ADVERTISEMENT

ಮಡಿಚುವ ಸ್ಯಾಮ್‌ಸಂಗ್‌ 'ಝಡ್‌ ಫ್ಲಿಪ್‌' ಬಿಡುಗಡೆ: ಪುಟ್ಟ ಫೋನ್, ಅಧಿಕ ಸಾಮರ್ಥ್ಯ 

ಏಜೆನ್ಸೀಸ್
Published 12 ಫೆಬ್ರುವರಿ 2020, 7:12 IST
Last Updated 12 ಫೆಬ್ರುವರಿ 2020, 7:12 IST
ಸ್ಯಾಮ್‌ಸಂಗ್‌ 'ಝಡ್‌ ಫ್ಲಿಪ್‌' ಮಡಿಚುವ ಫೋನ್‌
ಸ್ಯಾಮ್‌ಸಂಗ್‌ 'ಝಡ್‌ ಫ್ಲಿಪ್‌' ಮಡಿಚುವ ಫೋನ್‌    
""
""

ಸ್ಯಾನ್‌ ಫ್ರಾನ್ಸಿಸ್ಕೊ:ಕೀ ಬೋರ್ಡ್‌ ಟಚ್‌ ಆಗಿ, ಟಚ್‌ ಫೆದರ್‌ ಆಗಿ, ಪುಟ್ಟ ಪರದೆ ದೊಡ್ಡ ಡಿಸ್‌ಪ್ಲೇ ಆಗಿ, ಎಲ್ಲವೂ ಸ್ಮಾರ್ಟ್‌ ಆಗಿ, ನೋಟ್‌ ಬುಕ್‌ನ ಗಾತ್ರವಾಗಿ ಮತ್ತೆ ಮರಳಿ ಅಂಗೈ ಅಗಲವಾಗಿ, ಅಲ್ಲಿಂದ ಮಡಿಚಿ ಕಿಸೆಗೆ ಸೇರುವವರೆಗೆ ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇತ್ತೀಚೆಗೆ ಸ್ಯಾಮ್‌ಸಂಗ್‌ ಭವಿಷ್ಯದ ವಿನ್ಯಾಸ ಎಂದೇ ಪ್ರಚುರ ಪಡಿಸುತ್ತ 'ಝಡ್‌ ಫ್ಲಿಪ್‌' ಮಡಿಚುವ ಫೋನ್‌ ಬಿಡುಗಡೆ ಮಾಡಿದೆ. ಇದು ಸ್ಯಾಮ್‌ಸಂಗ್‌ನ ಎರಡನೇ ಫೋಲ್ಡಿಂಗ್‌ ಸ್ಮಾರ್ಟ್‌ಫೋನ್‌.

1,380 ಡಾಲರ್‌ (ಸುಮಾರು ₹98,287) ಬೆಲೆ ನಿಗದಿ ಪಡಿಸಿಕೊಂಡು ಹೊರ ಬಂದಿರುವ ಗ್ಯಾಲಕ್ಸಿ ಝಡ್‌ ಫ್ಲಿಪ್‌ ಫೋನ್‌ನ್ನು 'ಟ್ರೆಂಡ್‌ಸೆಟ್ಟರ್‌' ಎಂದೇ ಬಣ್ಣಿಸಲಾಗುತ್ತಿದೆ. ಮಹಿಳೆಯರ ವ್ಯಾನಿಟಿ ಬ್ಯಾಗ್‌, ಪರ್ಸ್‌ಗಳಲ್ಲಿ ಅವಿತಿರುವ ಕಾಂಪ್ಯಾಕ್ಟ್‌ ಪೌಡರ್‌ ಡಬ್ಬಿಯಂತೆಯೇ ಕಾಣುವ ಹೊಸ ಫೋನ್‌ ಮೊದಲ ನೋಟಕ್ಕೆ ಸೆಳೆದುಕೊಳ್ಳುತ್ತದೆ. ಮಡಿಚಿರುವುದು ತೆರೆದರೆ 6.7 ಇಂಚು ಪರದೆಯಾಗುತ್ತದೆ. ಫೋನ್‌ ಮಡಿಚಿದರೆ ಮುಷ್ಠಿಯೊಳಗೆ ಮುಚ್ಚಿಕೊಳ್ಳಬಹುದು!

ಅತ್ಯಂತ ತೆಳುವಾದ ಗ್ಲಾಸ್‌ ಪರದೆಗೆ ಬಳಸಲಾಗಿದ್ದು, 2,00,000ಕ್ಕೂ ಅಧಿಕ ಬಾರಿ ಮಡಿಚಿ ತೆಗೆದು ಬಳಸಬಹುದಾಗಿದೆ. ಪರದೆಗೆ ಸ್ಕ್ರಾಚ್‌ ಆಗುವುದನ್ನು ತಡೆಯುವಂತೆ ವಿನ್ಯಾಸಗೊಳಿಸಿರುವುದಾಗಿ ಸ್ಯಾಮ್‌ಸಂಗ್‌ ಹೇಳಿದೆ.

ADVERTISEMENT

ಮೊಬೈಲ್‌ ಫೋನ್‌ ಬಳಕೆಯ ವಿಧಾನವನ್ನೇ ಈ ಫೋನ್‌ ಬದಲಿಸಲಿದೆ. ಗಾತ್ರ, ಬಳಸುವ ರೀತಿ,...ಹಲವು ಬದಲಾವಣೆಗೆ ಕಾರಣವಾಗಲಿದೆ. ಶುಕ್ರವಾರದಿಂದ ಝಡ್‌ ಫ್ಲಿಪ್‌ ಖರೀದಿಗೆ ಸಿಗಲಿದೆ ಎಂದು ಸ್ಯಾಮ್‌ಸಂಗ್‌ ಪ‍್ರಾಡಕ್ಟ್‌ ಮಾರ್ಕೆಟಿಂಗ್‌ ಮುಖ್ಯಸ್ಥ ರೆಬೆಕಾ ಹಿರ್ಸ್ಟ್‌ ಹೇಳಿದ್ದಾರೆ.

ಮಡಿಚಿದ್ದಾಗಲೂ ಫೋನ್‌ನ ಮುಂಬದಿಯ ಡಿಸ್‌ಪ್ಲೇ ಕರೆ, ಸಮಯದ ನೋಟಿಫಿಕೇಷನ್‌ ತೋರಿಸುತ್ತದೆ. ಫೋಟೊ ತೆಗೆಯುವುದೂ ಸಾಧ್ಯವಿದೆ.

ಸ್ಯಾಮ್‌ಸಂಗ್‌ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲ ಫೋಲ್ಡಿಂಗ್‌ ಫೋನ್‌ 'ಗ್ಯಾಲಕ್ಸಿ ಫೋಲ್ಡ್‌' ಬಿಡುಗಡೆ ಮಾಡಿತು. ಆದರೆ, ಸ್ಟ್ರೀನ್‌ನಲ್ಲಿ ಎದುರಾದ ಸಮಸ್ಯೆಗಳಿಂದ 2000 ಡಾಲರ್‌ (ಸುಮಾರು ₹ 1.5 ಲಕ್ಷ) ಬೆಲೆಯ ಫೋನ್ ಮಾರಾಟ ಮುಂದೂಡಲಾಗಿತ್ತು. ಈಗಾಗಲೇ ಮೊಟೊರೋಲಾ ಫ್ಲಿಪ್‌ ಸರಣಿಯ 'ರೇಜರ್‌' ಫೋನ್‌ ಅನಾವರಣಗೊಳಿಸಿದೆ. ಚೀನಾದ ಹುವೈ ಮತ್ತು ರಾಯೊಲ್‌ ಕಂಪನಿಗಳು ಸಹ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ.

ಸ್ಯಾಮ್‌ಸಂಗ್‌ ತಂತ್ರಜ್ಞಾನ ಜಗತ್ತಿನ ದಿಗ್ಗಜ ಗೂಗಲ್‌ನೊಂದಿಗೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಗೂಗಲ್‌ನ ನಮೀನ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್‌ ಹೊಸ ಫೋನ್‌ಗಳಲ್ಲಿ ಅಳವಡಿಸುವ ಬಗ್ಗೆ ಕಾರ್ಯಾಚರಣೆ ನಡೆಯುತ್ತಿದೆ.

ಮಿರರ್‌ ಪರ್ಪಲ್‌ ಮತ್ತು ಮಿರರ್‌ ಬ್ಲ್ಯಾಕ್‌ ಎರಡು ಬಣ್ಣಗಳಲ್ಲಿ ಫೋನ್‌ ಲಭ್ಯವಿರಲಿದೆ.

ಝಡ್‌ ಫ್ಲಿಪ್‌ ಫೋಲ್ಡೆಬಲ್‌ ಫೋನ್‌ ಗುಣಲಕ್ಷಣಗಳು:

* 8 ಜಿಬಿ ರ್‍ಯಾಮ್‌

* 256 ಜಿಬಿ ಸಂಗ್ರಹ ಸಾಮರ್ಥ್ಯ

* 7 ಎನ್‌ಎಂ ಆಕ್ಟಾ–ಕೋರ್‌ ಪ್ರೊಸೆಸರ್‌

* 6.7 ಇಂಚು ಫುಲ್‌ ಎಚ್‌ಡಿ+ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ

*ಫೋನ್ ಮಡಿಚಿದಾಗ 1.1 ಇಂಚು ಸೂಪರ್‌ ಅಮೋಲೆಡ್‌ ಕವರ್‌ ಡಿಸ್‌ಪ್ಲೇ

* ಹಿಂಬದಿಯಲ್ಲಿ ಡ್ಯೂಯೆಲ್‌ ಕ್ಯಾಮೆರಾ (12 ಎಂಪಿ ವೈಡ್‌ ಆ್ಯಂಗಲ್‌ + 12 ಎಂಪಿ ಅಲ್ಟ್ರಾ ವೈಡ್‌)

* 10 ಎಂಪಿ ಸೆಲ್ಫಿ ಕ್ಯಾಮೆರಾ

* ಬಿಕ್ಸ್‌ಬಿ– ಇಂಟೆಲಿಜೆಂಟ್‌ ಅಸಿಸ್ಟಂಟ್‌

* ಫೋನ್‌ ಅನ್‌ಲಾಕ್‌ಗಾಗಿ ಫೇಸ್‌ ಮತ್ತು ಫಿಂಗರ್‌ಪ್ರಿಂಟ್‌ ಸ್ಕ್ಯಾನ್‌

* 4ಕೆ ಅಲ್ಟ್ರಾ ಎಚ್‌ಡಿ ವಿಡಿಯೊ ರೆಕಾರ್ಡಿಂಗ್‌

* 3,300 ಎಂಎಎಚ್‌ ಬ್ಯಾಟರಿ (ವೈರ್‌ಲೆಸ್‌ ಪವರ್‌ಶೇರ್‌ ಮೂಲಕವೂ ಜಾರ್ಜಿಂಗ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.