ADVERTISEMENT

ಪಿಟ್ರಾನ್‌ ಟ್ಯಾಂಜಂಟ್‌ ಸ್ಪೋರ್ಟ್ಸ್‌: ಕಡಿಮೆ ಬೆಲೆಯ ಉತ್ತಮ ನೆಕ್‌ಬ್ಯಾಂಡ್‌

ವಿಶ್ವನಾಥ ಎಸ್.
Published 16 ಡಿಸೆಂಬರ್ 2022, 21:30 IST
Last Updated 16 ಡಿಸೆಂಬರ್ 2022, 21:30 IST
pTron Tangent Sports
pTron Tangent Sports   

ಕಡಿಮೆ ಬೆಲೆಗೆ ಗುಣಮಟ್ಟದ ಸ್ಮಾರ್ಟ್‌ ಸಾಧನಗಳನ್ನು ನೀಡುವ ಪಿಟ್ರಾನ್‌ ಕಂಪನಿಯು ಈಚೆಗಷ್ಟೇ ಪಿಟ್ರಾನ್‌ ಟ್ಯಾಂಜಂಟ್‌ ಸ್ಪೋರ್ಟ್ಸ್‌ ಹೆಸರಿನ ನೆಕ್‌ಬ್ಯಾಂಡ್‌ ಬಿಡುಗಡೆ ಮಾಡಿದೆ. ಗುಣಮಟ್ಟ, ಬ್ಯಾಟರಿ ಬಾಳಿಕೆ, ಆಡಿಯೊ ಕ್ಲಾರಿಟಿ, ಕೆನೆಕ್ಟಿವಿಟಿ... ಹೀಗೆ ಎಲ್ಲಾ ರೀತಿಯಲ್ಲಿಯೂ ಒಂದು ಉತ್ತಮ ನೆಕ್‌ಬ್ಯಾಂಡ್ ಇದಾಗಿದೆ.

ಈ ನೆಕ್‌ಬ್ಯಾಂಡ್‌ ಹಗುರಾಗಿದೆ. ಕತ್ತಿನಲ್ಲಿ ಇಟ್ಟುಕೊಳ್ಳುವುದಲ್ಲದೆ ಮಡಚಿ ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಇಯರ್‌ಬಡ್‌ಗಳು ಕಿವಿಯಲ್ಲಿ ಸರಿಯಾಗಿ ಕೂರುತ್ತವೆ. ಕಿವಿಯ ಗಾತ್ರಕ್ಕೆ ತಕ್ಕಂತೆ ಬಳಸಲು ಹೆಚ್ಚುವರಿ ಇಯರ್‌ಟಿಪ್‌ಗಳನ್ನು ನೀಡಲಾಗಿದೆ. ಮ್ಯಾಗ್ನೆಟಿಕ್‌ ಸ್ಟ್ರಿಪ್‌ ಇರುವುದರಿಂದ ಬಡ್ಸ್‌ಗಳನ್ನು ಲಾಕ್‌ ಮಾಡಬಹುದು. ಆದರೆ, ಹೀಗಿ ಮಾಡಿದಾಕ್ಷಣ ಅದು ಫೋನ್‌ನಿಂದ ಡಿಸ್ಕನೆಕ್ಟ್‌ ಆಗುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ನೆಕ್‌ಬ್ಯಾಂಡ್‌ಗಳಲ್ಲಿಯೂ ಬಡ್ಸ್‌ಗಳು ಲಾಕ್‌ ಆದಾಕ್ಷಣ ಫೋನ್‌ನಿಂದ ಡಿಸ್ಕನೆಕ್ಟ್‌ ಆಗುತ್ತದೆ. ಆಗ ಅನಗತ್ಯವಾಗಿ ಬ್ಯಾಟರಿ ಚಾರ್ಜ್‌ ಖಾಲಿ ಆಗುವುದು ತಪ್ಪುತ್ತದೆ. ಆದರೆ, ಈ ನೆಕ್‌ಬ್ಯಾಂಡ್‌ನಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲ. ಮೊಬೈಲ್‌ನಲ್ಲಿ ಬ್ಲುಟೂತ್‌ ಆಫ್‌ ಮಾಡಿದ ಕೆಲ ಸೆಕೆಂಡ್‌ಗಳ ಬಳಿಕ ನೆಕ್‌ಬ್ಯಾಂಡ್‌ ತನ್ನಷ್ಟಕ್ಕೇ ಪವರ್‌ಆಫ್‌ ಆಗುತ್ತದೆ. ಇದರಿಂದಾಗಿ ಬ್ಯಾಟರಿ ಉಳಿತಾಯ ಆಗುತ್ತದೆ. ಆದರೆ, ಮತ್ತೆ ಮೊಬೈಲ್‌ಗೆ ಸಂಪರ್ಕಿಸಬೇಕು ಎಂದಾದರೆ ಬ್ಲುಟೂತ್ ಆನ್‌ ಮಾಡುವುದರ ಜೊತೆಗೆ ನೆಕ್‌ಬ್ಯಾಂಡ್‌ ಅನ್ನೂ ಪವರ್‌ ಆನ್‌ ಮಾಡಬೇಕಾಗುತ್ತದೆ. ಈ ರಗಳೆಗಳನ್ನು ತಪ್ಪಿಸಲು ಬಡ್ಸ್‌ಗಳು ಲಾಕ್‌ ಆದಾಗ ಫೋನ್‌ನಿಂದ ಡಿಸ್ಕನೆಕ್ಟ್‌ ಆಗುವಂತೆ ನೆಕ್‌ಬ್ಯಾಂಡ್‌ ಅನ್ನು ವ್ಯವಸ್ಥೆಗೊಳಿಸುವ ಅಗತ್ಯ ಇದೆ.

ಇದರಲ್ಲಿ 300 ಎಂಎಎಚ್‌ ಬ್ಯಾಟರಿ ಇದ್ದು, ಟೈಪ್‌ ಸಿ ಫಾಸ್ಟ್‌ ಚಾರ್ಜಿಂಗ್‌ ಕೇಬಲ್‌ ಹೊಂದಿದೆ. 10 ನಿಮಿಷ ಚಾರ್ಜ್‌ ಮಾಡಿದರೆ 7 ಗಂಟೆಯವರೆಗೆ ಸಂಗೀತ ಆಲಿಸಬಹುದು. ಒಮ್ಮೆ ಪೂರ್ತಿ ಚಾರ್ಜ್‌ ಮಾಡಲು ಒಂದೂವರೆ ಗಂಟೆ ಬೇಕು. ಪೂರ್ತಿ ಚಾರ್ಜ್‌ ಆದರೆ 60 ಗಂಟೆ ನಿರಂತರವಾಗಿ ಹಾಡು ಕೇಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಪೂರ್ತಿ ಚಾರ್ಜ್‌ ಮಾಡಿದ ಬಳಿಕ ಕರೆ ಸ್ವೀಕರಿಸುವುದು, ಸಂಗೀತ ಕೇಳುವುದು ಹೀಗೆ ಒಂದು ವಾರ ಬಳಕೆ ಮಾಡಲಾಯಿತು. ಅಷ್ಟಾದರೂ ಬ್ಯಾಟರಿ ಖಾಲಿ ಆಗಲಿಲ್ಲ. ಹೀಗಾಗಿ ಕೊಟ್ಟು ಹಣಕ್ಕೆ ಯಾವುದೇ ಮೋಸ ಆಗುವುದಿಲ್ಲ.

ADVERTISEMENT

ನಾಲ್ಕು ಬಟನ್‌ಗಳಿವೆ. ಮೊದಲ ಬಟನ್‌ ಪವರ್ ಆನ್‌ ಅಥವಾ ಆಫ್‌ ಮಾಡಲು, ಎರಡನೇ ಬಟನ್‌ ವಾಲ್ಯುಂ ಹೆಚ್ಚಿಸಲು, ಮೂರನೇ ಬಟನ್‌ಕಾಲ್‌ ರಿಸೀವ್‌ ಮಾಡಲು ಅಥವಾ ಕಟ್‌ ಮಾಡಲು ಹಾಗೂ ನಾಲ್ಕನೇ ಬಟನ್‌ ವಾಲ್ಯುಂ ಕಡಿಮೆ ಮಾಡುವಂತೆ ವ್ಯವಸ್ಥೆಗೊಳಿಸಲಾಗಿದೆ. ಫೋನ್‌ ರಿಸೀವ್‌ ಅಥವಾ ಕಟ್‌ ಮಾಡುವ ಬಟನ್‌ ಸುಲಭಕ್ಕೆ ಸಿಗುವಂತೆ ಅಳವಡಿಸಿಲ್ಲ. ಇದು ಕಿರಿಕಿರಿ ಮೂಡಿಸುತ್ತದೆ. ಹೀಗಾಗಿ ಬಟನ್‌ ಜಾಗಗಳನ್ನು ಮರುಹೊಂದಾಣಿಕೆ ಮಾಡಿದರೆ ಆಗ ನೆಕ್‌ಬ್ಯಾಂಡ್ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತದೆ.

ಆಡಿಯೊ ಕ್ಲಾರಿಟಿ ಚೆನ್ನಾಗಿದೆ. ಫೋನ್‌ ಕಾಲ್‌ ಮಾಡಿದಾಗ ಮತ್ತು ಸ್ವೀಕರಿಸಿದಾಗ ಧ್ವನಿಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮನೆಯ ಹೊರಗಡೆ ಹೆಚ್ಚು ಗದ್ದಲ ಇರುವ ಸಾರ್ವಜನಿಕ ಜಾಗಗಳಲ್ಲಿಯೂ ಎರಡೂ ಕಡೆಯವರಿಗೂ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಸಂಗೀತ ಕೇಳುವ ಗುಣಮಟ್ಟ ಸಹ ಚೆನ್ನಾಗಿದೆ. ಆದರೆ, ವಾಲ್ಯುಂ ಅನ್ನು ಮಧ್ಯಮ ಮಟ್ಟಕ್ಕಿಂತ ಹೆಚ್ಚು ಅಥವಾ ಗರಿಷ್ಠ ಮಟ್ಟಕ್ಕೆ ಇಟ್ಟರೆ ಆಗ ಕರ್ಕಷ ಅನ್ನಿಸುತ್ತದೆ. ಧ್ವನಿ ಒಡೆದಂತೆ ಕೇಳಿಸುತ್ತದೆ. ಇದನ್ನು ಸುಧಾರಿಸುವ ಕಡೆಗೂ ಕಂಪನಿ ಗಮನ ಹರಿಸುವ ಅಗತ್ಯ ಇದೆ.

ಬೆವರು ಮತ್ತು ನೀರಿನಿಂದ ರಕ್ಷಣೆಗೆ ಐಪಿಎಕ್ಸ್‌4 ರೇಟಿಂಗ್ಸ್‌ ಹೊಂದಿದೆ. ಬ್ಲುಟೂತ್‌ 5.2 ವರ್ಷನ್‌ ಹೊಂದಿದ್ದು, ಫೋನ್‌ ಜೊತೆ ಸುಲಭವಾಗಿ ಕೆನೆಕ್ಟ್‌ ಮಾಡಬಹುದು. ಒಟ್ಟಾರೆಯಾಗಿ ನೋಡುವುದಾದರೆ ₹799ರ ಬೆಲೆಗೆ ಹೆಚ್ಚಿನ ಮೌಲ್ಯ ತಂದುಕೊಡುವ ಸಾಧನ ಎಂದರೆ ತಪ್ಪಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.