಕಾ ಕಂಪನಿಗಳು
₹ 810 ಕೋಟಿ– ₹830 ಕೋಟಿ; 180 ಸೀಟಿನ ಒಂದು ವಿಮಾನ ತಯಾರಿಕೆಗೆ ತಗುಲುವ ಅಂದಾಜು ವೆಚ್ಚ
60 ಲಕ್ಷ; ಬೋಯಿಂಗ್ 747 ವಿಮಾನದಲ್ಲಿ ಇರುವ ಬಿಡಿ ಭಾಗಗಳು (ಒಂದೊಂದು ಕಂಪನಿಯ ಒಂದೊಂದು ವಿನ್ಯಾಸ ವಿಮಾನದ ಬಿಡಿ ಭಾಗಗಳ ಸಂಖ್ಯೆ ಒಂದೊಂದು ರೀತಿ ಇರುತ್ತದೆ)
8–12 ತಿಂಗಳು; ಏರ್‌ಬಸ್‌ನ A380 ಮಾದರಿಯ ಒಂದು ವಿಮಾನ ತಯಾರಿಕೆಗೆ (ಬಿಡಿ ಭಾಗಗಳ ತಯಾರಿಕೆಯಿಂದ ಹಿಡಿದು, ವಿಮಾನ ಜೋಡಣೆವರೆಗೆ) ಬೇಕಾದ ಸಮಯ (ಒಂದು ಕಾರನ್ನು 20 ಗಂಟೆಯಲ್ಲಿ ಜೋಡಿಸಿ, ಚಲಾಯಿಸಲು ಸಿದ್ಧಪಡಿಸಬಹುದು)
10–12 ವರ್ಷ; ಹೊಸದಾದ ವಿನ್ಯಾಸ ರೂಪಿಸಿ, ವಿಮಾನ ತಯಾರಿಸಲು ಬೇಕಾದ ಸಮಯ
50–60 ಸಾವಿರ; ಒಂದು ವಿಮಾನ ತಯಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ (ಬಿಡಿ ಭಾಗಗಳ ತಯಾರಿಕೆ, ಅದರ ಕಚ್ಚಾ ವಸ್ತು ಸಂಗ್ರಹದಿಂದ, ವಿಮಾನ ಜೋಡಣೆವರೆಗೆ)
ಕಂಪನಿಯಿಂದ ಕಂಪನಿಗೆ, ವಿಮಾನದ ವಿನ್ಯಾಸದಿಂದ ವಿನ್ಯಾಸಕ್ಕೆ ಇಲ್ಲಿನ ಹಲವು ಅಂಕಿ–ಸಂಖ್ಯೆ ವ್ಯತ್ಯಯಗೊಳ್ಳುತ್ತವೆ
ಒಂದು ವಿಮಾನ ತಯಾರಿಕೆಗೆ ಬೇಕಾದ ಸಾಕಷ್ಟು ಮೂಲಸೌಕರ್ಯಗಳು ಬೆಳಗಾವಿಯ ಘಟಕದಲ್ಲಿವೆ. ಏರ್‌ಬಸ್, ಬೋಯಿಂಗ್‌ಗೆ ಬಿಡಿ ಭಾಗಗಳನ್ನು ತಯಾರಿಕೆ ಮಾಡಿ ಕೊಡುತ್ತೇವೆ ಹೌದು. ಆದರೆ, ಪೂರ್ಣ ವಿಮಾನವನ್ನು ತಯಾರು ಮಾಡುವ ಕಂಪನಿಯನ್ನು ಭಾರತದಲ್ಲಿ ಹುಟ್ಟು ಹಾಕಲು ಅಗತ್ಯವಾದ ಬೇಡಿಕೆ ಇನ್ನೂ ಇಲ್ಲ. ದೇಶದಲ್ಲಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ, ಹಣಕಾಸಿನ ಸಹಕಾರ ಅಗತ್ಯವಿದೆ.-ಅರವಿಂದ ಮೆಳ್ಳಿಗೇರಿ, ‘ಏಕಸ್’ ಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.