ADVERTISEMENT

ಭಾರತದಲ್ಲಿ ChatGPT Go ಒಂದು ವರ್ಷ ಉಚಿತ ಎಂದ ಓಪನ್‌ಎಐ: ನ. 4ರಿಂದ ಆರಂಭ

ಪಿಟಿಐ
Published 28 ಅಕ್ಟೋಬರ್ 2025, 7:37 IST
Last Updated 28 ಅಕ್ಟೋಬರ್ 2025, 7:37 IST
   

ನವದೆಹಲಿ: ಅಧಿಕ ಕೋರಿಕೆಯ ಮಿತಿ ಹಾಗೂ ಚಿತ್ರಗಳನ್ನು ನೀಡುವ ಸಾಮರ್ಥ್ಯವಿರುವ ‘ಚಾಟ್‌ಜಿಪಿಟಿ ಗೋ’ ಮಾದರಿಯನ್ನು ಭಾರತೀಯರಿಗೆ ಒಂದು ವರ್ಷ ಉಚಿತವಾಗಿ ನೀಡುವುದಾಗಿ ಒಪನ್‌ಎಐ ಮಂಗಳವಾರ ಹೇಳಿದೆ. ನ. 4ರಿಂದ ಈ ಪ್ರಚಾರದ ಅವಧಿ ಆರಂಭವಾಗಲಿದೆ.

ಜಗತ್ತಿನಲ್ಲೇ ಚಾಟ್‌ಜಿಪಿಟಿ ಬಳಸುವ ಎರಡನೇ ಅತಿ ದೊಡ್ಡ ಹಾಗೂ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ರಾಷ್ಟ್ರವಾಗಿರುವ ಭಾರತದಲ್ಲಿ ಕೃತಕ ಬುದ್ಧಿಮತ್ತೆ ಸಾಧನದ ಬಳಕೆದಾರರನ್ನು ಹೆಚ್ಚಿಸಲು ಉದ್ದೇಶಿಸಿರುವ ಓಪನ್‌ಎಐ, ನೂತನ ಎಲ್‌ಎಲ್ಎಂ ಮೂಲಕ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಹಾಗೂ ಅಧಿಕ ಚಿತ್ರಗಳನ್ನು ಸಿದ್ಧಪಡಿಸಿ ಕೊಡುವ ‘ಗೋ’ ಮಾದರಿಯನ್ನು ಪರಿಚಯಿಸಿದೆ. ಇತ್ತೀಚೆಗೆ ಚಂದಾದಾರಿಕೆಯ ಮಾದರಿಯನ್ನು ಕಂಪನಿ ಪರಿಚಯಿಸಿತ್ತು.

ನ. 4ರಂದು ಬೆಂಗಳೂರಿನಲ್ಲಿ ಓಪನ್‌ಎಐ ಡೇವ್‌ಡೇ ಎಕ್ಸ್‌ಚೇಂಜ್ ಕಾರ್ಯಕ್ರಮವನ್ನು ಕಂಪನಿ ಆಯೋಜಿಸಿದೆ. ಭಾರತದಲ್ಲಿ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ಆಯೋಜನೆಗೊಂಡಿದೆ. ನೋಂದಾಯಿಸಿಕೊಂಡಲ್ಲಿ ಈ ಸೀಮಿತ ಅವಧಿಯ ಕೊಡುಗೆ ಲಭ್ಯ ಎಂದು ಕಂಪನಿ ಹೇಳಿದೆ.

ADVERTISEMENT

ಕಳೆದ ಆಗಸ್ಟ್‌ನಲ್ಲಿ ಚಾಟ್‌ಜಿಪಿಡಿ ಗೋ ಭಾರತದಲ್ಲಿ ಬಿಡುಗಡೆಯಾಯಿತು. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಈ ನೂತನ ಮಾದರಿ ಅಗ್ಗ ಮತ್ತು ಹೆಚ್ಚು ಮಾಹಿತಿ ನೀಡಬಲ್ಲದದು. ಬಿಡುಗಡೆಗೊಂಡ ಮೊದಲ ತಿಂಗಳಲ್ಲೇ ಪಾವತಿಸಿ ಚಂದಾದಾರಿಕೆ ಪಡೆದವರ ಸಂಖ್ಯೆ ದ್ವಿಗುಣವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಚಾಟ್‌ಜಿಪಿಟಿಯನ್ನು ಜಗತ್ತಿನಲ್ಲಿ ವಿಸ್ತರಿಸಲು ಓಪನ್‌ಎಐ ನಿರ್ಧರಿಸಿದ ನಂತರ ಸದ್ಯ 90 ರಾಷ್ಟ್ರಗಳಿಗೆ ಪ್ರವೇಶ ಪಡೆದಿದೆ. ಭಾರತದಲ್ಲಿ ಚಾಟ್‌ಜಿಪಿಟಿ ಬಳಕೆ ವ್ಯಾಪಕವಾಗಿದೆ. ಡೆವೆಲಪರ್‌ಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಓಪನ್‌ಎಐನ ಅತ್ಯಾಧುನಿಕ ಸಲಕರಣೆಯನ್ನು ಬಳಸುತ್ತಿದ್ದಾರೆ ಎಂದಿದೆ.

‘ಭಾರತ ಮೊದಲು’ ಎಂಬ ಕಂಪನಿಯ ಪರಿಕಲ್ಪನೆಯಡಿ ಈ ಪ್ರಚಾರದ ಅವಧಿಯನ್ನು ಕಂಪನಿ ಆರಂಭಿಸಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ವ್ಯಾಪಕವಾಗಿದ್ದು, ಮುಂದಿನ ವರ್ಷ ನಡೆಯಲಿರುವ ಎಐ ಶೃಂಗಕ್ಕೆ ಇದು ಪೂರಕವೆಂಬಂತಿದೆ’ ಎಂದು ಕಂಪನಿಯ ಉಪಾಧ್ಯಕ್ಷ ಮತ್ತು ಚಾಟ್‌ಜಿಪಿಟಿ ಅಧ್ಯಕ್ಷ ನಿಕ್ ಟುರ್ಲೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.