ADVERTISEMENT

ಚಂದ್ರಯಾನ–2 | ಲೋಪ ಏನೆಂದು ತಿಳಿದಿಲ್ಲ, ‘ವಿಕ್ರಮ್‌’ ಚೇತರಿಕೆ ಅಸಾಧ್ಯ

ಲ್ಯಾಂಡರ್‌ ಹೋಳಾಗಿಲ್ಲ

ಎಸ್.ರವಿಪ್ರಕಾಶ್
Published 10 ಸೆಪ್ಟೆಂಬರ್ 2019, 1:36 IST
Last Updated 10 ಸೆಪ್ಟೆಂಬರ್ 2019, 1:36 IST
‘ವಿಕ್ರಮ್‌’ ಲ್ಯಾಂಡರ್‌ –ಸಂಗ್ರಹ ಚಿತ್ರ
‘ವಿಕ್ರಮ್‌’ ಲ್ಯಾಂಡರ್‌ –ಸಂಗ್ರಹ ಚಿತ್ರ   

ಬೆಂಗಳೂರು: ‘ಚಂದ್ರನ ನೆಲಕ್ಕೆ ರಭಸದಿಂದ ಕುಸಿದ ಚಂದ್ರಯಾನ–2 ರ ಲ್ಯಾಂಡರ್‌ ‘ವಿಕ್ರಮ್‌’ ಜತೆಗೆ ಇನ್ನೆಂದಿಗೂ ಸಂಪರ್ಕ ಸಾಧ್ಯವಾಗದು. ಲ್ಯಾಂಡರ್‌ ಆಸೆ ಕೈಬಿಟ್ಟಂತೆ’ ಎಂದು ಇಸ್ರೊ ಹಿರಿಯ ವಿಜ್ಞಾನಿಯೊಬ್ಬರು ಖಚಿತಪಡಿಸಿದ್ದಾರೆ.

‘ಹಾರ್ಡ್‌ ಲ್ಯಾಂಡಿಂಗ್‌’ನಿಂದ ‘ವಿಕ್ರಮ್‌’ ಲ್ಯಾಂಡರ್‌ ಹೋಳಾಗದೇ, ಚಂದ್ರನ ನೆಲದ ಮೇಲೆ ಕುಸಿದ ಸ್ಥಿತಿಯಲ್ಲಿ ಇರುವುದು ಚಿತ್ರದಿಂದ ಗೊತ್ತಾಗಿದೆ. ಅದರ ಅರ್ಥ ಮತ್ತೆ ಸಕ್ರಿಯಗೊಳ್ಳುತ್ತದೆ ಎಂದಲ್ಲ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರ್ಬಿಟರ್‌ ಹತ್ತಿರದಿಂದಲೇ ಲ್ಯಾಂಡರ್‌ನ ಚಿತ್ರವನ್ನು ಸೆರೆ ಹಿಡಿದು ಕಳುಹಿಸಿದೆ. ವಿಕ್ರಮ್‌ ಬಹುತೇಕ ಕುಸಿದು ಕುಳಿತಂತೆ ಕಾಣುತ್ತದೆ. ಆದರೆ, ಭೂಕೇಂದ್ರದಿಂದ ವಿಕ್ರಮ್‌ ಜತೆ ಸಂಪರ್ಕ ಸಕ್ರಿಯಗೊಳಿಸುವುದು ಕಷ್ಟ. ಯಾವ ಹಂತದಲ್ಲಿ ಸಮಸ್ಯೆ ಉದ್ಭವಿಸಿದ್ದರಿಂದ ಹಗುರ ಸ್ಪರ್ಶ ಆಗಲಿಲ್ಲ ಎಂಬ ತನಿಖೆ ನಡೆಯುತ್ತಿದ್ದು, ಈವರೆಗೆ ಒಂದು ಸಣ್ಣ ಸುಳಿವನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದವರು ಹೇಳಿದರು.

ADVERTISEMENT

ಕೊನೆ ಹಂತದಲ್ಲಿ ಅತ್ಯಂತ ಸಣ್ಣ ಸಮಸ್ಯೆ ಉಂಟಾಗಿದೆ. ಅದು ಅವರೋಹಣದ ಸಂದರ್ಭದಲ್ಲಿ ದಿಢೀರ್ ಉಂಟಾದ ಸಮಸ್ಯೆ. ಆ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡುವ ಕೆಲಸ ನಡೆದಿದೆ. ಈವರೆಗೂ ಫಲ ನೀಡಿಲ್ಲ ಎಂದರು.

ಸಣ್ಣ ಲೋಪವಷ್ಟೇ ಆಗಿದೆ. ಅದಕ್ಕಿಂತ ದೊಡ್ಡದ್ದು ಏನೂ ಆಗಿಲ್ಲ. ಆದರೆ, ಆ ಸಣ್ಣ ತಪ್ಪು ಲ್ಯಾಂಡರ್‌ ಅನ್ನು ಪಥ ಬಿಟ್ಟು ಚಲಿಸುವಂತೆ ಮಾಡಿತು ಎಂದು ಅವರು ವಿವರಿಸಿದರು.

‘ಈ ಯೋಜನೆಯ ಹಿಂದೆ ಸುಮಾರು 8–10 ವರ್ಷಗಳ ಶ್ರಮವಿದೆ. ಇಸ್ರೊದಲ್ಲೇ ತುಂಬಾ ನಿರೀಕ್ಷೆ ಇತ್ತು. ಆದರೆ ನಿರಾಸೆ ಆಗಿದ್ದು ನಿಜ. ಈ ಯೋಜನೆಗೆ ಸಾಕಷ್ಟು ವಿಜ್ಞಾನಿಗಳು ಮತ್ತು ತಂತ್ರಜ್ಞರು ಕೆಲಸ ಮಾಡಿದ್ದಾರೆ. ಅವರಲ್ಲಿ ಸಾಕಷ್ಟು ಜನ ನಿವೃತ್ತರಾಗಿದ್ದಾರೆ. ಆರಂಭದಿಂದಲೇ ಅತಿ ಹೆಚ್ಚಿನ ನಿರೀಕ್ಷೆ ಹೊಂದಿದ್ದ ಯೋಜನೆ. ಭವಿಷ್ಯದ ಯೋಜನೆಗಳಿಗೆ ಇದು ಅತ್ಯುತ್ತಮ ಅನುಭವವಾಗಿದೆ’ ಎಂದು ಅವರು ಹೇಳಿದರು.

ಚಂದ್ರಯಾನ–2ರ ಬಹುಪಾಲು ಕೆಲಸವನ್ನು ಆರ್ಬಿಟರ್‌ ಮಾಡುತ್ತದೆ. ಏಳೂವರೆ ವರ್ಷಗಳು ಕಾರ್ಯ ನಿರ್ವಹಿಸುವಷ್ಟು ಇಂಧನ ಹೊಂದಿದೆ. ಅದರಲ್ಲಿರುವ ಉಪಕರಣಗಳು ವಿಶ್ವ ಗುಣಮಟ್ಟದ್ದಾಗಿವೆ. ಅವು ನಿರಂತರ ಮಾಹಿತಿಗಳನ್ನು ರವಾನಿಸುತ್ತವೆ. ಮೊದಲ ನಾಲ್ಕು ವರ್ಷಗಳ ಮಾಹಿತಿ ವಿಶ್ವ ಬಾಹ್ಯಾಕಾಶ ವಿಜ್ಞಾನಿಗಳಿಗೆ ಅತಿ ಉಪಯುಕ್ತವಾಗಲಿವೆ ಎಂದು ತಿಳಿಸಿದರು.

ಭವಿಷ್ಯದ ಯೋಜನೆಗಳಿಗೆ ತೊಂದರೆ ಇಲ್ಲ

ಚಂದ್ರಯಾನ–2 ರ ಅಲ್ಪ ಹಿನ್ನಡೆಯಿಂದ ಭವಿಷ್ಯದ ಆದಿತ್ಯ–1, ಮಾನವಸಹಿತ ಗಗನಯಾನ ಯೋಜನೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೂ ಸವಾಲುಗಳು ಇದ್ದೇ ಇರುತ್ತವೆ. ಆ ಯೋಜನೆಗಳಿಗೆ ಅತ್ಯುತ್ತಮ ಅಡಿಪಾಯ ಸಿಕ್ಕಿದೆ. ಆ ಕೆಲಸಗಳು ಭರದಿಂದಲೇ ಸಾಗಿವೆ ಎಂದರು.

ಯೋಜನೆಗೆ ಹಿನ್ನಡೆ ಆದಾಗ ಆಡಳಿತ ವರ್ಗದಿಂದ ಅಥವಾ ಜನರಿಂದ ಸಕಾರಾತ್ಮಕ ಬೆಂಬಲ ಸಿಗುವುದು ಕಷ್ಟ. ಆದರೆ, ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ಥೈರ್ಯದ ಮಾತುಗಳು ಮತ್ತು ದೇಶದ ನಾಗರಿಕರು ನೀಡಿದ ಬೆಂಬಲದಿಂದ ಟೀಮ್‌ ಇಸ್ರೋ ಚೇತರಿಸಿಕೊಂಡಿದೆ. ಒಂದು ರೀತಿಯಲ್ಲಿ ಟಾನಿಕ್‌ ನೀಡಿದಂತಾಗಿದೆ ಎಂದು ಅವರು ಹೇಳಿದರು.

ಇಸ್ರೊ ಅಧ್ಯಕ್ಷರಿಗೆ ಟ್ವಿಟರ್‌ ಖಾತೆಯಿಲ್ಲ

ಕಳೆದ ಕೆಲವು ದಿನಗಳಿಂದ ಇಸ್ರೊ ಅಧ್ಯಕ್ಷ ಕೆ.ಶಿವನ್‌ ಹೆಸರು ಮತ್ತು ಭಾವಚಿತ್ರ ಹೊಂದಿರುವ ಟ್ವಿಟರ್‌ ಖಾತೆಯಲ್ಲಿ ಮಾಹಿತಿಗಳನ್ನು ಪ್ರಕಟಿಸಲಾಗುತ್ತಿದೆ. ಆ ಖಾತೆ ಅಧ್ಯಕ್ಷರ ಅಧಿಕೃತ ಖಾತೆ ಅಲ್ಲ ಎಂದು ಇಸ್ರೊ ಸ್ಪಷ್ಟಪಡಿಸಿದೆ.

ಕೈಲಾಸವಾದಿವೊ ಶಿವನ್‌ ಎಂಬ ಹೆಸರಿನ ಟ್ವಿಟರ್‌ ಖಾತೆ ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿದೆ. ಅಧ್ಯಕ್ಷ ಕೆ.ಶಿವನ್‌ ಅವರು ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಸಕ್ರಿಯರಾಗಿಲ್ಲ. ಶಿವನ್‌ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣದ ಖಾತೆಯೂ ಅಧಿಕೃತವಲ್ಲ ಎಂದು ಇಸ್ರೊ ತಿಳಿಸಿದೆ.

ಇಸ್ರೊ ಈ ಕೆಳಕಂಡ ಅಧಿಕೃತ ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕವಷ್ಟೇ ಮಾಹಿತಿ ನೀಡುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.