ಪಿಎಸ್ಎಲ್ವಿ ರಾಕೇಟ್ ಉಡ್ಡಯನದ ಸಂಗ್ರಹ ಚಿತ್ರ
ಬೆಂಗಳೂರು: ಬಾಹ್ಯಾಕಾಶದಲ್ಲಿ ಪರಸ್ಪರ ದೂರದಲ್ಲಿರುವ ಎರಡು ಉಪಗ್ರಹಗಳು ಸಂಧಿಸುವ ಇಸ್ರೊದ ಮಹತ್ವಾಕಾಂಕ್ಷಿ ಸ್ಪೇಸ್ ಡಾಕಿಂಗ್ ಯೋಜನೆಗೆ ಕ್ಷಣ ಗಣನೆ ಆರಂಭವಾಗಿದೆ. ಇಂದು (ಡಿ. 30) ರಾತ್ರಿ 10ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೇಟ್ ಮೂಲಕ ಎರಡು ಉಪಗ್ರಹಗಳು ಕಕ್ಷೆ ಸೇರಲಿವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಸ್ಪೇಸ್ ಡಾಕಿಂಗ್ ಪ್ರಯೋಗ (ಸ್ಪೆಡೆಕ್ಸ್) ಎಂಬ ವಿನೂತನ ಪ್ರಯೋಗಕ್ಕೆ ಕೈಹಾಕಿದೆ. ಈ ಪ್ರಯೋಗದಲ್ಲಿ ನಭಕ್ಕೆ ಚಿಮ್ಮುವ ರಾಕೇಟ್‌ನಿಂದ ನಿಗದಿತ ಕಕ್ಷೆಯನ್ನು ತಲುಪುವ ಎರಡು ಅವಳಿ ಉಪಗ್ರಹಗಳು ಮೊದಲು ದೂರವಾಗಿ, ನಂತರ ಕ್ರಮವಾಗಿ ಹತ್ತಿರ ಸೇರುತ್ತ, ಆನಂತರ ಒಂದೇ ಆಗಿ ಕಾರ್ಯಾಚರಣೆ ನಡೆಸುವ ಯೋಜನೆ ಇದಾಗಿದೆ. ಇದು ಯಶಸ್ವಿಯಾಗಿದ್ದೇ ಆದಲ್ಲಿ, ಭಾರತದ್ದೇ ಆದ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಈ ಪ್ರಯೋಗ ದಾರಿ ಮಾಡಿಕೊಡಲಿದೆ. ಆ ಮೂಲಕ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಿರುವ ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ.
ಈ ಯೋಜನೆಯಡಿಯಲ್ಲಿ ಒಂದೇ ರೀತಿಯ ‘ಎಸ್‌ಡಿಎಕ್ಸ್01 ಚೇಸರ್‘ ಹಾಗೂ ‘ಎಸ್‌ಡಿಎಕ್ಸ್02 ಟಾರ್ಗೆಟ್’ ಎಂಬ ಎರಡು ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್‌ವಿ ರಾಕೇಟ್ ಸೋಮವಾರ ರಾತ್ರಿ ಉಡ್ಡಯನಗೊಳ್ಳಲಿದೆ. ಕ್ರಿಸ್ಟನ್ಡ್ ಭಾರತೀಯ ಡಾಕಿಂಗ್ ವ್ಯವಸ್ಥೆಯ ಈ ಯೋಜನೆಯಲ್ಲಿ ಅವಳಿ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಯಲ್ಲಿ ಸೇರಿಸಲು ಇಸ್ರೊ ಯೋಜನೆ ರೂಪಿಸಿದೆ.
ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ಮುನ್ನುಡಿ ಒಂದು ಕಾರಣವಾದರೆ, ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಉಪಗ್ರಹಗಳ ಜೀವಿತಾವಧಿಯನ್ನು ಇನ್ನಷ್ಟು ಕಾಲ ವಿಸ್ತರಿಸುವ ಯೋಜನೆಗೂ ಈ ಪ್ರಯೋಗ ನೆರವಾಗಲಿದೆ. ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಂ ಸೇರಿದಂತೆ ಇಸ್ರೊದ ಹಲವು ವಿಭಾಗಗಳು ಈ ಉಪಗ್ರಹ ನಿರ್ಮಾಣದಲ್ಲಿ ಕೈಜೋಡಿಸಿವೆ.
ಜಿಯೊ ಸ್ಟೇಷನರಿ ಉಪಗ್ರಹಗಳು ಅತ್ಯಂತ ದುಬಾರಿ. ಜತೆಗೆ 8ರಿಂದ 10 ವರ್ಷಗಳ ಕಾಲ ಕಾರ್ಯಾಚರಣೆ ನಡೆಸುವಷ್ಟು ಸಾಮರ್ಥ್ಯ ಹೊಂದಿರುತ್ತವೆ. ಕಾರ್ಯಾಚರಣೆಗೆ ಅಗತ್ಯವಿರುವ ಇಂಧನ ಖಾಲಿಯಾಗಿ ಇವು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಈ ಮಾದರಿಯ ಉಪಗ್ರಹಗಳ ಇತರ ಎಲ್ಲಾ ಉಪಕರಣಗಳೂ ಉತ್ತಮವಾಗಿಯೇ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಸ್ಪೇಸ್ ಡಾಕಿಂಗ್ ಟೆಕ್ನಾಲಜಿ ಮೂಲಕ ಪ್ರೊಪಲ್ಶನ್ ಘಟಕವನ್ನು ಬದಲಿಸಿ, ಇರುವ ಉಪಗ್ರಹವನ್ನು ಇನ್ನಷ್ಟು ವರ್ಷ ಕೆಲಸ ಮಾಡಲು ಯೋಗ್ಯವನ್ನಾಗಿಸಲು ಸಾಧ್ಯವಾಗಲಿದೆ ಎನ್ನುವುದು ಇಸ್ರೊ ತಜ್ಞರ ಮಾತು.
ಎರಡು ನೌಕೆಗಳನ್ನು ಪರಿಣಾಮಕಾರಿಯಾಗಿ ಬಳಸುವ ಇಸ್ರೊದ ಸ್ಪೆಡೆಕ್ಸ್ ತಂತ್ರಜ್ಞಾನವು ಮಿತವ್ಯಯಿ ಯೋಜನೆಯಾಗಿದೆ. ಈ ತಂತ್ರಜ್ಞಾನದಿಂದಾಗ ಭಾರತದ ಚಂದ್ರನ ಅಂಗಳಕ್ಕೆ ಗಗನಯಾನಿಗಳನ್ನು ಕಳುಹಿಸುವ, ಚಂದ್ರನಿಂದ ಮರಳಿ ಭೂಮಿಗೆ ಬರುವ, ಭಾರತೀಯ ಅಂತರಿಕ್ಷ ನಿಲ್ದಾಣ (BAS) ಇತ್ಯಾದಿಗಳಿಗೆ ಮುನ್ನುಡಿ ಬರೆಯಲಿದೆ. ಸ್ಪೆಡೆಕ್ ಯೋಜನೆಯಲ್ಲಿ ಸಮಾನ ಯೋಜನೆಯ ಎರಡು ವಸ್ತುಗಳನ್ನು ವಿವಿಧ ರಾಕೇಟ್‌ಗಳ ಮೂಲಕ ಉಡ್ಡಯನ ನಡೆಸಿ, ನಂತರ ಅವರು ನಿಗದಿತ ಕಕ್ಷೆಯಲ್ಲಿ ಒಂದಾಗುವ ಯಶಸ್ವಿ ಯೋಜನೆಯಾಗಿದೆ.
ಸಂಧಿಸಲು ಸಮೀಪವಾಗುತ್ತಿರುವ ಅವಳಿ ಉಪಗ್ರಹಗಳು
ಈ ಅವಳಿ ಉಪಗ್ರಹಗಳಲ್ಲಿ ಒಂದನ್ನು ಚೇಸರ್ ಎಂದೂ, ಮತ್ತೊಂದನ್ನು ಟಾರ್ಗೆಟ್ ಎಂದೂ ಕರೆಯಲಾಗುತ್ತದೆ. ಇವುಗಳು ತಲಾ 220 ಕೆ.ಜಿ. ತೂಗುತ್ತವೆ. ಪಿಎಸ್‌ಎಲ್‌ವಿ–ಸಿ60 ರಾಕೇಟ್ ಮೂಲಕ ಉಡ್ಡಯನಗೊಳ್ಳುವ ಈ ಉಪಗ್ರಹಗಳು, ಭೂಮಿಯಿಂದ 470 ಕಿ.ಮೀ. ವೃತ್ತಾಕಾರದ ಕಕ್ಷೆಯಲ್ಲಿ ಹಾಗೂ 55 ಡಿಗ್ರಿ ಓರೆಯಾಗಿ, ಸ್ಥಳೀಯ ಕಾಲಮಾನ ಪ್ರಕಾರ 66 ದಿನಗಳಿಗೆ ಒಂದು ಸುತ್ತು ಹಾಕಲಿವೆ. ಪಿಎಸ್‌ಎಲ್‌ವಿ ರಾಕೇಟ್‌ನಿಂದ ಹೊರಗೆ ಚಿಮ್ಮುವ ಈ ಉಪಗ್ರಗಳು ಪ್ರತ್ಯೇಕಗೊಳ್ಳುವ ಹೊತ್ತಿಗೆ ಒಂದು ಸಣ್ಣ ಓಗವನ್ನು ಇದು ನೀಡಲಿದೆ. ಇದರಿಂದ ಟಾರ್ಗೆಟ್ ಮತ್ತು ಚೇಸರ್ ನಡುವೆ 10ರಿಂದ 20ಕಿ.ಮೀ. ಅಂತರ ಸೃಷ್ಟಿಯಾಗಲಿದೆ. ಹೀಗೆ ಪ್ರತ್ಯೇಕಗೊಂಡ ಉಪಗ್ರಹಗಳು, ಪ್ರೊಪಲ್ಶನ್ ವ್ಯವಸ್ಥೆ ಮೂಲಕ ನಿಗದಿತ ಉಪಗ್ರಹದತ್ತ ಪರಸ್ಪರ ಸಾಗಲಿವೆ.
ಈ ಪ್ರಯತ್ನದ ಅಂತ್ಯದಲ್ಲಿ ಟಾರ್ಗೆಟ್ ಮತ್ತು ಚೇಸರ್ ಒಂದೇ ಕಕ್ಷೆಗೆ ಬರುತ್ತವೆ. ಆದರೆ 20 ಕಿ.ಮೀ. ದೂರವನ್ನೇ ಕಾಪಾಡಿಕೊಳ್ಳಲಿವೆ. ಇದನ್ನು ‘ಫಾರ್ ರೆಂಡವೂಸ್’ ಎಂದು ಕರೆಯಲಾಗುತ್ತದೆ. ಮುಂದಿನ ಹಂತದಲ್ಲಿ ಟಾರ್ಗೆಟ್ ಉಪಗ್ರಹವನ್ನು ಚೇಸರ್ ಉಪಗ್ರಹವು ಹಂತಹಂತವಾಗಿ ಸಮೀಪಿಸುತ್ತದೆ. 5 ಕಿ.ಮೀ., 1.5 ಕಿ.ಮೀ., 500 ಮೀ, 225 ಮೀ., 15 ಮೀ., 3 ಮೀ. ಹಾಗೂ ಅಂತಿಮವಾಗಿ ಪರಸ್ಪರ ಒಂದುಗೂಡಲಿವೆ.
ಹೀಗೆ ಒಂದುಗೂಡಲಿರುವ ಪ್ರತ್ಯೇಕಗೊಂಡ ಅವಳಿ ಉಪಗ್ರಗಳು ಪ್ರತಿ ಗಂಟೆಗೆ 28,800 ಕಿ.ಮೀ. ವೇಗದಲ್ಲಿ ತಮ್ಮ ನಿಗದಿತ ಕಕ್ಷೆಯಲ್ಲಿ ಸುತ್ತಲಿವೆ. ಅವುಗಳ ವೇಗವು ಪ್ರತಿ ಗಂಟೆಗೆ 0.036 ಕಿ.ಮೀ.ರಷ್ಟು ಹಂತಹಂತವಾಗಿ ಕಡಿಮೆಯಾಗಲಿದೆ. ಕಡಿಮೆ ಘರ್ಷಣೆಯಲ್ಲಿ ಎರಡು ಉಪಗ್ರಹಗಳು ಸೇರುವ ಹೊತ್ತಿಗೆ ಪ್ರತಿ ಸೆಕೆಂಡ್‌ಗೆ 10 ಮಿ.ಮೀ. ಅಷ್ಟು ವೇಗದಲ್ಲಿ ಸಂಧಿಸಲಿವೆ. ಎರಡು ಉಪಗ್ರಹಗಳು ಸುರಕ್ಷಿತವಾಗಿ ಸೇರಿದ ನಂತರ, ಉಪಗ್ರಹಗಳ ನಡುವೆ ವಿದ್ಯುತ್ ಸಂಪರ್ಕ ನಡೆಯಲಿದೆ. ಈ ಉಪಗ್ರಹಗಳು 2 ವರ್ಷ ಕಾರ್ಯಾಚರಣೆ ನಡೆಸಲಿವೆ.
ಸ್ಪೆಡೆಕ್ಸ್ ಯೋಜನೆಗೆ ಇಸ್ರೊ ಸ್ವದೇಶಿ ತಂತ್ರಜ್ಞಾನವನ್ನು ಬಳಸಿದೆ. ಇದರಲ್ಲಿ ಎರಡು ಉಪಗ್ರಹಗಳು ಸೇರುವ ಡಾಕಿಂಗ್ ವ್ಯವಸ್ಥೆ, ಸಂಧಿಸುವ ಹಾಗೂ ಡಾಕಿಂಗ್ ಸಂವೇದಕ ಸೂಟ್‌ಗಳು, ವಿದ್ಯುತ್ ಪರಸ್ಪರ ಪ್ರವಹಿಸುವ ವ್ಯವಸ್ಥೆ, ನವೀನ ಬಗೆಯ ಡಾಕಿಂಗ್ ತಂತ್ರಜ್ಞಾನ, ಅವಳಿ ಉಪಗ್ರಹಗಳ ನಡುವಿನ ಸಂವಹನ ವ್ಯವಸ್ಥೆ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಇದು ಹೊಂದಿದೆ.
ಭಾರತೀಯ ಬಾಹ್ಯಾಕಾಶ ಕೇಂದ್ರದ ಕಾಲ್ಪನಿಕ ಚಿತ್ರ
ಈ ಉಪಗ್ರಹಗಳು ಗಾತ್ರ ಹಾಗೂ ತೂಕದಲ್ಲಿ ಚಿಕ್ಕದು. ಹೀಗಾಗಿ ಎರಡೂ ಸಂಧಿಸುವ ಕಾರ್ಯಾಚರಣೆ ಹೆಚ್ಚು ನಿಕರವಾಗಿರಬೇಕಾಗಿರುವುದರಿಂದ ಅದು ಹಚ್ಚು ಸವಾಲಿನಿಂದ ಕೂಡಿರಲಿದೆ ಎಂದು ಇಸ್ರೊ ಹೇಳಿದೆ. ಒಮ್ಮೆ ಈ ಎರಡು ಉಪಗ್ರಹಗಳು ಸಂಧಿಸುವ ಹಾಗೂ ಪ್ರತ್ಯೇಕಗೊಳ್ಳುವ ಪ್ರಾಯೋಗಿಕ ಕಾರ್ಯಾಚರಣೆ ಪೂರ್ಣಗೊಂಡ ನಂತರ, ಈ ಎರಡೂ ಅವಳಿ ಉಪಗ್ರಹಗಳು ಪ್ರತ್ಯೇಕಗೊಂಡು ತಮಗೆ ನಿರ್ಧರಿಸಲಾದ ಕಾರ್ಯಾಚರಣೆಯತ್ತ ಸಾಗಲಿವೆ.
ಈ ಉಪಗ್ರಹಗಳಲ್ಲಿ ಎಸ್‌ಡಿಎಕ್ಸ್01 ಎಂಬ ಅತ್ಯಾಧುನಿಕ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಮೂಲಕ ಭೂಮಿಯ ನೈಸರ್ಗಿಕ ಸಂಪತ್ತಿನ ಮೇಲೆ ಉಪಗ್ರಹಗಳು ಕಣ್ಣಿಡಲಿವೆ. ಎಸ್‌ಡಿಎಕ್ಸ್02 ಕ್ಯಾಮೆರಾದ ಮೂಲಕ ಬಾಹ್ಯಾಕಾಶದಲ್ಲಿ ಎದುರಾಗಲಿರುವ ಕೆಲ ವಿಕಿರಣಗಳ ಪತ್ತೆಗೆ ಇದು ನೆರವಾಗಲಿದೆ.
ಸ್ಪೆಡೆಕ್ಸ್ ಎಂಬ ಈ ನೌಕೆಗಳು ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್‌ಎಸ್‌ವಿ) ಸಿದ್ಧಗೊಂಡಿವೆ. ಇದಕ್ಕೆ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ, ಲಿಕ್ವಿಡ್ ಪ್ರೊಪಲ್ಶನ್ ಸಿಸ್ಟಂ ಕೇಂದ್ರ, ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್, ಇಸ್ರೊ ಆಂತರಿಕ ವ್ಯವಸ್ಥೆ ಹಾಗೂ ಎಲ್‌ಇಒಎಸ್ ಕೈಜೋಡಿಸಿವೆ. ಈ ಸಂಪೂರ್ಣ ಯೋಜನೆಯ ಪರೀಕ್ಷೆಯು ಬೆಂಗಳೂರಿನಲ್ಲಿರುವ ‘ಅನಂತ ತಂತ್ರಜ್ಞಾನ ಸಂಸ್ಥೆ’ಯು ನಿರ್ವಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.