ADVERTISEMENT

Quantum Dots ಶೋಧ: ಅಮೆರಿಕದ ಮೂವರು ರಸಾಯನ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ

ಪಿಟಿಐ
Published 4 ಅಕ್ಟೋಬರ್ 2023, 11:50 IST
Last Updated 4 ಅಕ್ಟೋಬರ್ 2023, 11:50 IST
<div class="paragraphs"><p>ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಬುಧವಾರ ಮಾಹಿತಿ ನೀಡಿದ ರಾಯಲ್ ಸ್ವೀಡಿಶ್&nbsp;ವಿಜ್ಞಾನ ಅಕಾಡೆಮಿಯ ಕಾರ್ಯದರ್ಶಿ ಹೇನ್ಸ್‌ ಎಲ್ಲಿಗ್ರೆನ್‌ (ಕುಳಿತವರಲ್ಲಿ ಮಧ್ಯದಲ್ಲಿರುವವರು) 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಿಸಿದರು</p></div>

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಬುಧವಾರ ಮಾಹಿತಿ ನೀಡಿದ ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯ ಕಾರ್ಯದರ್ಶಿ ಹೇನ್ಸ್‌ ಎಲ್ಲಿಗ್ರೆನ್‌ (ಕುಳಿತವರಲ್ಲಿ ಮಧ್ಯದಲ್ಲಿರುವವರು) 2023ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಿಸಿದರು

   

ರಾಯಿಟರ್ಸ್ ಚಿತ್ರ

ಸ್ಟಾಕ್‌ಹೋಮ್ಸ್‌: ‘ಕ್ವಾಂಟಮ್‌ ಡಾಟ್ಸ್’ ಎಂದು ಕರೆಯಲಾಗುವ ಅತ್ಯಂತ ಚಿಕ್ಕ ಕಣಗಳ ಕುರಿತು ನಡೆಸಿದ ಸಂಶೋಧನೆಗಾಗಿ ಅಮೆರಿಕದ ಮೂವರು ರಸಾಯನ ವಿಜ್ಞಾನಿಗಳಿಗೆ 2023ರ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

ADVERTISEMENT

ಪ್ರಶಸ್ತಿಗೆ ಭಾಜನರಾದ ಎಂಐಟಿಯ ಮೌಂಗಿ ಬಾವೆಂಡಿ, ಕೊಲಂಬಿಯಾ ವಿಶ್ವವಿದ್ಯಾಲಯದ ಲೂಯಿಸ್ ಬ್ರುಸ್‌ ಹಾಗೂ ನ್ಯಾನೊ ಕ್ರಿಸ್ಟಲ್ ಟೆಕ್ನಾಲಜಿಯ ಅಲೆಕ್ಸಿ ಎಕಿಮೊವ್ ಅವರು ಎಲೆಕ್ಟ್ರಾನಿಕ್ಸ್‌ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುವ ಅತ್ಯಂತ ಪ್ರಕರ ಬೆಳಕು ಉತ್ಪಾದಿಸುವ ಕ್ವಾಂಟಮ್‌ ಡಾಟ್ಸ್ ಅಭಿವೃದ್ಧಿಯಲ್ಲಿ ಸಂಶೋಧನೆ ನಡೆಸಿದ್ದರು. 

ಪುಟ್ಟದಾದ ಕ್ವಾಂಟಮ್ ಚುಕ್ಕಿ ಶೋಧ

ಕೆಲವೇ ಕೆಲವು ಅಣುಗಳಷ್ಟು ವ್ಯಾಸ ಹೊಂದಿರುವ ಈ ಕ್ವಾಂಟಮ್‌ ಡಾಟ್ಸ್, ಟೆಲಿವಿಷನ್ ಪರದೆ ಹಾಗೂ ಎಲ್‌ಇಡಿ ದೀಪಗಳಲ್ಲೂ ಬಳಕೆಯಾಗುತ್ತಿದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್‌ನ ಪ್ರಕಟಣೆಯಲ್ಲಿ ಹೇಳಲಾಗಿದೆ.

ಇಷ್ಟು ಮಾತ್ರವಲ್ಲ ಈ ಪ್ರಕರ ಬೆಳಕಿನಿಂದ ಕ್ಯಾನ್ಸರ್‌ ಕೋಶಗಳೂ ವೈದ್ಯರಿಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಚುಕ್ಕಿಗಳಲ್ಲಿರುವ ಎಲೆಕ್ಟ್ರಾನ್‌ಗಳು ಅತ್ಯಂತ ನಿರ್ಬಂಧಿತ ಚಲನೆ ಹೊಂದಿರುತ್ತವೆ. ಇದರಿಂದಾಗಿ ಲಭ್ಯವಿರುವ ಬೆಳಕನ್ನೇ ಬಳಸಿಕೊಂಡು ಅತ್ಯಂತ ಪ್ರಕರ ಬಣ್ಣದ ಬೆಳಕನ್ನು ಇವು ಹೊರಸೂಸುತ್ತವೆ ಎಂದೆನ್ನಲಾಗಿದೆ.

78 ವರ್ಷದ ಎಕಿಮೊವ್‌, 80 ವರ್ಷದ ಬ್ರುಸ್‌ ಅವರು ಈ ತಂತ್ರಜ್ಞಾನದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ. 62 ವರ್ಷದ ಬಾವೆಂಡಿ ಅವರು ಈ ಕ್ವಾಂಟಮ್‌ ಡಾಟ್ಸ್ ಬಳಕೆ ಯೋಗ್ಯವಾಗಿಸುವ ಕಾರ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿರುವುದನ್ನು ಗುರುತಿಸಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಅಕಾಡೆಮಿ ಹೇಳಿದೆ.

ಪ್ರಶಸ್ತಿ ಘೋಷಣೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಬಾವೆಂಡಿ, ‘ಅಚ್ಚರಿ, ಆಘಾತ, ಅನಿರೀಕ್ಷಿತ ಮತ್ತು ಅತ್ಯಂತ ಸನ್ಮಾನಿತ’ ಎಂದು ಹೇಳಿದ್ದಾರೆ.

ಅಕಾಡೆಮಿ ಘೋಷಣೆ ಮೊದಲೇ ಮಾಹಿತಿ ಸೋರಿಕೆ!

ಅಕಾಡೆಮಿ ಪ್ರಕಟಿಸುವ ಮೊದಲೇ ಪ್ರಶಸ್ತಿ ಪುರಸ್ಕೃತರ ಹೆಸರು ಸೋರಿಕೆಯಾಗಿತ್ತು. ಇದನ್ನು ಕೆಲ ಪತ್ರಿಕೆಗಳು ವರದಿ ಮಾಡಿದ್ದವು. ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಬಾವೆಂಡಿ, ‘ಅಕಾಡೆಮಿ ಕರೆ ಮಾಡಿದಾಗಷ್ಟೇ ನನಗೆ ಪ್ರಶಸ್ತಿ ಘೋಷಣೆಯಾದ ವಿಷಯ ತಿಳಿಯಿತು’ ಎಂದಿದ್ದಾರೆ.

2023ರ ನೊಬೆಲ್ ಪ್ರಶಸ್ತಿಯಲ್ಲಿ ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಈ ಬಾರಿಯ ಪ್ರಶಸ್ತಿ ಮೊತ್ತ ಶೇ 10ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಪ್ರತಿ ಭಾಗದ ಪ್ರಶಸ್ತಿಗಳು ₹ 8.28 ಕೋಟಿಯಷ್ಟಾಗಿದೆ. ವಿಜೇತರಿಗೆ 18 ಕ್ಯಾರೆಟ್‌ ಚಿನ್ನದ ಪದಕ ಸಿಗಲಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್‌ನಲ್ಲಿ ನಡೆಯಲಿದೆ. 

ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿತ್ತು. ಕೋವಿಡ್–19 ಸೋಂಕು ನಿವಾರಣೆಗೆ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿಗಳಾದ ಕ್ಯಾಟಲಿನ್ ಕಾರಿಕೊ ಹಾಗೂ ಡ್ರ್ಯೂ ವೈಸ್‌ಮನ್ ಅವರಿಗೆ 2023ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.