ಒಒಪನ್ಎಐ
ರಾಯಿಟರ್ಸ್ ಚಿತ್ರ
ಬೆಂಗಳೂರು: ಚಾಟ್‌ಜಿಪಿಟಿಯ ಪೋಷಕ ಸಂಸ್ಥೆ ‘ಓಪನ್‌ಎಐ’ (OpenAI) ದೇಶದಲ್ಲಿ ಮೊದಲ ಕಚೇರಿ ತೆರೆಯಲಿದ್ದು, ಈ ವರ್ಷದ ಅಂತ್ಯದಲ್ಲಿ ದೆಹಲಿಯಲ್ಲಿ ಕಚೇರಿ ಆರಂಭವಾಗಲಿದೆ.
ಬಳಕೆದಾರರ ಸಂಖ್ಯೆಯಲ್ಲಿ ಒಪನ್‌ಎಐಗೆ ಭಾರತ ಎರಡನೇ ದೊಡ್ಡ ಮಾರುಕಟ್ಟೆಯಾಗಿದ್ದು, ಹೊಸ ಕಚೇರಿ ಆರಂಭದಿಂದ ಇರದಲ್ಲಿ ಇನ್ನಷ್ಟು ಪ್ರಗತಿಯಾಗಲಿದೆ.
ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಒಡೆತನದ ಓಪನ್‌ಎಐ, ಭಾರತದಲ್ಲಿ ಕಾನೂನು ಘಟಕವಾಗಿ ಸ್ಥಾಪಿಸಲ್ಪಟ್ಟಿದ್ದು, ಸ್ಥಳೀಯ ತಂಡವನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಕಂಪನಿಯು ಶುಕ್ರವಾರ ರಾಯಿಟರ್ಸ್‌ನೊಂದಿಗೆ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದೆ.
ಭಾರತವು ಚಾಟ್‌ಜಿಪಿಟಿಗೆ ನಿರ್ಣಾಯಕ ಮಾರುಕಟ್ಟೆಯಾಗಿದ್ದು, ಈ ವಾರವಷ್ಟೇ ದೇಶದಲ್ಲಿ $4.60ಗೆ ತನ್ನ ಅಗ್ಗದ ಮಾಸಿಕ ಯೋಜನೆಯನ್ನು ಪ್ರಾರಂಭಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ 100 ಕೋಟಿ ಇಂಟರ್‌ನೆಟ್ ಬಳಕೆದಾರರು ಇದ್ದು, ಅವರನ್ನು ಒಪನ್‌ಎಐ ಗುರಿಯಾಗಿಸಿಕೊಂಡಿದೆ.
ಓಪನ್ಎಐ ಭಾರತದಲ್ಲಿ ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದು, ಚಾಟ್‌ಜಿಪಿ ಅನುಮತಿಯಿಲ್ಲದೆ ತಮ್ಮ ವಿಷಯವನ್ನು ಬಳಸುತ್ತಿದೆ ಎಂದು ಸುದ್ದಿ ಮಾಧ್ಯಮಗಳು ಮತ್ತು ಪುಸ್ತಕ ಪ್ರಕಾಶಕರು ಆರೋಪಿಸಿದ್ದಾರೆ. ಆದರೆ ಇದನ್ನು ಕಂಪನಿ ನಿರಾಕರಿಸಿದೆ.
ದೇಶಾದ್ಯಂತ ಸುಧಾರಿತ ಎಐ ಸಿಗುವಂತೆ, ಭಾರತಕ್ಕಾಗಿ ಮತ್ತು ಭಾರತದೊಂದಿಗೆ ಎಐ ನಿರ್ಮಿಸಲು ನಮ್ಮ ಬದ್ಧತೆಯ ಭಾಗವಾಗಿ ಮೊದಲ ಕಚೇರಿಯನ್ನು ತೆರೆಯುವುದು ಮತ್ತು ಸ್ಥಳೀಯ ತಂಡವನ್ನು ನಿರ್ಮಿಸುವುದು ಒಂದು ಪ್ರಮುಖ ಮೊದಲ ಹೆಜ್ಜೆಯಾಗಿದೆ ಎಂದು ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪನಿಯು ಭಾರತದಲ್ಲಿ ಗೂಗಲ್‌ನ ಜೆಮಿನೈ ಮತ್ತು AI ಸ್ಟಾರ್ಟ್‌ಅಪ್ ಪರ್ಪ್ಲೆಕ್ಸಿಟಿ ಮುಂತಾದವುಗಳಿಂದ ಬಲವಾದ ಸ್ಪರ್ಧೆಯನ್ನು ಎದುರಿಸುತ್ತಿದೆ. ಇವೆರಡೂ ಮಾರುಕಟ್ಟೆಯಲ್ಲಿ ಅನೇಕ ಬಳಕೆದಾರರಿಗೆ ತಮ್ಮ ಸುಧಾರಿತ ಯೋಜನೆಗಳನ್ನು ಉಚಿತವಾಗಿ ನೀಡುತ್ತಿದೆ.
ಭಾರತದಲ್ಲಿ ಚಾಟ್‌ಜಿಪಿಟಿ (ChatGPT)ಗೆ ಅತಿ ಹೆಚ್ಚು ವಿದ್ಯಾರ್ಥಿ ಬಳಕೆದಾರರು ಇದ್ದು, ಕಳೆದ ವರ್ಷದಲ್ಲಿ ಸಾಪ್ತಾಹಿಕ ಸಕ್ರಿಯ ಬಳಕೆದಾರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಓಪನ್‌ಎಐ ಶುಕ್ರವಾರ ಹೊಸದಾಗಿ ಹಂಚಿಕೊಂಡ ಮಾರುಕಟ್ಟೆ ದತ್ತಾಂಶದಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.