ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಶುಭಾಂಶು ಶುಕ್ಲಾ
(ಪಿಟಿಐ ಚಿತ್ರ)
ನವದೆಹಲಿ: ಭಾರತದ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ (ಐಎಸ್‌ಎಸ್) ಜುಲೈ 14ರಂದು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಗುರುವಾರ ತಿಳಿಸಿದೆ.
‘ಆಕ್ಸಿಯಂ–4’ ಯೋಜನೆಯ ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಡ್ರ್ಯಾಗನ್ ಬಾಹ್ಯಾಕಾಶ ಕೋಶವನ್ನು ಐಎಸ್‌ಎಸ್‌ನಿಂದ ಅನ್‌ಡಾಕ್ (ಬೇರ್ಪಡಿಸುವುದು) ಮಾಡಬೇಕಿದೆ. ಆ ಪ್ರಕ್ರಿಯೆಗೆ ಜುಲೈ 14ರ ದಿನಾಂಕ ನಿಗದಿಪಡಿಸಿದ್ದೇವೆ’ ಎಂದು ನಾಸಾ ಅಧಿಕಾರಿ ಸ್ಟೀವ್ ಸ್ಟಿಚ್ ತಿಳಿಸಿದ್ದಾರೆ.
ಶುಭಾಂಶು ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಅವರನ್ನೊಳಗೊಂಡ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಜತೆಗೆ ಕಕ್ಷೆಯಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿದ್ದಾರೆ.
ಭೂಮಿಯಿಂದ ಸುಮಾರು 250 ಮೈಲುಗಳಷ್ಟು ಎತ್ತರದಲ್ಲಿರುವ ಗಗನಯಾತ್ರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರಗಳು ಮತ್ತು ವಿಡಿಯೊಗಳನ್ನು ಸೆರೆಹಿಡಿಯುವುದು, ಭೂಮಿಯ ನೋಟವನ್ನು ವೀಕ್ಷಿಸುವುದು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸಿ ಸಮಯ ಕಳೆಯುವ ಕೆಲಸ ಮಾಡಿದ್ದಾರೆ ಎಂದು ಆ್ಯಕ್ಸಿಯಂ ಸ್ಪೇಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಭೂಮಿಯ ಸುತ್ತ ಸುಮಾರು 230 ಬಾರಿ ಪ್ರದಕ್ಷಿಣೆ ಹಾಕಿರುವ ಆಕ್ಸಿಯಮ್ ಮಿಷನ್–4, ಆರು ಮಿಲಿಯನ್ ಮೈಲುಗಳಿಗಿಂತ ಹೆಚ್ಚು (96.5 ಲಕ್ಷ ಕಿ.ಮೀ) ಕ್ರಮಿಸಿದೆ.
ತಂಡದ ಸದಸ್ಯರು ತಮ್ಮ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಜತೆಗೆ, ಬಾಹ್ಯಾಕಾಶದಲ್ಲಿ ಕಂಡಂತಹ ಅಪರೂಪದ ಪ್ರಕ್ರಿಯೆಗಳು ಮತ್ತು ಅಚ್ಚರಿಯ ಸಂಗತಿಗಳ ಫೋಟೊ ಕ್ಲಿಕ್ಕಿಸುವ ಜತೆಗೆ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ.
ಬಯೋಮೆಡಿಕಲ್ ವಿಜ್ಞಾನ, ಅಡ್ವಾನ್ಸಡ್ ಮೆಟೀರಿಯಲ್ಸ್, ನ್ಯೂರೋ ಸೈನ್ಸ್, ಕೃಷಿ, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ 60ಕ್ಕೂ ಪ್ರಯೋಗಗಳನ್ನು ಆ್ಯಕ್ಸಿಯಂ -4 ತಂಡದ ಸದಸ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದೂ ಆಕ್ಸಿಯಮ್ ಸ್ಪೇಸ್ ತಿಳಿಸಿದೆ.
‘ಆಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ‘ಡ್ರ್ಯಾಗನ್’ ಬಾಹ್ಯಾಕಾಶ ಕೋಶವನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಜೂನ್ 25ರಂದು ನಭಕ್ಕೆ ಚಿಮ್ಮಿತ್ತು.
ಬಾಹ್ಯಾಕಾಶ ಕೇಂದ್ರದಲ್ಲಿದ್ದ ಶುಕ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಹನ ನಡೆಸಿದ್ದಾರೆ, ಅಲ್ಲದೇ ಇಸ್ರೋದ ವಿಜ್ಞಾನಿಗಳೊಂದಿಗೆ ಮಾತನಾಡಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್) ಯಶಸ್ವಿಯಾಗಿ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಐಎಸ್‌ಎಸ್ ಪ್ರವೇಶಿಸಿದ ಭಾರತದ ಮೊದಲ ಗಗನಯಾನಿ ಎಂಬ ಕೀರ್ತಿಗೂ ಶುಕ್ಲಾ ಭಾಜನರಾಗಿದ್ದಾರೆ. ಭಾರತದ ರಾಕೇಶ್ ಶರ್ಮಾ ಅವರು ಗಗನಯಾನ ಕೈಗೊಂಡ 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಂಡ ಎರಡನೇ ಗಗನಯಾನಿ ಅವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.