ADVERTISEMENT

ಐಫೋನ್ 17 ಪ್ರೊ: ಉತ್ತಮ ಸಾಮರ್ಥ್ಯದ ಶಕ್ತಿಶಾಲಿ ಫೋನ್

ಅವಿನಾಶ್ ಬಿ.
Published 21 ಅಕ್ಟೋಬರ್ 2025, 12:28 IST
Last Updated 21 ಅಕ್ಟೋಬರ್ 2025, 12:28 IST
<div class="paragraphs"><p>ಆ್ಯಪಲ್ ಐಫೋನ್ 17 ಪ್ರೊ</p></div>

ಆ್ಯಪಲ್ ಐಫೋನ್ 17 ಪ್ರೊ

   

ಆ್ಯಪಲ್ 2025-26ನೇ ಸಾಲಿನ ಹೊಸ ಸಾಧನಗಳ ಸರಣಿಯನ್ನು ಕಳೆದ ತಿಂಗಳು ಮಾರುಕಟ್ಟೆಗಿಳಿಸಿದ್ದು, ಐಫೋನ್ 17ನೇ ಸರಣಿಯಲ್ಲಿ ಐಫೋನ್ 17 ಪ್ರೊ ಸ್ಮಾರ್ಟ್‌ಫೋನ್ ಕುತೂಹಲ ಕೆರಳಿಸಿದೆ. ಐಒಎಸ್ 16 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಬಂದಿರುವ ಈ ಫೋನ್ ಹೇಗಿದೆ? ಎರಡು ವಾರಗಳ ಬಳಕೆಯ ನಂತರ ಕಂಡುಬಂದ ಅಂಶಗಳು ಇಲ್ಲಿವೆ.

ವಿನ್ಯಾಸ

ADVERTISEMENT

ಐಫೋನ್ 17 ಪ್ರೊ ಫೋನ್ 6.3 ಇಂಚು ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದೆ. ಹಿಂದಿನ ಸರಣಿಗಿಂತ ವಿಭಿನ್ನವಾಗಿ ಅಲ್ಯೂಮೀನಿಯಂ ಯೂನಿಬಾಡಿ ವಿನ್ಯಾಸವನ್ನು ಹೊಂದಿದೆ. ಪ್ರೀಮಿಯಂ ನೋಟದೊಂದಿಗೆ ಎಂದಿನಂತೆ ಆಕರ್ಷಕವಾಗಿ ಗೋಚರಿಸುತ್ತದೆ ಮತ್ತು ಗಟ್ಟಿಯಾಗಿದೆ ಎಂಬ ಭಾವನೆ ಒದಗಿಸುತ್ತದೆ.

ಕ್ಯಾಮೆರಾ

ಐಫೋನ್ 17 ಪ್ರೊದಲ್ಲಿ 'ಪ್ರೊ ಫ್ಯೂಶನ್' ತ್ರಿವಳಿ ಕ್ಯಾಮೆರಾ ಇದೆ. 48 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ ಲೆನ್ಸ್, ಅಷ್ಟೇ ಸಾಮರ್ಥ್ಯದ ಅಲ್ಟ್ರಾವೈಡ್ ಮತ್ತು ಟೆಲಿಫೋಟೊ ಲೆನ್ಸ್‌ಗಳು ಗಮನ ಸೆಳೆಯುತ್ತವೆ. ಇದಲ್ಲದೆ 8 ಪಟ್ಟು (8x) ಆಪ್ಟಿಕಲ್ ಝೂಮ್ ಇರುವುದು ದೂರದ ವಸ್ತುಗಳ ಚಿತ್ರೀಕರಣಕ್ಕೆ ಅನುಕೂಲಕರವಾಗಿದೆ. 18 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವು ಸ್ಕ್ರೀನ್‌ನ ಮಧ್ಯ ಮೇಲ್ಭಾಗದಲ್ಲಿ ಇದೆ. ಎರಡೂ ಕ್ಯಾಮೆರಾಗಳಿಂದ ಏಕಕಾಲಕ್ಕೆ ವಿಡಿಯೊ ಸೆರೆಹಿಡಿಯುವ ವ್ಯವಸ್ಥೆ ಗಮನ ಸೆಳೆಯುತ್ತದೆ.

ಬೆಳಕಿರುವಾಗ ಸೆರೆಹಿಡಿಯಲಾದ ಚಿತ್ರಗಳಂತೂ ಗರಿಷ್ಠ ಗುಣಮಟ್ಟ ಹೊಂದಿದ್ದು, ಪ್ರಿಂಟ್ ಹಾಕಿಸುವುದಕ್ಕೆ ಸೂಕ್ತವಾಗುವಷ್ಟು ಉತ್ತಮವಾಗಿವೆ. ದೂರದ ವಸ್ತುಗಳನ್ನು ಸೆರೆಹಿಡಿಯುವಲ್ಲಿ 8x ಆಪ್ಟಿಕಲ್ ಝೂಮ್ ಚೆನ್ನಾಗಿ ಕೆಲಸ ಮಾಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಗುಣಮಟ್ಟದಲ್ಲಿ ರಾಜಿ ಆಗಿಲ್ಲ, ಉತ್ತಮ ಚಿತ್ರಗಳೇ ಸೆರೆಯಾಗಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸೆನ್ಸರ್‌ಗಳು ಹಾಗೂ ಇತರ ಪೂರಕ ಹಾರ್ಡ್‌ವೇರ್‌ಗಳು. ಫೋಟೊಗ್ರಫಿಯಲ್ಲಿ ಆಸಕ್ತಿ ಇರುವವರು ಮತ್ತು ಈಗಿನ ಹೊಸ ಟ್ರೆಂಡ್ ಆಗಿರುವ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ಇದು ಹೇಳಿ ಮಾಡಿಸಿದ ಫೋನ್ ಎನ್ನಲಡ್ಡಿಯಿಲ್ಲ.

ಕಾರ್ಯಾಚರಣೆ ಹೇಗಿದೆ?

ಆ್ಯಪಲ್‌ನ ಅತ್ಯಾಧುನಿಕ ಎ19 ಪ್ರೊ ಚಿಪ್ ಹಾಗೂ 12ಜಿಬಿ RAM ಇರುವ ಐಫೋನ್ 17 ಪ್ರೊ ಸುಲಲಿತವಾದ ಕಾರ್ಯಾಚರಣೆಗೆ ಸಾಟಿ ಇಲ್ಲ. ಹೆಚ್ಚು ಬಳಸಿದಾಗ ಅಥವಾ ಚಾರ್ಜ್ ಆಗುವಾಗ ಬಿಸಿ ಆಗುವುದನ್ನು ತಗ್ಗಿಸಲು ಸಾಧನದೊಳಗೆ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಂ ಇದೆ. ಐಒಎಸ್ 26ರ ಜೊತೆಗೆ ಸಂಯೋಜಿತಗೊಂಡು ಐಫೋನ್‌ ಫ್ಲೂಯಿಡ್ ಯುಐ ಆಕರ್ಷಕವಾಗಿ ಕಾಣಿಸುತ್ತದೆ ಮತ್ತು ಬಳಕೆಗೂ ಸುಲಲಿತವಾಗಿದೆ. ಫ್ಲೂಯಿಡ್ ಗ್ಲಾಸ್ ಯುಐ ಹೇಗೆ ಅನುಭವಕ್ಕೆ ಬರುತ್ತದೆಯೆಂದರೆ, ಹೋಂ ಸ್ಕ್ರೀನ್ ಅನ್‌ಲಾಕ್ ಮಾಡಿದಾಗಲೇ, ಆ್ಯಪ್‌ಗಳೆಲ್ಲ ನೀರಿನಿಂದೆದ್ದು ಬರುವಂತೆ ಗೋಚರಿಸುತ್ತವೆ. ಕ್ಷಿಪ್ರವಾಗಿ ಆ್ಯಪ್‌ಗಳು ತೆರೆದುಕೊಳ್ಳುತ್ತವೆ.

ಅತ್ಯಾಧುನಿಕ ಹಾರ್ಡ್‌ವೇರ್ ಇರುವುದರಿಂದಾಗಿ ಗೇಮ್ಸ್ ಆಡುವುದಕ್ಕಂತೂ ಅತ್ಯುತ್ತಮವಾಗಿದ್ದು, ಯಾವುದೇ ಲ್ಯಾಗ್ (ವಿಳಂಬ ಅಥವಾ ಸ್ಥಾಗಿತ್ಯ) ಅನುಭವಕ್ಕೆ ಬರಲಿಲ್ಲ. ಮಲ್ಟಿಟಾಸ್ಕಿಂಗ್ ಅಂದರೆ ಹಲವು ಆ್ಯಪ್‌ಗಳನ್ನು ತೆರೆದು ಬಳಸುವಾಗಲೂ ಯಾವುದೇ ಸಮಸ್ಯೆ ಎದುರಾಗಿಲ್ಲ. ಆ್ಯಪಲ್‌ನ ಧ್ವನಿ ಸಹಾಯಕ ವ್ಯವಸ್ಥೆ 'ಸಿರಿ' ಜೊತೆಗೂಡಿ ಚಾಟ್‌ಜಿಪಿಟಿ ನೆರವಿನಿಂದ ಕಂಟೆಂಟ್ ಕ್ರಿಯೇಶನ್‌ಗೆ (ವಿಡಿಯೊ, ಆಡಿಯೊ, ಟೆಕ್ಸ್ಟ್, ಫೊಟೊ) ಸೂಕ್ತವಾಗಿ ಬೆಂಬಲಿಸುತ್ತದೆ. ಚಾಟ್‌ಜಿಪಿಟಿ ಆಧಾರಿತ ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸೌಲಭ್ಯ ಬಳಕೆಗೆ ಅನುಕೂಲಕರ ವ್ಯವಸ್ಥೆಯಿದೆ. ಎಐ ಆಧಾರಿತವಾಗಿ ಚಿತ್ರಗಳನ್ನು ರಚಿಸಲು ಇರುವ ಪ್ಲೇಗ್ರೌಂಡ್ ಆ್ಯಪ್ ವಿಶೇಷವಾಗಿ ಗಮನ ಸೆಳೆಯುತ್ತದೆ.

ಬ್ಯಾಟರಿ ಹೇಗಿದೆ?

ಭಾರತೀಯರು ಚೆನ್ನಾಗಿ ಬಾಳಿಕೆ ಬರುವ ಬ್ಯಾಟರಿ ಬಗ್ಗೆ ಹೆಚ್ಚು ಕುತೂಹಲಿಗಳಾಗಿದ್ದಾರೆ. ಒಮ್ಮೆ ಚಾರ್ಜ್ ಮಾಡಿದರೆ ಒಂದು ದಿನ ಪೂರ್ತಿ ಪ್ರಮುಖ ಕಾರ್ಯಗಳನ್ನು ಮಾಡುವುದಕ್ಕೆ ಯಾವುದೇ ಅಡ್ಡಿಯಾಗದು. ಬ್ಯಾಟರಿ ಬಾಳಿಕೆ ಚೆನ್ನಾಗಿಯೇ ಇದ್ದು, ಆ್ಯಪಲ್ ಹೇಳಿಕೊಳ್ಳುವ ಪ್ರಕಾರ, ನಿರಂತರವಾಗಿ 31 ಗಂಟೆಗಳ ಕಾಲ ವಿಡಿಯೊ ಪ್ಲೇ ಮಾಡಬಹುದು. ಸೋಷಿಯಲ್ ಮೀಡಿಯಾ ಬ್ರೌಸಿಂಗ್, ವಿಡಿಯೊ ಪ್ಲೇ, ಕ್ಯಾಮೆರಾ ಬಳಕೆ, ಸ್ಟ್ರೀಮಿಂಗ್ ಹಾಗೂ ಪಠ್ಯದ ಬಳಕೆ ಮಾಡಿದರೆ ದಿನಪೂರ್ತಿ ಬ್ಯಾಟರಿಗೇನೂ ಸಮಸ್ಯೆಯಾಗಿಲ್ಲ. ಗೇಮಿಂಗ್, 5ಜಿ ಬಳಕೆ, ವಿಡಿಯೊ ಎಡಿಟಿಂಗ್ ಹಾಗೂ ಪ್ರಖರ ಬ್ರೈಟ್‌ನೆಸ್ ಇದ್ದರೆ ಕೂಡ ಇಪ್ಪತ್ತು ಗಂಟೆಗಳ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗಿಲ್ಲ. ಇದರಲ್ಲಿ ಇ-ಸಿಮ್ ಸ್ಲಾಟ್ ಇದ್ದು, ಅದನ್ನು ಮಾತ್ರವೇ ಬಳಸಿದರೆ ಒಂದೆರಡು ಗಂಟೆ ಬ್ಯಾಟರಿ ಬಾಳಿಕೆ ಹೆಚ್ಚೇ ಬರುತ್ತದೆ. (ಅಮೆರಿಕದಲ್ಲಿರುವ ಐಫೋನ್‌ಗಳಲ್ಲಿ ಇ-ಸಿಮ್ ಮಾತ್ರ ಆಯ್ಕೆಯಿದ್ದರೆ, ಭಾರತದ ಐಫೋನ್‌ಗಳಿಗೆ ಫಿಸಿಕಲ್ ಸಿಮ್ ಹಾಗೂ ಇ-ಸಿಮ್ ಎರಡೂ ಆಯ್ಕೆಯಿದೆ).

ಕಳೆದ ವರ್ಷದ ಐಫೋನ್ 16 ಪ್ರೊ ಆವೃತ್ತಿಗೆ ಹೋಲಿಸಿದರೆ, ಐಫೋನ್ 17 ಪ್ರೊದಲ್ಲಿ ಅಲ್ಯೂಮೀನಿಯಂ ಯೂನಿಬಾಡಿ ವಿನ್ಯಾಸವಿದೆ. ಹಿಂಭಾಗದ ಮೂರೂ ಕ್ಯಾಮೆರಾ ಲೆನ್ಸ್‌ಗಳೂ 48 ಮೆಗಾಪಿಕ್ಸೆಲ್ ಇವೆ. ಬ್ಯಾಟರಿ ಚಾರ್ಜ್ ಸಾಮರ್ಥ್ಯವನ್ನೂ ವರ್ಧಿಸಲಾಗಿದೆ. ಜೊತೆಗೆ, ಬೇಸ್ ಐಫೋನ್ 17 ಪ್ರೊ ಆವೃತ್ತಿಯು 256ಜಿಬಿ ಸ್ಟೋರೇಜ್ ಸಾಮರ್ಥ್ಯದಿಂದ ಆರಂಭವಾಗುತ್ತದೆ. (128 ಜಿಬಿ ಇಲ್ಲ). ಬೆಲೆ ₹1,34,900 ರಿಂದ ಪ್ರಾರಂಭ.

ಒಟ್ಟಿನಲ್ಲಿ, ಐಫೋನ್ 17 ಪ್ರೊ, ಉತ್ತಮ ವೈಶಿಷ್ಟ್ಯಗಳು ಮತ್ತು ಗುಣಮಟ್ಟವಿರುವ ಪ್ರೀಮಿಯಂ ಸ್ಮಾರ್ಟ್ ಫೋನ್ ಎನ್ನುವುದರಲ್ಲಿ ಸಂದೇಹವಿಲ್ಲ. ಉತ್ತಮ ವಿನ್ಯಾಸ, ಒಳ್ಳೆಯ ಕ್ಯಾಮೆರಾ ಮತ್ತು ಕಾರ್ಯಾಚರಣೆಯಲ್ಲಿ ಗೆದ್ದಿದೆ. ಫೋಟೋಗ್ರಫಿ, ಗೇಮಿಂಗ್ ಹಾಗೂ ದೀರ್ಘಕಾಲಿಕ ಬಳಕೆಯ ಉದ್ದೇಶಕ್ಕಾಗಿ ಐಷಾರಾಮಿ ಫೋನ್ ಇಷ್ಟಪಡುವವರಿಗೆ ಇದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.