
ಯಾವುದೇ ವೈರ್ ಅಥವಾ ತಂತಿ ಇಲ್ಲದೇ ಮೊಬೈಲ್‌ಫೋನ್‌ಗೆ ಈಗ ಧ್ವನಿತರಂಗಗಳು ಪ್ರಸರಣವಾಗುತ್ತಿವೆ. ಯಾವುದೇ ಕೇಬಲ್‌ಗಳ ನೆರವಿಲ್ಲದೆ ವೈ-ಫೈ ತಂತ್ರಜ್ಞಾನದ ಮೂಲಕ ಒಮ್ಮೆಲೇ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಫೋನ್‌ಗಳಿಗೆ ಇಂಟರ್‌ನೆಟ್ ಸಂಪರ್ಕ ಸುಲಭವಾಗಿ ಸಿಗುತ್ತಿದೆ. ಅದೇ ರೀತಿ ಯಾವುದೇ ತಂತಿಗಳನ್ನು ಬಳಸದೆ ವಿದ್ಯುತ್ತನ್ನು ಗಾಳಿಯ ಮೂಲಕ ಪೂರೈಸುವ ತಂತ್ರಜ್ಞಾನಕ್ಕೆ ಬೀಜವನ್ನು ಬಿತ್ತಿ ಫಿನ್ಲೆಂಡ್ ಜಗತ್ತಿನ ಗಮನ ಸೆಳೆಯುತ್ತಿದೆ. ಕೇಬಲ್‌ಗಳು, ಸಾಕೆಟ್‌ಗಳು ಅಥವಾ ಯಾವುದೇ ಕನೆಕ್ಟರ್‌ಗಳಿಲ್ಲದೆ ವಿದ್ಯುತ್ ಪೂರೈಸುವ ‘ವೈರ್‌ಲೆಸ್ ವಿದ್ಯುತ್ ಪ್ರಸರಣ’ ಕ್ಷೇತ್ರದಲ್ಲಿ ಫಿನ್ನಿಶ್ ವಿಜ್ಞಾನಿಗಳು ಜಗತ್ತು ನಿಬ್ಬೆರಗಾಗುವ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಈ ಮೂಲಕ ಖ್ಯಾತ ವಿಜ್ಞಾನಿ ಮತ್ತು ಸಂಶೋಧಕ ನಿಕೋಲಸ್ ಟೆಸ್ಲಾ ಅವರ ಕನಸನ್ನು ಸಾಕಾರಗೊಳಿಸುವ ಕಾರ್ಯಕ್ಕೆ ಅಡಿಯಿಟ್ಟಿದ್ದಾರೆ.
ಹೇಗೆ ಕೆಲಸ ಮಾಡುತ್ತದೆ?
ಸಾಮಾನ್ಯವಾಗಿ ವಿದ್ಯುತ್ ಪೂರೈಕೆಗೆ ದೊಡ್ಡ ಗಾತ್ರದ ತಂತಿಗಳು ಮತ್ತು ಕೇಬಲ್‌ಗಳ ಅಗತ್ಯವಿರುತ್ತದೆ. ಆದರೆ ಫಿನ್ಲೆಂಡ್‌ನ ವಿಜ್ಞಾನಿಗಳು ಅಲ್ಟ್ರಾಸಾನಿಕ್ ಅಲೆಗಳು (Ultrasonic Waves) ಮತ್ತು ಲೇಸರ್ ತಂತ್ರಜ್ಞಾನವನ್ನು ಬಳಸಿಕೊಂಡು ತಂತಿ ಇಲ್ಲದೆಯೇ ವಿದ್ಯುತ್ತನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ‘ಅಕೌಸ್ಟಿಕ್ ವೈರ್’ (Acoustic Wire) ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಕಣ್ಣಿಗೆ ಕಾಣಿಸದ ಅಲೆಗಳ ಮೂಲಕ ವಿವಿಧ ಸಾಧನಗಳಿಗೆ ವಿದ್ಯುತ್ ಪೂರೈಕೆಯಾಗುತ್ತದೆ.
ಈ ವೈರ್‌ಲೆಸ್ ವಿದ್ಯುತ್ ತತ್ವ ಸರಳ. ವೈ-ಫೈ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತದೆಯೋ ಅದೇ ರೀತಿ ವಿದ್ಯುತ್ಕಾಂತೀಯ ಕ್ಷೇತ್ರಗಳ ಮೂಲಕ ವಿದ್ಯುತ್ತವರ್ಗಾಯಿಸಲಾಗುತ್ತದೆ. ವಿಜ್ಞಾನಿಗಳು ಮುಖ್ಯವಾಗಿ ‘ರೆಸೋನೆಂಟ್ ಕಪ್ಲಿಂಗ್’ (Resonant Coupling) ಮತ್ತು ‘ಮ್ಯಾಗ್ನೆಟಿಕ್ ಇಂಡಕ್ಷನ್’ (Magnetic Induction) ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆಲ್ಟೊ ಮತ್ತು ಹೆಲ್ಸಿಂಕಿ ವಿಶ್ವವಿದ್ಯಾಲಯದ ಸಂಶೋಧಕರು ಈ ತಂತ್ರಜ್ಞಾನದ ಶಕ್ತಿವ್ಯಯದ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.
ಪ್ರಮುಖ ಲಾಭಗಳು
ವೈ-ಫೈ ಮಾದರಿಯ ವಿದ್ಯುತ್: ಈ ತಂತ್ರಜ್ಞಾನ ಅಭಿವೃದ್ಧಿಯಾದರೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮತ್ತು ಮನೆಯ ವಿದ್ಯುತ್ ಉಪಕರಣಗಳನ್ನು ಚಾರ್ಜ್ ಮಾಡಲು ಪ್ಲಗ್ ಅಥವಾ ಕೇಬಲ್‌ಗಳ ಅಗತ್ಯವಿರುವುದಿಲ್ಲ; ವೈ-ಫೈ ವ್ಯಾಪ್ತಿಯಲ್ಲಿರುವ ಸಾಧನಗಳು ತಾನಾಗಿಯೇ ಚಾರ್ಜ್ ಆಗಲಿವೆ!
ಆಘಾತ ಸಾಧ್ಯತೆ ಕಡಿಮೆ: ವಿದ್ಯುತ್ ತಂತಿಗಳಿಲ್ಲದ ಕಾರಣ ಶಾರ್ಟ್ ಸರ್ಕ್ಯೂಟ್ ಅಥವಾ ವಿದ್ಯುತ್ ಸ್ಪರ್ಶದಿಂದ ಸಂಭವಿಸುವ ಸಾವು-ನೋವುಗಳು ಕಡಿಮೆಯಾಗುತ್ತವೆ.
ನಿರ್ವಹಣೆ ಸುಲಭ: ಭೂಗತ ಕೇಬಲ್ ಅಥವಾ ವಿದ್ಯುತ್ ಕಂಬಗಳ ಅವಶ್ಯಕತೆ ಇಲ್ಲದಿರುವುದರಿಂದ ಮೂಲಸೌಕರ್ಯದ ವೆಚ್ಚ ಗಣನೀಯವಾಗಿ ಇಳಿಕೆಯಾಗಲಿದೆ.
ವೈರ್‌ಗಳ ಮುಕ್ತಿ: ರಸ್ತೆಗಳಲ್ಲಿ ಮತ್ತು ಮನೆಗಳಲ್ಲಿ ಜೇಡರ ಬಲೆಯಂತೆ ಹರಡಿರುವ ವೈರ್‌ಗಳ ಅಗತ್ಯವಿರುವುದಿಲ್ಲ. ಇದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಪಘಾತಗಳು ಕಡಿಮೆಯಾಗುತ್ತವೆ.
ಇ-ತ್ಯಾಜ್ಯ ಇಳಿಕೆ: ಪ್ರತಿಯೊಂದು ಸಾಧನಕ್ಕೂ ಬೇರೆ ಬೇರೆ ಚಾರ್ಜರ್‌ಗಳು ಬೇಕಾಗಿಲ್ಲದ ಕಾರಣ ಪ್ಲಾಸ್ಟಿಕ್ ಮತ್ತು ಲೋಹದ ತ್ಯಾಜ್ಯ ಕಡಿಮೆಯಾಗುತ್ತದೆ.
ನಿರಂತರ ಪೂರೈಕೆ: ಎಲೆಕ್ಟ್ರಿಕ್ ವಾಹನಗಳು (EV) ರಸ್ತೆಯಲ್ಲಿ ಚಲಿಸುತ್ತಿರುವಾಗಲೇ ಚಾರ್ಜ್ ಆಗುವಂತೆ ಮಾಡಬಹುದು. ಇದರಿಂದ ವಾಹನ ನಿಲ್ಲಿಸಿ ಚಾರ್ಜ್ ಮಾಡುವ ಸಮಯ ಉಳಿಯುತ್ತದೆ.
ಮಿತಿಗಳು
ದೂರದ ಮಿತಿ: ಪ್ರಸ್ತುತ ಇದು ಕಡಿಮೆ ದೂರಕ್ಕೆ ಮಾತ್ರ ಸೀಮಿತವಾಗಿದೆ. ದೂರ ಹೆಚ್ಚಾದಂತೆ ಶಕ್ತಿಯ ಸಾಮರ್ಥ್ಯ ಕುಸಿಯುತ್ತದೆ.
ಸಾಂಪ್ರದಾಯಿಕ ಗ್ರಿಡ್‌ಗೆ ಪರ್ಯಾಯವಲ್ಲ: ಇದು ಈಗಿರುವ ವಿದ್ಯುತ್ ಕಂಬ ಮತ್ತು ತಂತಿಗಳ ವ್ಯವಸ್ಥೆಯನ್ನು ಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಬದಲಾಗಿ, ಅವುಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ.
ದಕ್ಷತೆ: ವೈರ್‌ಲೆಸ್ ವಿದ್ಯುತ್ ತಂತ್ರಜ್ಞಾನದಲ್ಲಿ ದೊಡ್ಡ ಸವಾಲೆಂದರೆ ‘ದಕ್ಷತೆ’ (Efficiency). ವೈರ್ ಮೂಲಕ ವಿದ್ಯುತ್ ಹರಿಯುವಾಗ ಆಗುವ ನಷ್ಟಕ್ಕಿಂತ, ಗಾಳಿಯಲ್ಲಿ ಹರಿಯುವಾಗ ಹೆಚ್ಚಿನ ವಿದ್ಯುತ್ ವ್ಯಯವಾಗುತ್ತದೆ.
ಆರೋಗ್ಯದ ಮೇಲೆ ಪರಿಣಾಮ: ಜೀವಿಗಳ ಅಂಗಾಂಗಳ ಮೇಲೆ ಈ ವಿದ್ಯುತ್ಕಾಂತೀಯ ಅಲೆಗಳ ಪರಿಣಾಮದ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ವಿದ್ಯುತ್ ಶಕ್ತಿ ಕಣ್ಣಿಗೆ ಕಾಣದಿದ್ದರೂ ಅದರ ಪ್ರಭಾವ ಇರುವ ಸಾಧ್ಯತೆ ಬಗ್ಗೆ ಹಲವರಲ್ಲಿ ಆತಂಕ ಇದೆ. ಈಗಾಗಲೇ ಹಲವರು ಮೊಬೈಲ್‌ಫೋನ್ ಸಿಗ್ನಲ್‌ಗಳು ಬೀರುತ್ತಿರುವ ಪರಿಣಾಮಗಳ ಬಗ್ಗೆಯೂ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ಈ ಹೊಸ ತಂತ್ರಜ್ಞಾನದ ಬಗ್ಗೆ ಆತಂಕ ಸಹಜ.
ಟೆಸ್ಲಾ ಕನಸು
ವೈರ್‌ಲೆಸ್ ವಿದ್ಯುತ್ ಹೊಸ ಪರಿಕಲ್ಪನೆಯೇನಲ್ಲ. ಸುಮಾರು 100 ವರ್ಷಗಳ ಹಿಂದೆ ಖ್ಯಾತ ವಿಜ್ಞಾನಿ ನಿಕೋಲಾ ಟೆಸ್ಲಾ ಅವರು ‘ಟೆಸ್ಲಾ ಕಾಯಿಲ್’ ಮೂಲಕ ಗಾಳಿಯಲ್ಲಿ ವಿದ್ಯುತ್ ಹರಿಸುವ ಪ್ರಯತ್ನ ಮಾಡಿದ್ದರು. ತಾಂತ್ರಿಕ ಮಿತಿಗಳಿಂದ ಅಂದು ಅದು ಸಾಧ್ಯವಾಗದಿದ್ದರೂ, ಇಂದು ಆಧುನಿಕ ವಿಜ್ಞಾನ ಆ ಕನಸನ್ನು ನನಸಾಗಿಸುತ್ತಿದೆ.
ಭವಿಷ್ಯ
ಈ ನವೀನ ತಂತ್ರಜ್ಞಾನ ತಕ್ಷಣವೇ ಇಡೀ ವಿದ್ಯುತ್ ವ್ಯವಸ್ಥೆಯನ್ನು ಬದಲಿಸದಿದ್ದರೂ, ಮುಂಬರುವ ವರ್ಷಗಳಲ್ಲಿ ಮಹತ್ತರ ಬದಲಾವಣ ತರಲಿದೆ. ಈಗಾಗಲೇ ದೂರದ ಪ್ರದೇಶಗಳಿಗೆ ವೈರ್‌ಲೆಸ್ ಮೂಲಕ ವಿದ್ಯುತ್ ಕಳುಹಿಸುವ ಪ್ರಯೋಗಗಳು ಯಶಸ್ವಿಯಾಗಿವೆ. ಮುಂದಿನ ಒಂದು ದಶಕದಲ್ಲಿ ನಮ್ಮ ಮನೆಯ ಗೋಡೆಗಳಲ್ಲಿ ಪ್ಲಗ್ ಪಾಯಿಂಟ್‌ಗಳೇ ಇರುವುದಿಲ್ಲ! ನಾವು ರೂಮಿನೊಳಗೆ ಕಾಲಿಟ್ಟ ಕೂಡಲೇ ನಮ್ಮ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳು ತಂತಾನೇ ಚಾರ್ಜ್ ಆಗುವ ಕಾಲ ದೂರವಿಲ್ಲ. ವೈದ್ಯಕೀಯ ಇಂಪ್ಲಾಂಟ್‌ಗಳು, ಸೆನ್ಸಾರ್‌ಗಳು ಮತ್ತು ಕೈಗಾರಿಕಾ ವ್ಯವಸ್ಥೆಗಳಲ್ಲಿ ಮಹತ್ವದ ಬದಲಾವಣೆ ತರಬಹುದು. ವಿಶೇಷವಾಗಿ, ವೈರಿಂಗ್ ಅಸಾಧ್ಯ ಎನಿಸುವಂತಹ ಪ್ರದೇಶಗಳಲ್ಲಿ ಇದು ತುಂಬಾ ಉಪಯುಕ್ತ.
–––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.