ADVERTISEMENT

ಗಮ್ಯ ಸೇರಿದ ಆದಿತ್ಯ–ಎಲ್‌1; ಭಾರತದ ಸೌರ ಸಂಶೋಧನೆಯ ಮೊದಲ ಉಪಗ್ರಹ ಯಶಸ್ವಿ

ಪಿಟಿಐ
Published 7 ಜನವರಿ 2024, 0:30 IST
Last Updated 7 ಜನವರಿ 2024, 0:30 IST
   

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಾಣವಾಗಿದೆ. ದೇಶದ ಮೊದಲ ಸೌರ ಅಧ್ಯಯನ ಯೋಜನೆಯ ಉಪಗ್ರಹ ಆದಿತ್ಯ ಎಲ್‌1 ತಾನು ಸೇರಬೇಕಿದ್ದ ಸ್ಥಾನ
ವನ್ನು ಶನಿವಾರ ಸೇರಿದೆ. ಭೂಮಿಯಿಂದ 150 ಲಕ್ಷ ಕಿ.ಮೀ. ದೂರದಲ್ಲಿರುವ ಲಗ್ರಾಂಜಿಯನ್‌ ಬಿಂದುವನ್ನು (ಎಲ್‌1) ಆದಿತ್ಯ ಎಲ್‌1 ತಲುಪಿದೆ. ಇಲ್ಲಿಂದ ಅದು ಸೂರ್ಯನ ಸುತ್ತ ಸುತ್ತಲಿದೆ ಮತ್ತು ಸೂರ್ಯನ ಕೌತುಕ
ಗಳನ್ನು ಅಧ್ಯಯನಕ್ಕೆ ಒಳಪಡಿಸಲಿದೆ.  

ಚಂದ್ರನ ದಕ್ಷಿಣ ಭಾಗದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ಹಿರಿಮೆ ಮೆರೆದ ಕೆಲವೇ ತಿಂಗಳ ಬಳಿಕ ಸೌರ ಅಧ್ಯಯನದ ಉಪಗ್ರಹವನ್ನು ಗುರಿ ಸೇರಿಸುವಲ್ಲಿಯೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ ) ಯಶ ಗಳಿಸಿದೆ. 

ಧ್ರುವೀಯ ಉಪಗ್ರಹ ಉಡ್ಡಯನ ವಾಹನ (ಪಿಎಸ್‌ಎಲ್‌ವಿ–ಸಿಎಸ್‌7) ಮೂಲಕ ಆದಿತ್ಯ ಎಲ್‌1 ಉಪಗ್ರಹ
ವನ್ನು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 2023ರ ಸೆಪ್ಟೆಂಬರ್‌ 2ರಂದು ಉಡಾವಣೆ ಮಾಡಲಾಗಿತ್ತು. 

ADVERTISEMENT

63 ನಿಮಿಷ 20 ಸೆಕೆಂಡ್‌ ‍ಪ್ರಯಾಣದ ಬಳಿಕ ನೌಕೆಯು ಭೂಮಿಯ ದೀರ್ಘವೃತ್ತಾಕಾರದ ಕಕ್ಷೆಯನ್ನು ಸೇರಿತ್ತು. ನಂತರ, ಹಲವು  ಕಾರ್ಯಾಚರಣೆಗಳ ಮೂಲಕ ಭೂಮಿಯ ಗುರುತ್ವಾಕರ್ಷಣೆಯಿಂದ ಉಪಗ್ರಹ ತಪ್ಪಿಸಿಕೊಳ್ಳುವಂತೆ ಮಾಡಲಾಯಿತು. ಬಳಿಕ, ನೌಕೆಯು ಎಲ್‌1 ಬಿಂದುವಿನತ್ತ ಸಾಗಿತು. 

ಪ್ರಭಾಗೋಳ, ವರ್ಣಮಂಡಲ ಮತ್ತು ಸೂರ್ಯನ ಅತ್ಯಂತ ಹೊರ ವಲಯವಾದ ಪ್ರಭಾ ವಲಯವನ್ನು ಅಧ್ಯಯನ ನಡೆಸುವ ಏಳು ಉಪಕರಣಗಳು ಈ ನೌಕೆಯಲ್ಲಿ ಇವೆ. ಕಣಗಳು, ವಿದ್ಯುತ್ಕಾಂತೀಯ ಕ್ಷೇತ್ರ ಮತ್ತು ಕಾಂತೀಯ ಕ್ಷೇತ್ರಗಳನ್ನು ಗುರುತಿಸುವ ಉಪಕರಣಗಳು ಇದರಲ್ಲಿ ಸೇರಿವೆ. 

‘ನಾಲ್ಕು ಉಪಕರಣಗಳು ನೇರವಾಗಿ ಸೂರ್ಯನ ವೀಕ್ಷಣೆ ನಡೆಸಲಿವೆ. ಕಣಗಳು ಮತ್ತು ಕಾಂತೀಯ
ಕ್ಷೇತ್ರಗಳನ್ನು ಇತರ ಮೂರು ಉಪಕರಣಗಳು ಅಧ್ಯಯನ ನಡೆಸಲಿವೆ. ಖಗೋಳದಲ್ಲಿ ಸೌರ ವಿದ್ಯಮಾನಗಳ ಪರಿಣಾಮಗಳೇನು ಎಂಬುದರ ಅಧ್ಯಯನಕ್ಕೆ ಅಗತ್ಯವಾದ ದತ್ತಾಂಶಗಳನ್ನು ಈ ಉಪಕರಣಗಳು ನೀಡಲಿವೆ’ ಎಂದು ಇಸ್ರೊ ಹೇಳಿದೆ. 

ಲಗ್ರಾಂಜಿಯನ್‌ ಬಿಂದು

ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರದಲ್ಲಿ ಭೂಮಿಯಿಂದ ಶೇ ಒಂದರಷ್ಟು ದೂರದಲ್ಲಿ ಲಗ್ರಾಂಜಿಯನ್‌ ಬಿಂದು ಇದೆ. 

ಲಗ್ರಾಂಜಿಯನ್‌ ಬಿಂದುವಿನ ಸುತ್ತಲಿನ ಪ್ರಭಾ ವಲಯದ ಕಕ್ಷೆಯಲ್ಲಿ ಇರುವ ಉಪಗ್ರಹಕ್ಕೆ ಒಂದು ಮಹತ್ವದ ಅನುಕೂಲ ಇದೆ. ಯಾವುದೇ ರೀತಿಯ ಗ್ರಹಣ ಉಂಟಾದರೂ ಅದರಿಂದ ಬಾಧಿತವಾಗದೆ, ಸೂರ್ಯನನ್ನು ನಿರಂತರವಾಗಿ ಗಮನಿಸುವುದು ಉಪ‍ಗ್ರಹಕ್ಕೆ ಸಾಧ್ಯವಾಗುತ್ತದೆ. ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ವಾತಾವರಣದ ಮೇಲೆ ಅದರ ಪರಿಣಾಮಗಳನ್ನು ಅದು ನಡೆಯುತ್ತಿರುವಾಗಲೇ ಗಮನಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ಇಸ್ರೊದ ವಿಜ್ಞಾನಿಗಳು ಹೇಳಿದ್ದಾರೆ. 

ಅಧ್ಯಯನ ಏನೇನು?

1. ಸೂರ್ಯನ ಮೇಲ್ಮೈ ವಾತಾವರಣ (ಪ್ರಭಾ ಗೋಳ ಮತ್ತು ಪ್ರಭಾ ವಲಯ)

2. ಪ್ರಭಾ ಗೋಳ ಮತ್ತು ಪ್ರಭಾ ವಲಯದ ತಾಪ ಏರಿಕೆ ಹೇಗೆ?

3. ಪ್ರಭಾ ವಲಯದಿಂದ ಭಾರಿ ಪ್ರಮಾಣದ ಹೊರಸೂಸುವಿಕೆ ಮತ್ತು ಬೆಂಕಿಯ ಜ್ವಾಲೆಗಳು

4. ಸೂರ್ಯನಿಂದ ಹೊರಹೊಮ್ಮುವ ಕಣಗಳು

5. ಸೌರ ಪ್ರಭಾ ವಲಯ ಮತ್ತು ಅದರ ಬಿಸಿ ಏರುವಿಕೆ ವ್ಯವಸ್ಥೆ

6. ಪ್ರಭಾ ವಲಯದಲ್ಲಿ ಕಾಂತೀಯ ಕ್ಷೇತ್ರದ ವ್ಯವಸ್ಥೆ ಮತ್ತು ಗಾತ್ರ

7. ಬಾಹ್ಯಾಕಾಶ ವಾತಾವರಣದಲ್ಲಿ ಸೌರ ಮಾರುತದ ಉಗಮ ಮತ್ತು ಇತರ ವಿದ್ಯಮಾನಗಳು

****

ಈ ಅಸಾಧಾರಣ ಸಾಧನೆಯನ್ನು ದೇಶದ ಜನರ ಜೊತೆಗೆ ಕೊಂಡಾಡುತ್ತೇನೆ. ಮಾನವ ಕುಲದ ಅನುಕೂಲಕ್ಕಾಗಿ ವಿಜ್ಞಾನದ ಹೊಸ ದಿಗಂತಗಳ ಶೋಧ ಮುಂದುವರಿಯಲಿದೆ

-ನರೇಂದ್ರ ಮೋದಿ, ಪ್ರಧಾನಿ

****

ಚಂದ್ರನ ಮೇಲಿನ ನಡಿಗೆಯಿಂದ ಸೂರ್ಯನೊಂದಿಗೆ ನರ್ತನದ ವರೆಗೆ.... ಎಂತಹ ಭವ್ಯ ವರ್ಷವೊಂದು ಭಾರತದ ಮುಂದಿದೆ

-ಜಿತೇಂದ್ರ ಸಿಂಗ್‌, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ

****

ಈ ಯಶಸ್ಸು ಇಂತಹ ಸಂಕೀರ್ಣ ಕಾರ್ಯಾಚರಣೆ ನಡೆಸುವ ತಾಕತ್ತು ಇಸ್ರೊಗೆ ಇದೆ ಎಂಬುದನ್ನು ತೋರಿಸುವುದರ ಜೊತೆಗೆ ಇನ್ನಷ್ಟು ಕಾರ್ಯಾಚರಣೆಗೆ ಆತ್ಮವಿಶ್ವಾಸ ತುಂಬುತ್ತದೆ

-ಭಾರತೀಯ ಬಾಹ್ಯಾಕಾಶ ಸಂಸ್ಥೆ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.