ADVERTISEMENT

ಆನ್‌ಲೈನ್ ಶಾಪಿಂಗ್: ಪಾರ್ಸಲ್ ಮೇಲಿನ ವಿಳಾಸ ಎಸೆಯುತ್ತೀರಾ? ಮೋಸ ಹೋದೀರಿ ಎಚ್ಚರ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 11:15 IST
Last Updated 10 ಡಿಸೆಂಬರ್ 2025, 11:15 IST
<div class="paragraphs"><p>ಸಾಂದರ್ಭಿಕ ಚಿತ್ರ:</p></div>

ಸಾಂದರ್ಭಿಕ ಚಿತ್ರ:

   

ಎಐ

ಬೆಂಗಳೂರು: ಈಗಿನ ಆನ್‌ಲೈನ್ ಯುಗದಲ್ಲಿ ಮೋಸದ ಜಾಲಗಳು ಬೆಳಕಿಗೆ ಬರುವುದು ಹೊಸದೇನಲ್ಲ. ಪ್ರತಿನಿತ್ಯ ಒಂದಿಲ್ಲ ಒಂದು ರೂಪದ ಆನ್‌ಲೈನ್ ವಂಚನೆಗಳು ಬೆಳಕಿಗೆ ಬರುವುದನ್ನು ಕಾಣಬಹುದು. ಸೈಬರ್ ಪೊಲೀಸರು ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಜನರು ಆನ್‌ಲೈನ್ ವಂಚಕರ ಜಾಲಕ್ಕೆ ಒಳಗಾಗುತ್ತಿದ್ದಾರೆ.

ADVERTISEMENT

ಹಿಂದೆಲ್ಲ, ಆನ್‌ಲೈನ್ ವಂಚನೆ ಮಾಡುವ ವ್ಯಕ್ತಿಗಳು ನಿಗೂಢ ಸ್ಥಳದಲ್ಲಿ ಕುಳಿತು ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದರು. ಇದೀಗ ಪ್ರತಿಷ್ಠಿತ ಆನ್‌ಲೈನ್ ಶಾಪಿಂಗ್ ಕಂಪನಿಗಳಾದ ಫ್ಲಿಪ್‌ಕಾರ್ಟ್, ಅಮೇಜಾನ್ ಹೆಸರಿನಲ್ಲಿ ವಂಚಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ ಜನರನ್ನು ವಂಚಿಸಲು ಹೊಸ ಹೊಸ ವಿಧಾನಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಅದರಲ್ಲೂ, ನಾವು ಶಾಪಿಂಗ್ ಮಾಡಿ ಬಿಸಾಕಿದ ಬಾಕ್ಸ್ ಅಥವಾ ಪ್ಯಾಕೆಟ್‌ ಮೇಲಿರುವ ನಮ್ಮ ವಿಳಾಸವನ್ನು ತೆಗೆದುಕೊಂಡು, ಅದಕ್ಕೆ ಯಾವುದೋ ಹಳೆಯ ಹಾಗೂ ಉಪಯೋಗಕ್ಕೆ ಬಾರದ ವಸ್ತುಗಳನ್ನು ಹಾಕಿ ಮನೆಗೆ ತಂದುಕೊಟ್ಟು ಹೋಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಇದೀಗ ಇದೇ ರೀತಿಯ ಆನ್‌ಲೈನ್ ಶಾಪಿಂಗ್‌ನಿಂದ ವಂಚನೆಗೆ ಒಳಗಾಗಿರುವ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.

‘ಅಮೆಜಾನ್ ನಂಥ ಖ್ಯಾತ ಕಂಪೆನಿಗಳ ಹೆಸರಿನಲ್ಲಿ ಆನ್‌ಲೈನ್ ಮಾರ್ಕೆಟಿಂಗ್ ಮೋಸದ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ನನಗೆ ಇಂಥ ಮೋಸದ ಅನುಭವ ಆಗಿದೆ. ನನ್ನ ಹೆಸರಿನಲ್ಲಿ ಕಳೆದ ಡಿಸೆಂಬರ್ 4ರಂದು ಪಾರ್ಸೆಲ್ ಒಂದು ನಾನಿಲ್ಲದಾಗ ಮನೆಗೆ ಬಂತು. ನನ್ನ ತಾಯಿ ನಾನೆ ಆರ್ಡರ್ ಮಾಡಿರಬಹುದೆಂದು ₹1300 ಪಾವತಿಸಿ ಪಾರ್ಸೆಲ್ ತೆಗೆದುಕೊಂಡಿದ್ದರು’.

‘ಆದರೆ, ನಾನು ಯಾವುದೇ ವಸ್ತುವನ್ನು ಆರ್ಡರ್ ಮಾಡಿರಲಿಲ್ಲ. ಅನುಮಾನಗೊಂಡು ಪ್ಯಾಕ್ ತೆರೆದು ನೋಡಿದರೆ ಒಳಗೆ ಎರಡು ಹಳೆ ಬಟ್ಟೆಗಳಿದ್ದವು. ನಾವು ಬಿಸಾಕುವ ಹಳೆ ಪಾರ್ಸೆಲ್‌ಗಳ ಮೇಲಿನ ಹೆಸರು. ಅಡ್ರೆಸ್‌ನ ಲೇಬಲ್ ಬಳಸಿ, ಈ ಜಾಲ ಇಂಥ ಮೋಸ ಮಾಡುತ್ತಿದೆ. ಹಾಗಾಗಿ ಪಾರ್ಸೆಲ್ ತೆರೆದು ಹೊರಗೆ ಬಿಸಾಡುವ ಮುನ್ನ, ಅಡ್ರೆಸ್ ಇತ್ಯಾದಿ ವಿವರಗಳ ಲೇಬಲ್ ಅನ್ನು ಅಳಿಸಿಹಾಕುವುದನ್ನು ಮರೆಯಬಾರದು’ ಎಂದು ಗಿರಿನಗರದ ನಿವಾಸಿ ಆರ್.ಬಿ. ಭೂಮಿಕಾ ತಿಳಿಸಿದ್ದಾರೆ.

ಫೇಸ್ ಬುಕ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಆಕರ್ಷಕ ಆಫರ್‌ಗಳನ್ನು ನಂಬಿ ಮೋಸ ಹೋಗುತ್ತಿದ್ದೇವೆ. ನಾವು ಲಿಂಕ್ ಕ್ಲಿಕ್ ಮಾಡಿದ ತಕ್ಷಣವೇ ಪೇಮೆಂಟ್ ಗೆಟ್ ತೆರೆದುಕೊಳ್ಳುತ್ತದೆ. ಪೇಮೆಂಟ್ ಆದ 2 ದಿನದಲ್ಲಿ ನಮ್ಮ ಹೆಸರಿನಲ್ಲಿ ಪಾರ್ಸೆಲ್ ಏನೋ ಬರುತ್ತದೆ. ಆದರೆ ಅದರಲ್ಲಿ ಯಾವುದೋ ಹಳೆ ಬಟ್ಟೆ ಇರುತ್ತದೆ. ಹೀಗಾಗಿ ಕ್ಯಾಶ್ ಆನ್ ಡೆಲಿವರಿ ಪದ್ಧತಿ ಪಾಲಿಸುವುದು ಉತ್ತಮ ಎಂದು ಬೆಂಗಳೂರಿನ ಹೊಸಕೆರೆಹಳ್ಳಿಯ ನಿವಾಸಿ ಸವಿತಾ ಅಕ್ಷಯ ತಿಳಿಸಿದ್ದಾರೆ.

ವಂಚನೆಯಿಂದ ಪಾರಾಗಲು ಸಲಹೆಗಳು

  • ಸಾಧ್ಯವಾದಷ್ಟು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಬಳಸಿ

  • ಪಾರ್ಸೆಲ್ ತೆರದ ತಕ್ಷಣ ವಿಳಾಸವನ್ನು ಅಳಿಸಿಹಾಕಿ

  • ಒಟಿಪಿ ಖಚಿತಪಡಿಸಿಕೊಂಡ ಬಳಿಕ ಹಣ ನೀಡಿ

  • ಸಾಧ್ಯವಾದಷ್ಟು ಓಪನ್ ಬಾಕ್ಸ್ ಡಿಲೆವರಿ ಪಡೆದುಕೊಳ್ಳಿ

  • ಸಾಮಾಜಿಕ ಮಾಧ್ಯಮದಲ್ಲಿನ ಆಫರ್‌ ನೋಡಿ ಖರೀದಿಸುವುದರಿಂದ ದೂರವಿರಿ

  • ನಕಲಿ ಲಿಂಕ್‌ಗಳನ್ನು ಬಳಸಿ ಆನ್‌ಲೈನ್ ಶಾಪಿಂಗ್ ಮಾಡಬೇಡಿ

  • ನಕಲಿ ಆನ್‌ಲೈನ್ ಅಪ್ಲಿಕೇಷನ್ ಬಳಕೆ ತಪ್ಪಿಸಿ

  • ಆರ್ಡರ್ ನಿಮ್ಮ ಹೆಸರು ಮತ್ತು ವಿಳಾಸದಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ

  • ಡೆಲಿವರಿಗೆ ಬಂದಾಗ ಬಾಕ್ಸ್ ಅನ್ನು ಪರಿಶೀಲಿಸಿ ಪಡೆದುಕೊಳ್ಳಿ

  • ಬುಕ್ ಮಾಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಬಳಿಕವಷ್ಟೇ ವಸ್ತುವನ್ನು ತೆಗೆದುಕೊಳ್ಳಿ

  • ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಪ್ರತಿನಿಧಿಗೆ ಕರೆ ಮಾಡಿ

  • ಖರೀದಿಗೆ ವಸ್ತುವಿನ ರಿಟರ್ನ್ ಮತ್ತು ಹಣ ಮರುಪಾವತಿಯ ಸೌಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.