ADVERTISEMENT

ತಂತ್ರಜ್ಞಾನ: ಡೆಲಿವರಿ ಡ್ರೋನ್‌ಗಳು ಬರಲಿವೆ

ಎಚ್.ಎಸ್.ಸುಧೀರ
Published 12 ಆಗಸ್ಟ್ 2025, 23:48 IST
Last Updated 12 ಆಗಸ್ಟ್ 2025, 23:48 IST
<div class="paragraphs"><p> ಡೆಲಿವರಿ ಡ್ರೋನ್‌</p></div>

ಡೆಲಿವರಿ ಡ್ರೋನ್‌

   

ನೀವು ಆರ್ಡರ್ ಮಾಡಿದ ವಸ್ತುಗಳು ಗಂಟೆಗಳ ಬದಲಿಗೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆಗೆ ತಲುಪಿದರೆ ಹೇಗಿರುತ್ತದೆ? ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಕನಸನ್ನು ನನಸು ಮಾಡಲು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅವರು ಅಭಿವೃದ್ಧಿಪಡಿಸಿರುವ ಹೊಸ ಅಲ್ಗಾರಿದಮ್ (ಗಣಿತದ ಸೂತ್ರ), ಡ್ರೋನ್‌ಗಳ ಮೂಲಕ ವಸ್ತುಗಳನ್ನು ವೇಗವಾಗಿ ತಲುಪಿಸಲು ಸಹಾಯ ಮಾಡುತ್ತದೆ. ಇದು ಸೀಮಿತ ಬ್ಯಾಟರಿ ಸಾಮರ್ಥ್ಯ ಮತ್ತು ಕಡಿಮೆ ತೂಕದ ಪಾರ್ಸೆಲ್‌ಗಳನ್ನು ಮಾತ್ರ ಸಾಗಿಸುವ ಡ್ರೋನ್‌ಗಳ ಮಿತಿಗಳನ್ನು ಪರಿಗಣಿಸಿ ರೂಪಿಸಲಾಗಿದೆ.

ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆ ಮತ್ತು ಪರಿಸರ ಮಾಲಿನ್ಯಕ್ಕೆ ಡ್ರೋನ್‌ಗಳು ಉತ್ತಮ ಪರಿಹಾರ ನೀಡಬಲ್ಲವು ಎಂದು ಅಮೆಜಾನ್ ಪ್ರೈಮ್ ಏರ್ ಮತ್ತು ಡಿಎಚ್‌ಎಲ್‌ನಂತಹ ಜಾಗತಿಕ ಕಂಪನಿಗಳು ಈಗಾಗಲೇ ಡ್ರೋನ್ ವಿತರಣ ವ್ಯವಸ್ಥೆಯ ಪ್ರಯೋಗವನ್ನು ನಡೆಸುತ್ತಿವೆ. ಈ ಡ್ರೋನ್‌ಗಳು ಕಡಿಮೆ ವೆಚ್ಚದಲ್ಲಿ ಮತ್ತು ಮನುಷ್ಯರ ಸಹಾಯವಿಲ್ಲದೆ ಕೆಲಸ ಮಾಡುತ್ತವೆ. ಆದರೆ, ಇದಕ್ಕೆ ಕೆಲವು ಸವಾಲುಗಳಿವೆ: ಡ್ರೋನ್‌ಗಳ ಬ್ಯಾಟರಿ ಬಾಳಿಕೆ ತುಂಬಾ ಕಡಿಮೆ. ಅವುಗಳು ಹೆಚ್ಚು ಭಾರವಾದ ವಸ್ತುಗಳನ್ನು ಸಾಗಿಸಲು ಸಾಧ್ಯವಿಲ್ಲ. ಹಾಗಾಗಿ, ಯಾವ ಪಾರ್ಸೆಲ್ ಅನ್ನು ಯಾವ ಡ್ರೋನ್‌ಗೆ, ಯಾವ ಸಮಯದಲ್ಲಿ ಕಳುಹಿಸಿದರೆ ಎಲ್ಲ ವಿತರಣೆಗಳನ್ನು ಅತಿ ಕಡಿಮೆ ಸಮಯದಲ್ಲಿ ಮುಗಿಸಬಹುದು ಎಂಬುದು ಒಂದು ದೊಡ್ಡ ಸವಾಲು. ಇದನ್ನು ‘ಡ್ರೋನ್ ವೇರ್‌ಹೌಸ್ ಪ್ರಾಬ್ಲಂ’ (Drone Warehouse Problem) ಎಂದು ಕರೆಯುತ್ತಾರೆ.

ADVERTISEMENT

ವಿಜ್ಞಾನಿಗಳ ಪರಿಹಾರ

ಐಐಎಸ್‌ಸಿ ವಿಜ್ಞಾನಿಗಳು ಈ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡುಕೊಂಡಿದ್ದಾರೆ. ಅವರ ಹೊಸ ‘ಅಲ್ಗಾರಿದಮ್’ ಎಲ್ಲಾ ಪಾರ್ಸೆಲ್‌ಗಳನ್ನು ಅತಿ ಕಡಿಮೆ ಸಮಯದಲ್ಲಿ ತಲುಪಿಸುವ ಭರವಸೆಯನ್ನು ನೀಡುತ್ತದೆ. ವಿಜ್ಞಾನಿಗಳು, ಈ ಸಮಸ್ಯೆಯನ್ನು ಪರಿಹರಿಸಲು ಸಿದ್ಧಪಡಿಸಿರುವ ಸೂತ್ರದಲ್ಲಿ ಗಣಿತದ ಒಂದು ವಿಶೇಷ ಸಂಖ್ಯೆಯನ್ನು ಬಳಸಿದ್ದಾರೆ. ಅದರ ಹೆಸರು ‘ಗೋಲ್ಡನ್ ರೇಷಿಯೊ’ ಅಥವಾ ‘ಫೈ’

(). ಈ ಗೋಲ್ಡನ್ ರೇಷಿಯೊ (ಸುಮಾರು 1.62) ಅನ್ನು ಪ್ರಕೃತಿ, ಕಲೆ ಮತ್ತು ಮಾನವದೇಹದಲ್ಲಿಯೂ ಕಾಣಬಹುದು. ಇದು ಸೌಂದರ್ಯ ಮತ್ತು ದಕ್ಷತೆಗಳನ್ನು ಸೂಚಿಸುತ್ತದೆ. ವಿಜ್ಞಾನಿಗಳು ಸಿದ್ಧಪಡಿಸಿರುವ ಸೂತ್ರದಲ್ಲಿ ಈ ಗೋಲ್ಡನ್ ರೇಷಿಯೊವನ್ನು ಬಳಸಿಕೊಂಡು, ಪಾರ್ಸೆಲ್‌ಗಳನ್ನು ಕಡಿಮೆ ಸಮಯದಲ್ಲಿ ತಲುಪಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

ಅಲ್ಗಾರಿದಮ್: ಈ ಹೊಸ ಸೂತ್ರವನ್ನು ರೂಪಿಸಲು ‘ಲಾಂಗಸ್ಟ್ ಪ್ರೊಸೆಸಿಂಗ್ ಟೈಮ್ ಫಸ್ಟ್’ (LPT) ಎಂಬ ಹಳೆಯ ಸೂತ್ರವನ್ನೇ ವಿಜ್ಞಾನಿಗಳು ಸ್ವಲ್ಪ ಬದಲಾಯಿಸಿದ್ದಾರೆ. ಸರಳವಾಗಿ ಹೇಳಬೇಕೆಂದರೆ, ಒಂದೇ ಸಮಯದಲ್ಲಿ ಹಲವು ಕೆಲಸಗಳಿರುವಾಗ, ಅತಿ ದೊಡ್ಡ ಕೆಲಸವನ್ನು ಅತಿ ಬೇಗ ಮುಗಿಸುವವರಿಗೆ ನೀಡುವುದು ಈ ತಂತ್ರದ ಉದ್ದೇಶ. ವಿಜ್ಞಾನಿಗಳು ಈ ತಂತ್ರಕ್ಕೆ ಡ್ರೋನ್‌ಗಳ ಬ್ಯಾಟರಿ ಸಾಮರ್ಥ್ಯ ಮತ್ತು ಅವುಗಳ ವೇಗದಂತಹ ಅಂಶಗಳನ್ನು ಸೇರಿಸುವ ಮೂಲಕ ಮಾರ್ಪಾಡು ಮಾಡಿದ್ದಾರೆ.

ಮೊದಲಿಗೆ, ಎಲ್ಲಾ ಪಾರ್ಸೆಲ್‌ಗಳನ್ನು ಗೋದಾಮಿನಿಂದ ಇರುವ ದೂರಕ್ಕೆ ಅನುಗುಣವಾಗಿ, ಅಂದರೆ ಹೆಚ್ಚು ದೂರದ ಪಾರ್ಸೆಲ್‌ ಅನ್ನು ಮೊದಲು, ಕಡಿಮೆ ದೂರದ ಪಾರ್ಸೆಲ್‌ ಅನ್ನು ನಂತರ ಎಂದು ಪಟ್ಟಿ ಮಾಡಲಾಗುತ್ತದೆ. ನಂತರ, ಡ್ರೋನ್‌ಗಳನ್ನು ಅವುಗಳ ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ಈ ರೀತಿ ಪಟ್ಟಿ ಮಾಡಿದ ನಂತರ, ಹೆಚ್ಚು ದೂರದ ಪಾರ್ಸೆಲ್‌ ಅನ್ನು ಯಾವ ಡ್ರೋನ್‌ ಬೇಗ ತಲುಪಿಸಬಲ್ಲದು, ಎಂದು ಲೆಕ್ಕ ಹಾಕಿ, ಆ ಡ್ರೋನ್‌ಗೆ ಆ ಪಾರ್ಸೆಲ್‌ ಅನ್ನು ನೀಡಲಾಗುತ್ತದೆ. ಈ ವಿಧಾನದಿಂದ, ಗೋದಾಮಿನ ಎಲ್ಲ ಪಾರ್ಸೆಲ್‌ಗಳನ್ನು ಕನಿಷ್ಠ ಸಮಯದಲ್ಲಿ ವಿತರಿಸಲು ಸಾಧ್ಯವಾಗುತ್ತದೆ. ತಾವು ಸಿದ್ಧಪಡಿಸಿದ ಸೂತ್ರದಲ್ಲಿ ಮತ್ತಷ್ಟು ವೇಗ ಪಡೆಯಲು ‘ಡೈನಮಿಕ್‌ ಮೇಂಟೆನೆನ್ಸ್‌ ಆಫ್‌ ಲೋವರ್‌ ಎನ್‌ವೆಲಪ್‌ ಲೈನ್ಸ್‌’ ಎಂಬ ಗಣಿತದ ವಿಧಾನವನ್ನು ಈ ಸಂಶೋಧಕರು ಬಳಸಿಕೊಂಡಿದ್ದಾರೆ. ಈ ವಿಧಾನದಿಂದ ಡ್ರೋನ್‌ಗಳು ಮತ್ತು ಪಾರ್ಸೆಲ್‌ಗಳ ಸಂಖ್ಯೆ ಹೆಚ್ಚಾದಂತೆ,

ಗಣಿತಸೂತ್ರದ ಕಾರ್ಯಕ್ಷಮತೆ ಹಿಂದಿನ ಸೂತ್ರಗಳಿಗಿಂತ ನಿಧಾನವಾಗಿ ಕಡಿಮೆಯಾಗುತ್ತದೆ. ಇದರಿಂದ, ಈ ಸೂತ್ರ ದೊಡ್ಡ ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಹೆಚ್ಚು ಉಪಯುಕ್ತವಾಗಿದೆ.

ಲಾಜಿಸ್ಟಿಕ್ಸ್ ಕ್ರಾಂತಿ: ಹಲವು ಕಂಪನಿಗಳು ಈಗಾಗಲೇ ಡ್ರೋನ್ ವಿತರಣ ವ್ಯವಸ್ಥೆಗೆ ಸರಳ ಪರಿಹಾರಗಳನ್ನು ಬಳಸುತ್ತಿವೆ. ಆದರೆ ಅವು ಡ್ರೋನ್‌ಗಳ ಸೀಮಿತ ಬ್ಯಾಟರಿ ಅಥವಾ ಸಾಮರ್ಥ್ಯದಂತಹ ವಿಷಯಗಳನ್ನು ಪೂರ್ಣವಾಗಿ ಪರಿಗಣಿಸುವುದಿಲ್ಲ. ಈ ಹೊಸ ಅಲ್ಗಾರಿದಮ್ ಈ ಎರಡೂ ಅಂಶಗಳನ್ನು ಪರಿಗಣಿಸಿ, ಬಲವಾದ ಗಣಿತೀಯ ಖಾತರಿಗಳೊಂದಿಗೆ ಕೆಲಸ ಮಾಡುತ್ತದೆ. ಈ ಹೊಸ ಗಣಿತಸೂತ್ರವು ಇಂದಿನ ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳಾದ ಅಮೆಜಾನ್, ಡಿಎಚ್‌ಎಲ್‌ ಅಥವಾ ನಮ್ಮದೇ ಆದ ಫ್ಲಿಪ್‌ಕಾರ್ಟ್‌, ಮೀಶೋ,

ಬ್ಲಿಂಕ್-ಇಟ್‌ಗಳಿಗೆ ಬಹಳ ಸಹಾಯಕವಾಗಲಿದೆ. ಈ ಸಂಸ್ಥೆಗಳು, ಪಾರ್ಸೆಲ್‌ಗಳನ್ನು ತಲುಪಿಸುವ ಕೆಲಸಕ್ಕೆ ಡ್ರೋನ್‌ಗಳನ್ನು ಬಳಸಲು ಇದು ಆಶಾದಾಯಕವಾಗಿದೆ.

ವಿಜ್ಞಾನಿಗಳು ರೂಪಿಸಿದ ಗಣಿತದ ಸೂತ್ರವನ್ನು ತಕ್ಷಣವೇ ಕಾರ್ಯಗತಗೊಳಿಸುವುದು ಸ್ವಲ್ಪ ಕಷ್ಟಕರವಾದರೂ, ಇದು ತಂತ್ರಜ್ಞಾನದಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ನೀವು ಖರೀದಿಸಿದ ವಸ್ತುಗಳು ನಿಮ್ಮ ಮನೆಯ ಬಾಗಿಲಿಗೆ ಬೇಗ ಬರುವುದಕ್ಕೆ ಇನ್ನೇನು ಹೆಚ್ಚು ಸಮಯ ಬೇಕಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.