ADVERTISEMENT

ಕೋವಿಡ್–19 ಲಸಿಕೆ: ಏಪ್ರಿಲ್ 23ರಿಂದ ಮನುಷ್ಯರ ಮೇಲೆ ಆಕ್ಸ್‌ಫರ್ಡ್ ಲಸಿಕೆ ಪ್ರಯೋಗ

ಏಜೆನ್ಸೀಸ್
Published 22 ಏಪ್ರಿಲ್ 2020, 9:13 IST
Last Updated 22 ಏಪ್ರಿಲ್ 2020, 9:13 IST
ಪ್ರಯೋಗಾಲಯದಲ್ಲಿ ಪರೀಕ್ಷೆ– ಸಾಂಕೇತಿಕ ಚಿತ್ರ
ಪ್ರಯೋಗಾಲಯದಲ್ಲಿ ಪರೀಕ್ಷೆ– ಸಾಂಕೇತಿಕ ಚಿತ್ರ   

ಲಂಡನ್‌: ಕೊರೊನಾ ವೈರಸ್‌ ಸೋಂಕಿಗೆ ಸೂಕ್ತ ಲಸಿಕೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಕಾರ್ಯಾಚರಿಸುತ್ತಿದ್ದು, ಯುನೈಟೆಡ್‌ ಕಿಂಗ್‌ಡಮ್‌ ಸರ್ಕಾರವು 2 ಕೋಟಿ ಪೌಂಡ್‌ಗಳ (ಸುಮಾರು ₹189 ಕೋಟಿ) ಸಹಕಾರ ನೀಡುವುದಾಗಿ ಮಂಗಳವಾರ ಘೋಷಿಸಿದೆ.

ಆಕ್ಸ್‌ಫರ್ಡ್‌ ಯೂನಿವರ್ಸಿಟಿಯ ಸಂಶೋಧಕರು ಕೋವಿಡ್‌–19ಗೆ ಚಿಕಿತ್ಸೆ ನೀಡಲು ಲಸಿಕೆ ಕಂಡುಕೊಂಡಿದ್ದಾರೆ. ಸಾರ್ಸ್‌–ಕೋವ್‌–2 ವೈರಸ್‌ ಸೋಂಕಿನಿಂದ ಉಂಟಾಗುವ ರೋಗಕ್ಕೆ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ಪ್ರೊಫೆಸರ್‌ ಸರಾಹ್‌ ಗಿಲ್ಬರ್ಟ್‌ ಹೇಳಿದ್ದಾರೆ. ಸೆಪ್ಟೆಂಬರ್‌ನಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರದಿಂದ (ಏ‍ಪ್ರಿಲ್‌ 23) ಮನುಷ್ಯರ ಮೇಲೆ ಲಸಿಕೆ ಪ್ರಯೋಗಿಸಲು ಆಕ್ಸ್‌ಫರ್ಡ್‌ ಸಂಶೋಧಕರು ನಿರ್ಧರಿಸಿದ್ದಾರೆ.

ADVERTISEMENT

ಕೋವಿಡ್‌–19 ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಲಸಿಕೆ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್‌ ಹ್ಯಾನ್‌ಕಾಕ್‌ ಹೇಳಿದ್ದಾರೆ.

ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ ನಡೆಸುತ್ತಿರುವ ಪ್ರಯೋಗಗಳಿಗೂ 2.25 ಕೋಟಿ ಪೌಂಡ್ಸ್‌ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಎರಡನೇ ಹಂತದ ಚಿಕಿತ್ಸೆಯ ಪ್ರಯತ್ನಗಳಿಗೆ ಇದು ಸಹಕಾರಿಯಾಗಲಿದ್ದು, ಮೂರನೇ ಹಂತದ ಪ್ರಯೋಗಗಳಿಗೆ ತೆರೆದುಕೊಳ್ಳಲು ಅನುವು ಮಾಡಿಕೊಡಲಿದೆ ಎಂದಿದ್ದಾರೆ.

ಸಾಮಾನ್ಯವಾಗಿ ಪ್ರಯೋಗಗಳಲ್ಲಿ ಈ ಹಂತವನ್ನು ತಲುಪಲು ವರ್ಷಗಳೇ ಹಿಡಿಯುತ್ತದೆ ಎಂದು ಹ್ಯಾನ್‌ಕಾಕ್‌ ಹೇಳಿದ್ದಾರೆ.

'ಲಸಿಕೆ ಅಭಿವೃದ್ಧಿ ಪಡಿಸುವ ಜಾಗತಿಕ ಹುಡುಕಾಟದಲ್ಲಿ ಯುಕೆ ಮುಂಚೂಣಿಯಲ್ಲಿದ್ದು, ಇತರರಿಗಿಂತ ಅತಿ ಹೆಚ್ಚು ಹಣವನ್ನು ಮೀಸಲಿಡುತ್ತಿದ್ದೇವೆ. ಲಸಿಕೆ ಲಭಿಸುವುದು ಹಲವು ಪ್ರಯತ್ನಗಳಿಂದಲೇ ನಡೆಯಬೇಕಾದುದು. ಅದನ್ನು ಗೊತ್ತು ಪಡಿಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತದೆ' ಎಂದಿದ್ದಾರೆ.

ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಮಂಗಳವಾರ ಒಂದೇ ದಿನ 823 ಮಂದಿ ಸಾವಿಗೀಡಾಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 17,337 ತಲುಪಿದೆ.

ಆಕ್ಸ್‌ಫರ್ಡ್‌ ನಡೆಸಿರುವ ಲಸಿಕೆ ಪರೀಕ್ಷೆ–ಚಿತ್ರ: ಆಕ್ಸ್‌ಫರ್ಡ್ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.