ADVERTISEMENT

ಐಫೋನ್ 16ಇ ಬಿಡುಗಡೆ: ಅತ್ಯಂತ ಅಗ್ಗದ ಆ್ಯಪಲ್ ಫೋನ್ ಬೆಲೆ, ವೈಶಿಷ್ಟ್ಯಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2025, 6:37 IST
Last Updated 20 ಫೆಬ್ರುವರಿ 2025, 6:37 IST
<div class="paragraphs"><p>ಆ್ಯಪಲ್ ಐಫೋನ್ 16ಇ - ಆ್ಯಪಲ್‌ನ ಹೊಸ ಮತ್ತು ಅಗ್ಗದ ಫೋನ್</p></div>

ಆ್ಯಪಲ್ ಐಫೋನ್ 16ಇ - ಆ್ಯಪಲ್‌ನ ಹೊಸ ಮತ್ತು ಅಗ್ಗದ ಫೋನ್

   

ಆ್ಯಪಲ್

ಬೆಂಗಳೂರು: ಐಫೋನ್ ಎಸ್ಇ 4 ಬಿಡುಗಡೆ ಬಗ್ಗೆ ಹಲವಾರು ತಿಂಗಳುಗಳಿಂದ ಸಾಕಷ್ಟು ಕುತೂಹಲಗಳಿದ್ದವು. ಆದರೆ, ಆ್ಯಪಲ್ ಕಂಪನಿಯು ಐಫೋನ್ 16ಇ (iPhone 16e) ಎಂಬ ವಿನೂತನ ಮಾದರಿಯನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಮೂಲಕ ಕುತೂಹಲಗಳಿಗೆ ತೆರೆ ಬಿದ್ದಿದೆ. ಐಫೋನ್ 16ಇ ಎಂಬುದು ಆ್ಯಪಲ್ 16 ಸರಣಿಗೆ ಸೇರ್ಪಡೆಯಾಗಿರುವ ಹೊಸ ಮಾದರಿಯ ಅಗ್ಗದ ಫೋನ್.

ADVERTISEMENT

ಅತ್ಯಾಧುನಿಕ ಎ18 ಚಿಪ್, 6.1 ಇಂಚಿನ OLED ಡಿಸ್‌ಪ್ಲೇ, 48 ಮೆಗಾಪಿಕ್ಸೆಲ್ ಫ್ಯೂಶನ್ ಕ್ಯಾಮೆರಾ ಮುಂತಾದ ಫ್ಲ್ಯಾಗ್‌ಶಿಪ್-ಹಂತದ ವೈಶಿಷ್ಟ್ಯಗಳು ಇದರಲ್ಲಿದ್ದು, ಆ್ಯಪಲ್ ಕಂಪನಿಯೇ ಮೊದಲ ಬಾರಿ ರೂಪಿಸಿದ ಸಿ1 ಎಂಬ ಸೆಲ್ಯುಲಾಲ್ ಮೋಡೆಮ್ ಅನ್ನು ಹೊಂದಿದೆ.

ಐಫೋನ್ 16ಇ: ಭಾರತದಲ್ಲಿ ಬೆಲೆ ಮತ್ತು ಮಾರಾಟದ ಕೊಡುಗೆಗಳು

ಹೊಸ ಐಫೋನ್ 16ಇ ಬೆಲೆಯು 128 ಜಿಬಿ ಆವೃತ್ತಿಗೆ ₹59,990 ಹಾಗೂ 256ಜಿಬಿ ಆವೃತ್ತಿಗೆ ₹64,999 ಇದ್ದು, ನಾಳೆಯಿಂದ (ಫೆ.21) ಪ್ರಿ-ಆರ್ಡರ್ ಆರಂಭವಾಗಲಿದೆ ಮತ್ತು ಫೆ.28ರಿಂದ ಭಾರತದಲ್ಲಿ ಲಭ್ಯವಾಗಲಿದೆ.

ಆ್ಯಪಲ್ ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಆ್ಯಪಲ್ ಮಾರಾಟಗಾರರಲ್ಲಿ ಸಾಧನವು ಲಭ್ಯವಿದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 12 ತಿಂಗಳ ವೆಚ್ಚ-ರಹಿತ ಇಎಂಐ ಆರಂಭಿಕ ಕೊಡುಗೆಯಾಗಿ ₹5000 ತಕ್ಷಣದ ರಿಯಾಯಿತಿ ದೊರೆಯಲಿದೆ.

ಐಫೋನ್ 16ಇ ಪ್ರಮುಖ ವೈಶಿಷ್ಟ್ಯಗಳು

  • 6.1 ಇಂಚು ಸೂಪರ್ ರೆಟಿನಾ XDR OLED ಡಿಸ್‌ಪ್ಲೇ

  • A18 ಚಿಪ್, 6-ಕೋರ್ ಸಿಪಿಯು ಮತ್ತು 4-ಕೋರ್ ಜಿಪಿಯು

  • ಅತ್ಯಾಧುನಿಕ ಆ್ಯಪಲ್ ಇಂಟೆಲಿಜೆನ್ಸ್ ಒಳಗೊಂಡ ಐಒಎಸ್ 18 ಕಾರ್ಯಾಚರಣಾ ವ್ಯವಸ್ಥೆ

  • 48 ಮೆಗಾಪಿಕ್ಸೆಲ್ ಸಾಮರ್ಥ್ಯದ ಫ್ಯೂಶನ್ ಕ್ಯಾಮೆರಾ (ಸಿಂಗಲ್ ಲೆನ್ಸ್)

  • 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಟ್ರೂ-ಡೆಪ್ತ್ ಆಟೋಫೋಕಸ್ ಸೆಲ್ಫೀ ಕ್ಯಾಮೆರಾ

  • ಇದರ ಬ್ಯಾಟರಿಯು ಐಫೋನ್ 11ಕ್ಕಿಂತ ಆರು ಗಂಟೆ ಹೆಚ್ಚು ಕಾಲ ಬರಲಿದೆ ಎಂದು ಆ್ಯಪಲ್ ಹೇಳಿದೆ.

  • ಯುಎಸ್‌ಬಿ - ಸಿ ಚಾರ್ಜಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಬೆಂಬಲ

  • ಐಪಿ-68 ರೇಟಿಂಗ್ ಇದ್ದು, ದೂಳು ಮತ್ತು ಜಲ ನಿರೋಧಕತೆ ಇದೆ.

ಐಫೋನ್ 16ಇ ಫೋನ್, ಆ್ಯಪಲ್ ಕಂಪನಿಯ ಅತ್ಯಂತ ಅಗ್ಗದ ಆ್ಯಪಲ್ 16 ಸರಣಿಯ ಸ್ಮಾರ್ಟ್‌ಫೋನ್ ಆಗಿದ್ದು, ಅದೀಗ ಆ್ಯಪಲ್ ಎಸ್ಇ ಸರಣಿಯ ಬದಲಿಗೆ ಮುಂದುವರಿಯಲಿದೆ. ಹಿಂದಿನ ಐಫೋನ್ ಎಸ್ಇ3 ಫೋನ್‌ಗೆ ಹೋಲಿಸಿದರೆ, ಆ್ಯಪಲ್ 16ಇ ಫೋನ್‌ನಲ್ಲಿ ಒಲೆಡ್ (OLED) ಡಿಸ್‌ಪ್ಲೇ, ಫೇಸ್ ಐಡಿ, ಎ18 ಚಿಪ್, ಆ್ಯಕ್ಷನ್ ಬಟನ್ ಮತ್ತಿತರ ಪ್ರಮುಖ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಹಿಂದಿನ ಎಸ್ಇ ಫೋನ್‌ಗಳಿಗೆ ಹೋಲಿಸಿದರೆ, 12 ಗಂಟೆ ಹೆಚ್ಚು ಕಾಲ ಬ್ಯಾಟರಿ ಬಾಳಿಕೆ ಇರುತ್ತದೆ ಮತ್ತು ಡಿಸ್‌ಪ್ಲೇ (ಸ್ಕ್ರೀನ್) ಗಾತ್ರವೂ ಹಿಂದಿನ ಎಸ್ಇ ಸರಣಿಯ ಫೋನ್‌ಗೆ ಹೋಲಿಸಿದರೆ ದೊಡ್ಡದಾಗಿದೆ.

ಎಐ ಸಾಮರ್ಥ್ಯ

ಎ18 ಚಿಪ್ ಇದ್ದು, ಐಫೋನ್ 16ಇಯಲ್ಲಿ ಸುಲಲಿತವಾದ ಮಲ್ಟಿಟಾಸ್ಕಿಂಗ್, ಗೇಮಿಂಗ್ ಸಾಧ್ಯ. ಇದರಲ್ಲಿ ಅತ್ಯಾಧುನಿಕ ಆ್ಯಪಲ್ ಇಂಟೆಲಿಜೆನ್ಸ್ ಬೆಂಬಲವಿದೆ. ಸಿರಿ ಜೊತೆಗೆ ಸಂವಾದ, ಜೆನ್‌ಮೋಜಿ, ಸ್ಮಾರ್ಟ್ ಫೋಟೊ ಎಡಿಟಿಂಗ್ ಮತ್ತು ಪಠ್ಯ ಹುಡುಕಾಟದ ಸ್ಮಾರ್ಟ್ ವೈಶಿಷ್ಟ್ಯಗಳಿವೆ.

48 ಮೆಗಾಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಇದ್ದು, ಹೈ-ರೆಸೊಲ್ಯುಶನ್ ಚಿತ್ರಗಳು ಸೆರೆಯಾಗುತ್ತವೆ. ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಹಾಗೂ ಡಾಲ್ಬಿ ವಿಶನ್ ಸಹಿತ 4ಕೆ ವಿಡಿಯೊ ದಾಖಲೀಕರಣ ಸಾಧ್ಯ.

ಆ್ಯಪಲ್ ಐಫೋನ್ 16ಇಯಲ್ಲಿ ಎಮರ್ಜೆನ್ಸಿ ಎಸ್ಒಎಸ್, ರಸ್ತೆಬದಿ ಸಹಾಯ ಮತ್ತು ಉಪಗ್ರಹದ ಮೂಲಕ ಸಂದೇಶಗಳನ್ನು ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದ್ದು, ಸೆಲ್ಯುಲಾರ್ ಅಥವಾ ವೈ-ಫೈ ಸಿಗ್ನಲ್‌ಗಳು ಇಲ್ಲದಿರುವೆಡೆಯಲ್ಲೂ ಉಪಗ್ರಹ ಸಂಪರ್ಕದ ಮೂಲಕ ಇವುಗಳು ಕೆಲಸ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.