ADVERTISEMENT

ಹೈಬ್ರಿಡ್‌ ಕಲಿಕೆಗೆ ಉತ್ತಮ ‘HP Chromebook 14a’

ವಿಶ್ವನಾಥ ಎಸ್.
Published 12 ಆಗಸ್ಟ್ 2023, 17:12 IST
Last Updated 12 ಆಗಸ್ಟ್ 2023, 17:12 IST
ಎಚ್‌ಪಿ ಕ್ರೋಮ್‌ಬುಕ್‌ 14ಎ
ಎಚ್‌ಪಿ ಕ್ರೋಮ್‌ಬುಕ್‌ 14ಎ   

ಎಚ್‌ಪಿ ಕಂಪನಿಯು ಕ್ರೋಮ್‌ಬುಕ್ ಸರಣಿಯಲ್ಲಿ ಈಚೆಗೆ ‘ಎಚ್‌ಪಿ ಕ್ರೋಮ್‌ಬುಕ್ 14ಎ’ (HP Chromebook 14a-na1004TU) ಬಿಡುಗಡೆ ಮಾಡಿದ್ದು, ಬಜೆಟ್ ಬೆಲೆಯ ಲ್ಯಾಪ್‌ಟಾಪ್ ಆಗಿದೆ. ಹೆಸರೇ ಹೇಳುವಂತೆ ಇದು ವಿಂಡೋಸ್ ಅಥವಾ ಮ್ಯಾಕ್ ಒಸ್‌ಗೆ ಬದಲಾಗಿ ಗೂಗಲ್‌ನ ‘ಕ್ರೋಮ್ ಒಒಸ್‌’ನಿಂದ ಕೆಲಸ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಇಂಟರ್ನೆಟ್‌ನಲ್ಲಿ ಹುಡುಕಾಡಲು, ಇ-ಮೇಲ್ ನಿರ್ವಹಿಸಲು, ಆನ್‌ಲೈನ್ ವಿಡಿಯೊ ನೋಡಲು, ಗೇಮ್‌ ಆಡಲು ಇದು ಹೆಚ್ಚು ಉಪಯುಕ್ತವಾಗಿದೆ. 

ಫೋನ್ ಮತ್ತು ಕ್ರೋಮ್‌ಬುಕ್ ಸಿಂಕ್ ಮಾಡಿಕೊಂಡರೆ, ಫೋನ್‌ನಲ್ಲಿ ಇರುವುದೆಲ್ಲವೂ ಕ್ರೋಮ್‌ಬುಕ್‌ನಲ್ಲಿ ಸೇವ್ ಆಗಿರುತ್ತದೆ. ಎಚ್‌ಡಿ ಟಚ್‌ಸ್ಕ್ರೀನ್ ಇರುವುದರಿಂದ ಫೋನಿನಂತೆಯೇ ನಿರ್ವಹಿಸಬಹುದು. ಪಿಂಚ್‌, ಜೂಮ್‌, ಟ್ಯಾಪ್‌ ಮತ್ತು ಸ್ವೈಪ್‌ ಆಯ್ಕೆಗಳು ಇರುವುದರಿಂದ ಕೀಬೋರ್ಡ್ ಬಳಸದೇ ಒಂದಿಷ್ಟು ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಪ್ಲೇಸ್ಟೋರ್‌ನಿಂದ ಅಗತ್ಯವಾದ ಆ್ಯಪ್‌ಗಳನ್ನು ಡೌನ್‌ಲೊಡ್‌ ಮಾಡಿ ಬಳಸಬಹುದು. ಟೈಪ್ ಮಾಡಲು, ಡಾಕ್ಯುಮೆಂಟ್ ಕ್ರಿಯೇಟ್ ಮಾಡಲು, ಫೋಟೊ, ವಿಡಿಯೊ ಎಡಿಟ್ ಮಾಡಲು, ಪಿಪಿಟಿ ಪ್ರಸಂಟೇಷನ್ ಸಿದ್ಧಪಡಿಸಲು, ಆನ್‌ಲೈನ್‌ ಮೀಟಿಂಗ್ ಮಾಡಲು ಅಷ್ಟೇ ಅಲ್ಲದೆ ಮನರಂಜನೆಗೆ ಸಿನಿಮಾ ನೋಡಲು, ಗೇಮ್ ಆಡಲು ಮತ್ತು ಆನ್‌ಲೈನ್ ಸಂಗೀತ ಆಲಿಸಲು ಬಳಸಬಹುದು. ಮಲ್ಟಿ ಅಕೌಂಟ್ ಲಾಗಿನ್ ಆಯ್ಕೆಯೂ ಇದರಲ್ಲಿದೆ.

14 ಇಂಚು ಡಯಗ್ನಲ್‌ ಎಫ್‌ಎಚ್‌ಡಿ ಡಿಸ್‌ಪ್ಲೇ 1920X1080 ರೆಸಲ್ಯೂಷನ್‌, 250 ನಿಟ್ಸ್‌ ಬ್ರೈಟ್‌ನೆಸ್‌ ಹೊಂದಿದೆ. ಇಂಟೆಲ್‌ನ ಸೆಲೆರಾನ್‌ ಎನ್‌4500 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಎಚ್‌ಪಿ720 ವೈಡ್‌ ವಿಷನ್‌ ಎಚ್‌ಡಿ ಕ್ಯಾಮೆರಾ ಇದ್ದು, ಡ್ಯುಯಲ್‌ ಡಿಜಿಟಲ್‌ ಮೈಕ್ರೊಫೋನ್‌ ಒಳಗೊಂಡಿದೆ. 4ಕೆ ವಿಡಿಯೊ ನೋಡುವಾಗಲೂ ಯಾವುದೇ ಸಮಸ್ಯೆ ಆಗಿಲ್ಲ. 

ADVERTISEMENT

4ಜಿಬಿ ರ್‍ಯಾಮ್ ಮತ್ತು 64 ಜಿಬಿ ಇಂಟರ್ನಲ್‌ ಸ್ಟೊರೇಜ್ ಸಾಮರ್ಥ್ಯವನ್ನು ಇದು ಹೊಂದಿದೆ. ಇಷ್ಟೇ ಅಲ್ಲದೆ 100ಜಿಬಿ ಗೂಗಲ್‌ ಒನ್‌ ಸ್ಟೊರೇಜ್‌ ಮತ್ತು 256ಜಿಬಿ ಮೈಕ್ರೊ ಎಸ್‌ಡಿ ಕಾರ್ಡ್‌ ಹಾಕಬಹುದಾಗಿದ್ದು, ಜಾಗದ ಕೊರತೆ ಕಾಡುವುದಿಲ್ಲ. ಸಿಲ್ವರ್ ಬಣ್ಣದ ಈ ಕ್ರೋಮ್‌ಬುಕ್ ಪ್ಲಾಸ್ಟಿಕ್‌ ಬಾಡಿ ಹೊಂದಿದ್ದು, 1.46 ಕೆ.ಜಿ ತೂಕ ಇರುವುದರಿಂದ ಸುಲಭವಾಗಿ ಕೈಯಲ್ಲಿ ಹಿಡಿದುಕೊಂಡು ಒಯ್ಯಬಹುದು. ಗೂಗಲ್‌ ಅಸಿಸ್ಟಂಟ್‌ ಇರುವುದರಿಂದ ಕೆಲಸಗಳನ್ನು ಬಹಳ ತ್ವರಿತವಾಗಿ ನಿರ್ವಹಿಸಬಹುದು.

ಟೈಪಿಸುವುದು ಸುಲಭ: ಕೀಬೋರ್ಡ್ ಅನ್ನು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಲಾಗಿದೆ. ಎರಡು ಕೀಗಳ ನಡುವೆ ಸಾಕಷ್ಟು ಜಾಗ (19 ಎಂಎಂ) ನೀಡಲಾಗಿದ್ದು, ಟೈಪಿಸುವಾಗ ಅಪ್ಪಿ ತಪ್ಪಿಯೂ ಇನ್ನೊಂದು ಕೀ ಮೇಲೆ ಬೆರಳು ತಾಗದಂತಿದೆ. ಎರಡು ಕೀ ನಡುವೆ ಜಾಗ ನೀಡಿರುವುದಷ್ಟೇ ಅಲ್ಲದೆ, ಪ್ರತಿಯೊಂದು ಕೀನ ಗಾತ್ರವೂ ದೊಡ್ಡದಾಗಿದೆ. ಹೀಗಾಗಿ ಬಹಳ ಸುಲಭ ಮತ್ತು ವೇಗವಾಗಿ ಟೈಪಿಸಬಹುದು. ಆದರೆ ಆರೋ ಕೀಗಳು ಬಹಳ ಸಣ್ಣದಾಯಿತು. ಒಂದು ಬೆರಳಿನಿಂದ ತಕ್ಷಣಕ್ಕೆ ನಿರ್ವಹಿಸುವುದು ಕಷ್ಟ. ಬ್ಯಾಕ್‌ಲಿಟ್ ಕಿಬೋರ್ಡ್ ಇಲ್ಲ. ಅಂದರೆ ಕತ್ತಲಿರುವಾಗ ಅಥವಾ ರಾತ್ರಿ ವೇಳೆ ಟೈಪಿಸಲು ಕೀಗಳು ಕಾಣುವುದಿಲ್ಲ. ಹೀಗಿದ್ದರೂ ಬೆಲೆಯ ದೃಷ್ಟಿಯಿಂದ ಇದು ದೊಡ್ಡ ಕೊರತೆ ಏನಲ್ಲ. ಟಚ್ ಪ್ಯಾಡ್ ಸ್ಪಂದನೆ ಇನ್ನಷ್ಟು ಸುಧಾರಿಸಲು ಅವಕಾಶ ಇದೆ.
ಸ್ಪೀಕರ್ ಆಡಿಯೊ ಕ್ಲಾರಿಟಿ ಚೆನ್ನಾಗಿದೆ.

ಆಂಡ್ರಾಯ್ಡ್‌ ಆ್ಯಪ್‌ಗಳಲ್ಲದೆ, ಜಿ–ಸೂಟ್‌ ಆ್ಯಪ್‌ಗಳು, ಕ್ರೋಬ್‌ ವೆಬ್‌ ಎಕ್ಸ್‌ಟೆನ್ಶನ್‌, ಗೂಗಲ್ ಸ್ಪ್ರೆಡ್‌ಶೀಟ್‌, ಗೂಗಲ್‌ ಡಾಕ್, ಗೂಗಲ್ ಸ್ಲೈಡ್‌, ಗೂಗಲ್‌ ಪ್ಲೇ ಮ್ಯೂಸಿಕ್‌, ಮೂವಿಸ್‌ ಆ್ಯಂಡ್‌ ಟಿವಿ, ಗೂಗಲ್‌ ಪ್ಲೇ ಗೇಮ್ಸ್‌ ಹೀಗೆ ಇನ್ನೂ ಹಲವು ಗೂಗಲ್‌ ಆ್ಯಪ್‌ಗಳು ಇನ್‌ಸ್ಟಾಲ್ ಆಗಿವೆ. ಯುಎಸ್‌ಬಿ ಟೈಪ್–ಎ ಮತ್ತು ಟೈಪ್–ಸಿ ಪೋರ್ಟ್‌ಗಳನ್ನು ಇದು ಒಳಗೊಂಡಿದೆ. 2 ಸೆಲ್‌ ಸಿಲಿಂಡ್ರಿಕಲ್‌ 47ಡಬ್ಲ್ಯುಎಚ್‌ ಲಿ–ಅಯಾನ್‌ ಪಾಲಿಮರ್ ಬ್ಯಾಟರಿ ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಒಮ್ಮೆ ಪೂರ್ತಿ ಚಾರ್ಜ್‌ ಆದರೆ 11ಗಂಟೆಯವರೆಗೂ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಸತತವಾಗಿ 11 ಗಂಟೆ ಬಳಸದೇ ಇದ್ದಲ್ಲಿ, ಸಿನಿಮಾ ಅಥವಾ ವಿಡಿಯೊ ಇಲ್ಲವೇ ಗೇಮ್‌ ಹೆಚ್ಚು ಆಡದೇ ಇದ್ದರೆ ಇನ್ನೂ ಹೆಚ್ಚಿನ ಅವಧಿಯವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳಲ್ಲದೆ, ಕಡಿಮೆ ಬೆಲೆಗೆ ಆನ್‌ಲೈನ್‌ ಮೂಲಕ ತಮ್ಮ ಕೆಲಸಗಳನ್ನು ಮಾಡುವವರು ಈ ಕ್ರೋಮ್‌ಬುಕ್‌ ಅನ್ನು ಪರಿಗಣಿಸಬಹುದು. ಇದರ ಬೆಲೆ ₹28,999 ಇದೆ.

ಎಚ್‌ಪಿ ಕ್ರೋಮ್‌ಬುಕ್‌ 14ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.