ADVERTISEMENT

ಬರಲಿದೆ ‘ಟೆಸ್ಟ್‌ಟ್ಯೂಬ್’ ಮಾಂಸ!

ಪೃಥ್ವಿರಾಜ್ ಎಂ ಎಚ್
Published 30 ಜನವರಿ 2018, 19:30 IST
Last Updated 30 ಜನವರಿ 2018, 19:30 IST
ಬರಲಿದೆ ‘ಟೇಸ್ಟ್‌ಟ್ಯೂಬ್’ ಮಾಂಸ!
ಬರಲಿದೆ ‘ಟೇಸ್ಟ್‌ಟ್ಯೂಬ್’ ಮಾಂಸ!   

ವಿಶ್ವದಲ್ಲೇ ಮೊದಲ ಬಾರಿಗೆ 2013ರ ಆಗಸ್ಟ್‌ನಲ್ಲಿ, ಪ್ರಯೋಗಾಲಯದಲ್ಲಿ ತಯಾರಿಸಿದ ಕೃತಕ ಮಾಂಸದ ತುಂಡುಗಳನ್ನು ಮತ್ತು ಅದರಿಂದ ತಯಾರಿಸಿದ ಬರ್ಗರ್‌ ಬಗ್ಗೆ ಲಂಡನ್‌ನಲ್ಲಿ ಸೇರಿದ್ದ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಡಚ್‌ ಸಂಶೋಧಕ ಮಾರ್ಕ್‌ಪೋಸ್ಟ್ ವಿವರಿಸಿದ್ದರು.

ಅದು, ಪರ್ಯಾಯ ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ದೊಡ್ಡ ಮೈಲುಗಲ್ಲು ಎಂದು ಎನಿಸಿಕೊಂಡಿತ್ತು. ಆದರೆ, ಆಗ ಈ ಕೃತಕ ಮಾಂಸದ ಬೆಲೆ ಕೆ.ಜಿಗೆ ಬರೊಬ್ಬರಿ ₹2.50ಕೋಟಿಯಷ್ಟಿತ್ತು! ಆದರೇನಂತೆ ಮಾರ್ಕ್‌ಪೋಸ್ಟ್‌ ಅವರ ಪ್ರಯೋಗ ಯಶಸ್ವಿ ಆಗಿದ್ದರಿಂದ ಹಲವು ನವೋದ್ಯಮಗಳು ಈ ಕೃತಕ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಮಾರಾಟ ಮಾಡಲು ತುದಿಗಾಲಲ್ಲಿ ನಿಂತಿವೆ.

ಈಗಾಗಲೇ ಅಮೆರಿಕದ ಮೊಂಫಿಸ್ ಮೀಟ್ಸ್ ಎಂಬ ಸಂಸ್ಥೆ, ಇದೇ ರೀತಿ ಕೋಳಿ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುತ್ತದೆ. ಇದನ್ನು ಮಾರುಕಟ್ಟೆಗೆ ತರಲು ಪ್ರಯತ್ನಗಳನ್ನೂ ನಡೆಸುತ್ತಿದೆ. ಇದಕ್ಕಾಗಿ ‘ಡಕ್ ಎ ಲಾಂಜ್‌’ ಎಂಬ ದೊಡ್ಡ ಪೌಲ್ಟ್ರಿ ಕೂಡ ನಿರ್ಮಿಸಿದೆ.

ADVERTISEMENT

ಜತೆಗೆ ‘ಸೂಪರ್ ಮೀಲ್‌’ ಎಂಬ ಇಸ್ರೇಲ್‌ನ ಸಂಸ್ಥೆ ಮತ್ತು ‘ಮೊಸಾ’ ಎಂಬ ನವೋದ್ಯಮವೂ ಈ ಕೃತಕ ಮಾಂಸ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ.

ಹೇಗೆ ತಯಾರಿಸುತ್ತಾರೆ?

ಮೇಕೆ, ಕೋಳಿ, ಕುರಿಯಂತಹ ಜೀವಿಗಳಿಂದ ಸೂಜಿ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಮಾಂಸಖಂಡವನ್ನು ತೆಗೆದುಕೊಳ್ಳುತ್ತಾರೆ. ಈ ಮಾಂಸಖಂಡದಲ್ಲಿರುವ ಆಕರ ಕೋಶಗಳನ್ನು ಬೇರ್ಪಡಿಸಿ, ದೇಹಕ್ಕೆ ಅಗತ್ಯವಿರುವ ಉಷ್ಣಾಂಶದ ವಾತಾವರಣ ಇರುವ ಬಯೊ ರಿಯಾಕ್ಟರ್‌ ಪೆಟ್ಟಿಗೆಗಳಲ್ಲಿ ಇಡುತ್ತಾರೆ. ಅದೇ ಜೀವಿಯ ರಕ್ತ ತೆಗೆದುಕೊಂಡು ಅದರಲ್ಲಿರುವ ಸಿರಮ್‌ ಎಂಬ ಅಂಶವನ್ನು ಬೇರ್ಪಡಿಸಿ, ಪ್ರೊಟೀನ್, ವಿಟಮಿನ್‌, ಅಮಿನೊ ಆ್ಯಸಿಡ್‌ ಅನ್ನು ಇದಕ್ಕೆ ಸೇರಿಸಿ ಕೋಶ ಮತ್ತು ಕಣಗಳ ಸಂಖ್ಯೆ ಹೆಚ್ಚಿಸುತ್ತಾರೆ. ‘ಹತ್ತು ಪುಟ್ಟ ಮಾಂಸದ ತುಂಡುಗಳಿಂದ ಎರಡು ತಿಂಗಳಲ್ಲಿ ಸುಮಾರು 50 ಟನ್ ಮಾಂಸ ತಯಾರಿಸಬಹುದು’ ಎಂದು ಹೇಳುತ್ತಾರೆ ಮಾರ್ಕ್‌ಪೋಸ್ಟ್.

ಇದರ ಅಗತ್ಯವೇನು?

ಕೋಳಿ ಸಾಕಾಣಿಕೆ ಮತ್ತು ಮಾಂಸ ಉತ್ಪನ್ನಗಳಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗಟ್ಟಲು ಈ ಪರ್ಯಾಯ ಮಾಂಸ ಬಳಸುವುದು ಸೂಕ್ತ ಎಂದು ಸಂಶೋಧಕರು ಹೇಳುತ್ತಿದ್ದಾರೆ. ವಿಶ್ವದಾದ್ಯಂತ ಶೇ 50ರಷ್ಟು ಆ್ಯಂಟಿಬಯೊಟಿಕ್ಸ್‌ ಔಷಧಿಗಳ ತಯಾರಿಕೆಗೆ ಮಾಂಸವನ್ನೇ ಬಳಸಲಾಗುತ್ತಿದೆ. ಇದರಿಂದ ಔಷಧಿಗಳ ಶಕ್ತಿಯನ್ನು ತಡೆದುಕೊಳ್ಳುವಂತಹ ಬ್ಯಾಕ್ಟ್ರೀಯಾಗಳು ಸೃಷ್ಟಿಯಾಗುತ್ತಿವೆ.

ಇಷ್ಟೇ ಅಲ್ಲ, ಸುಮಾರು 50 ಎಕರೆ ಪ್ರದೇಶದಲ್ಲಿ ಪಶುಗಳನ್ನು ಬೆಳೆಸುವುದರಿಂದ ಸಿಗುವ ಮಾಂಸವನ್ನು ಕೇವಲ 3 ಎಕರೆ ಪ್ರದೇಶದಲ್ಲೇ ಪಡೆಯಬಹುದು. ಅಲ್ಲದೆ ಜನರಿಗೆ ಅಗತ್ಯವಾದ ಪೋಷಕಾಂಶಗೊಳೊಂದಿಗೆ, ಮಾಲಿನ್ಯ ರಹಿತವಾಗಿ, ಇದನ್ನು ತಯಾರಿಸಬಹುದು. ಇಷ್ಟೆಲ್ಲಾ ಪ್ರಯೋಜನಗಳು ಇರುವುದರಿಂದ ‘ಪೇಟಾ’ದಂತಹ ಪ್ರಾಣಿದಯಾ ಸಂಘಗಳು, ‘ನಾಸಾ’ದತಂಹ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈ ಕೃತಕ ಮಾಂಸ ಉತ್ಪಾದನೆಗೆ ಪ್ರೊತ್ಸಾಹ ನೀಡುತ್ತಿವೆ.

ಕೈಗೆಟುಕುವ ಬೆಲೆ?

ಇದರ ಪ್ರಯೋಗ ಯಶಸ್ವಿಯಾದ ಸಂದರ್ಭದಲ್ಲಿ ಇದರ ಬೆಲೆ ಕೆಜಿಗೆ ರೂ 2.5ಕೋಟಿಯಷ್ಟಿತ್ತು. ಪ್ರಸ್ತುತ ಈ ಮಾಂಸದ ಬೆಲೆ ಕೆ.ಜಿಗೆ 24ಲಕ್ಷಕ್ಕೆ ಇಳಿದಿದೆ. ಅಂದರೆ 5 ವರ್ಷದಲ್ಲಿ ಕೋಟಿಯಿಂದ ಲಕ್ಷಕ್ಕೆ ಇಳಿದಿದೆ. ಇದರ ಉತ್ಪಾದನೆ ಹೆಚ್ಚಾದರೆ ಮುಂದೊಂದು ದಿನ ಕೈಗೆಟುಕುವ ಬೆಲೆಯಲ್ಲಿ ಸಿಗಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.