ಮಿವಿ ಎಐ ಬಡ್ಸ್
ಭಾರತೀಯರೇ ಸ್ಥಾಪಿಸಿರುವ ಆವಿಷ್ಕರಣ್ ಇಂಡಸ್ಟ್ರೀಸ್ ಸಂಸ್ಥೆಯು ಹೊಚ್ಚ ಹೊಸ ಮಿವಿ ಬ್ರ್ಯಾಂಡ್‌ನ ಎಐ ಬಡ್ಸ್ ಎಂಬ ಇಯರ್‌ಬಡ್ಸ್ ಅನ್ನು ಇತ್ತೀಚೆಗಷ್ಟೇ ಪರಿಚಯಿಸಿದ್ದು, ಈ ಕ್ಷೇತ್ರದಲ್ಲಿ ಹೊಸ ಸಾಧ್ಯತೆಯ ಬಗ್ಗೆ ಸುಳಿವು ನೀಡಿದೆ. ಇತರ ಇಯರ್‌ಬಡ್ಸ್‌ನಂತಲ್ಲದ ಮಿವಿ ಎಐ ಬಡ್ಸ್, ನಮ್ಮ ಆತ್ಮೀಯ ಸಹಾಯಕನಂತೆ, ಮಾನವೀಯ ಸ್ಪರ್ಶದೊಂದಿಗೆ ನಮ್ಮೊಂದಿಗೆ ಸಂವಾದ ನಡೆಸಬಲ್ಲದು ಎಂಬುದೇ ಇದರ ವೈಶಿಷ್ಟ್ಯ. ಇದು ಸಾಧ್ಯವಾಗುವುದು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದಿಂದ. ಎರಡು ವಾರ ಬಳಸಿ ನೋಡಿದ ಬಳಿಕ, ಇದು ಹೇಗಿದೆ? ಇಲ್ಲಿದೆ ಒಂದು ನೋಟ ಇಲ್ಲಿದೆ.
ಮಿವಿ ಎಐ ಬಡ್ಸ್ ಗಮನ ಸೆಳೆಯುವುದು ಅದರ ವಿಶಿಷ್ಟ ವಿನ್ಯಾಸದಿಂದ. ಆಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಫೋನ್‌ಗಳೊಂದಿಗೆ ಕೆಲಸ ಮಾಡುವ ಈ ಇಯರ್‌ಬಡ್‌ಗಳ ಚಾರ್ಜಿಂಗ್ ಕೇಸ್, ಹೊಳೆಯುವ ಮೇಲ್ಮೈಯೊಂದಿಗೆ ಆಕರ್ಷಕವಾಗಿದೆ. ಈ ನುಣುಪುತನದಿಂದಾಗಿ ಬೆರಳಚ್ಚು ಮೂಡುತ್ತದೆ. ಗಾತ್ರವೂ ಚಿಕ್ಕದಾಗಿದ್ದು, ಕೇವಲ 52 ಗ್ರಾಂ ತೂಕ ಹೊಂದಿದೆ. ಕಿವಿಯೊಳಗೆ ಸರಿಯಾಗಿ ಕೂರುತ್ತದೆ.
ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸತತವಾಗಿ ಬಳಕೆ ಮಾಡುವುದಿದ್ದರೆ 40 ಗಂಟೆಗಳ ಬ್ಯಾಟರಿ ಸಾಮರ್ಥ್ಯ ಇದರಲ್ಲಿದೆ. ಬಡ್ಸ್ ಮತ್ತು ಕ್ಯಾಪ್ಸೂಲ್ (ಚಾರ್ಜಿಂಗ್ ಕೇಸ್) ಎರಡೂ, ಶೂನ್ಯದಿಂದ ಪೂರ್ತಿ ಚಾರ್ಜ್ ಆಗಲು ಒಂದು ಗಂಟೆ ಸಾಕಾಗುತ್ತದೆ. IPX4 ರೇಟಿಂಗ್ ಇರುವುದರಿಂದ, ಸಾಮಾನ್ಯ ಪರಿಸ್ಥಿತಿಗಳಲ್ಲಿ ಒದ್ದೆಯಾದರೂ ಏನೂ ಆಗಲಾರದು.
ಅತ್ಯಾಧುನಿಕ ಟ್ರೂ ವೈರ್‌ಲೆಸ್ ಸ್ಪೀಕರ್ (TWS) ಮಾದರಿಗಳಲ್ಲಿ ಮಿವಿ ಎಐ ಬಡ್ಸ್ ಕೂಡ ಒಂದು. ಇದರಲ್ಲಿ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ (ANC - ಸಕ್ರಿಯ ಧ್ವನಿಗಳನ್ನು ಫಿಲ್ಟರ್ ಮಾಡುವ ವ್ಯವಸ್ಥೆ) ಇದ್ದು, ಸುತ್ತಮುತ್ತಲಿನ ಧ್ವನಿ ನಮಗೂ ಕೇಳಿಸದಂತೆ, ಅತ್ತ ಕಡೆಯಿಂದ ಮಾತನಾಡುವವರಿಗೂ ನಮ್ಮ ಧ್ವನಿ ಚೆನ್ನಾಗಿ ಕೇಳಿಸುವಂತಿದೆ. ಹಾಡು ಆಲಿಸುವಾಗ, ಸ್ಪಷ್ಟವಾದ ಧ್ವನಿಯೊಂದಿಗೆ ಉತ್ತಮ ಬೇಸ್ ಕೂಡ ಇರುವುದರಿಂದ, ಹಾಡನ್ನು, ಸಂಗೀತದ ಬೀಟ್ಸ್ ಅನ್ನು ಆನಂದಮಯವಾಗಿ ಆಲಿಸಬಹುದು.
ಈ ಬಡ್ಸ್‌ನಲ್ಲಿ ಒಂದು ಬಾರಿ ಸ್ಪರ್ಶಿಸಿದರೆ ಹಾಡು ಆನ್/ಆಫ್ ಮತ್ತು ಕರೆ ಸ್ವೀಕರಿಸಲು ಸಾಧ್ಯವಾಗುತ್ತದೆ. ಎರಡು ಬಾರಿ ಸ್ಪರ್ಶಿಸಿದರೆ (ಡಬಲ್ ಟ್ಯಾಪ್) ಸುತ್ತಮುತ್ತಲಿನ ಧ್ವನಿ ಆನ್/ಆಫ್ ಮಾಡಬಹುದು. ಹೈ ರೆಸೊಲ್ಯುಶನ್ ಆಡಿಯೋ, 3ಡಿ ಸೌಂಡ್‌ಸ್ಟೇಜ್ ಮತ್ತು ಸ್ಪೇಷಿಯಲ್ ಆಡಿಯೋ, ANC ವ್ಯವಸ್ಥೆಗಳು ಇರುವುದರಿಂದ ಧ್ವನಿಯ ಸ್ಪಷ್ಟತೆ ಹೆಚ್ಚು.
ಉಲ್ಲೇಖಿಸಲೇಬೇಕಾದ ವಿಶೇಷತೆಯೆಂದರೆ ಇದರಲ್ಲಿ ಅಡಕವಾಗಿರುವ ಎಐ ಅಥವಾ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯವಿರುವ ಆಪ್ತ ಸಹಾಯಕ ತಂತ್ರಜ್ಞಾನ.
ಕಂಪನಿಯೇ ರೂಪಿಸಿರುವ ಮಿವಿ ಎಐ, ನಮ್ಮ ಸಹಾಯಕನಾಗಿ (ವಾಯ್ಸ್ ಅಸಿಸ್ಟೆಂಟ್) ನಮ್ಮೊಂದಿಗೆ ಮಾತನಾಡಬಲ್ಲುದು. ಇಂಗ್ಲಿಷ್ ಮಾತ್ರವೇ ಅಲ್ಲದೆ ಕನ್ನಡ ಸಹಿತ ಭಾರತದ 8 ಭಾಷೆಗಳಲ್ಲಿ ಇದರ ಜೊತೆಗೆ ಸಂವಹನ ನಡೆಸಬಹುದು. ಈ ಸಂವಹನದ ಧ್ವನಿಗೆ ಮಾನವೀಯ ಸ್ಪರ್ಶ ಇದೆ, ಅದು ನಮ್ಮ ಭಾವನೆಗಳನ್ನೂ ಸ್ವಲ್ಪಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದು ಎಂಬುದು ಗಮನಿಸಬೇಕಾದ ಅಂಶ. ಇದು ಈಗಿನ ಕ್ರೇಝ್ ಆಗಿರುವ ಚಾಟ್‌ಜಿಪಿಟಿ, ಜೆಮಿನಿ, ಕೋಪೈಲಟ್, ಪರ್ಪ್ಲೆಕ್ಸಿಟಿ, ಡೀಪ್‌ಸೀಕ್ ಮುಂತಾದ ಚಾಟ್‌ಬಾಟ್‌ಗಳ ಸ್ಥಳೀಕೃತ ರೂಪ.
'ಹಾಯ್ ಮಿವಿ' ಅಂತ ಹೇಳಿದಾಕ್ಷಣ, ವಾಯ್ಸ್ ಅಸಿಸ್ಟೆಂಟ್ ಆ್ಯಕ್ಟಿವೇಟ್ ಆಗುತ್ತದೆ. ನಾವು ಪ್ರಶ್ನೆ ಕೇಳಿದರೆ, ಅದು ಅಂತರ್ಜಾಲವನ್ನು ಜಾಲಾಡಿ ನಮಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತದೆ. 'ತುಂಬಾ ಬೇಸರವಾಗಿದೆ, ನಾನೇನು ಮಾಡಲಿ' ಅಂತ ಕೇಳಿದರೆ ಸೂಕ್ತ ಸಮಾಧಾನದ ಮಾತುಗಳನ್ನೂ ಅದು ಆಡಬಲ್ಲುದು.
ಒಳ್ಳೆಯ ಹಾಡು ಪ್ಲೇ ಮಾಡು ಎಂದರೆ ಯೂಟ್ಯೂಬ್ ಮೂಲಕ ಹಾಡುಗಳನ್ನು ಪ್ಲೇ ಮಾಡುತ್ತದೆ. ಜೊತೆಗೆ ತೀರಾ ಇತ್ತೀಚಿನ ಸುದ್ದಿಗಳನ್ನೂ ಅದು ನಮಗಾಗಿ ಓದಿ ಹೇಳಬಲ್ಲುದು. ಅದರೊಳಗೆ ಸಾಕಷ್ಟು ಅವತಾರಗಳಿವೆ, ಗುರುವಾಗಿ, ವೆಲ್‌ನೆಸ್ ಕೋಚ್ ಆಗಿ, ಸುದ್ದಿ ಏಜೆಂಟ್ ಆಗಿ, ಇಂಟರ್ವ್ಯೂವರ್, ಥೆರಪಿಸ್ಟ್ ಆಗಿಯೂ ಅದು ಸಾಂದರ್ಭಿಕವಾಗಿ ಕೆಲಸ ಮಾಡಬಲ್ಲುದು. ಕನ್ನಡದಲ್ಲಿಯೂ ಚೆನ್ನಾಗಿ ಮತ್ತು ನಿಧಾನವಾಗಿ ಇದು ಸಂವಹನ ಮಾಡಬಲ್ಲುದು. ಬಡ್ಸ್ ವಿತ್ ಬ್ರೈನ್ (ಮೆದುಳಿರುವ ಬಡ್ಸ್) ಅಂತ ಕಂಪನಿ ಹೇಳಿಕೊಂಡಿರುವುದು ಇದಕ್ಕೇ.
ಇವೆಲ್ಲದಕ್ಕೂ ಮಿವಿ ಎಐ ಆ್ಯಪ್ ಅಳವಡಿಸಿಕೊಳ್ಳಬೇಕಾಗುತ್ತದೆ ಮತ್ತು ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ ಇದು ಪಾವತಿ ಸೇವೆ ಆಗಿದೆ. ಕೃತಕ ಬುದ್ಧಿಮತ್ತೆ ಕೆಲಸ ಮಾಡಬೇಕಿದ್ದರೆ ಈ ಆ್ಯಪ್ ಅಳವಡಿಸಿಕೊಂಡು ನೋಂದಾಯಿಸಿಕೊಳ್ಳಬೇಕು. ಮಿವಿ ಎಐ ಬಡ್ಸ್ ಖರೀದಿಸುವಾಗ, ಅದರ ಬಾಕ್ಸ್‌ನೊಳಗಿರುವ ಒಂದು ಕೋಡ್ ಸಂಖ್ಯೆಯನ್ನು, ಮಿವಿ ಎಐ ಆ್ಯಪ್‌ನಲ್ಲಿ ನಮೂದಿಸಿದರಷ್ಟೇ ಇವೆಲ್ಲ ಕೆಲಸ ಆಗುತ್ತದೆ. ತಿಂಗಳಿಗೆ ₹999 ಶುಲ್ಕವಿರುವ ಈ ಸೇವೆ ಎರಡು ವರ್ಷ ಉಚಿತವಾಗಿ (ಸುಮಾರು ₹24,000 ಮೌಲ್ಯ) ಲಭ್ಯ ಎಂದು ಮಿವಿ ಕಂಪನಿ ಹೇಳಿಕೊಂಡಿದೆ.
ನಾಲ್ಕು ಬಣ್ಣಗಳಲ್ಲಿ (ಕಂದು, ಕಪ್ಪು, ಸಿಲ್ವರ್ ಹಾಗೂ ಗೋಲ್ಡ್) ಲಭ್ಯವಿರುವ ಮಿವಿ ಎಐ ಬಡ್ಸ್ ಮಾರುಕಟ್ಟೆ ಬೆಲೆ ₹6999.
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತಮವಾದ ಧ್ವನಿ ಹೊರಸೂಸುವ, ಸಂಗೀತ ಆಲಿಸಲು ಉಪಯುಕ್ತವಾದ ಮಿವಿ ಎಐ ಇಯರ್‌ಬಡ್ಸ್ ಜೊತೆಗೆ ಎಐ ಆಧಾರಿತ ಚಾಟ್ ಬಾಟ್ ನಮಗೆ ಬೇಕಾದ ಮಾಹಿತಿಯನ್ನು ಒದಗಿಸಬಲ್ಲುದು ಮತ್ತು ಆಪ್ತಸಹಾಯಕನಂತೆ ಸಂಭಾಷಣೆ ಮಾಡಬಹುದು ಎಂಬುದೇ ವಿಶೇಷ. ಸದ್ಯಕ್ಕೆ ಆ್ಯಪಲ್ ಸಾಧನಗಳಿಗೆ ಈ ಮಿವಿ ಎಐ ಆ್ಯಪ್ ಲಭ್ಯವಿಲ್ಲ, ಆದರೆ ಸ್ಪೀಕರ್ ಅನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.