ವಿಮಾನ ನೋಡಿದ್ದೀರಲ್ಲ? ಸಬ್‌ಮೆರೀನ್ ಅಥವಾ ಜಲಾಂತರ್ಗಾಮಿ ನೌಕೆಯನ್ನು ನೋಡಿರದಿದ್ದರೂ, ಅದರ ಬಗ್ಗೆ ಕೇಳಿರುತ್ತೀರಿ. ವಿಮಾನವನ್ನು ಕವಿಗಳು ‘ಲೋಹದ ಹಕ್ಕಿ’ ಎಂದು ವಿವರಿಸುತ್ತಾರೆ. ವಾಸ್ತವದಲ್ಲಿ ವಿಮಾನದ ಆಕಾರವು ಹಕ್ಕಿಯಂತೆ ಇದ್ದರೂ, ಅದು ಹಾರುವ ತಂತ್ರವೇ ಬೇರೆ. ಹಕ್ಕಿಗಳಂತೆ ಅದು ರೆಕ್ಕೆ ಬಡಿಯುವುದೇ ಇಲ್ಲ. ಹಾಗೆಯೇ ಸಬ್‌ಮೆರೀನು ಸಮುದ್ರದೊಳಗೆ ಈಜಿದರೂ, ಅದು ಚಲಿಸಲು ಬಳಸುವ ತಂತ್ರವೇ ಬೇರೆ.ಮೀನುಗಳಂತೆ ಬಳುಕುತ್ತಾ ಸಾಗುವುದಿಲ್ಲ. ಲೋಹದ ಮೀನು, ಲೋಹದ ವಿಮಾನ ಎನ್ನುವುದೆಲ್ಲ ಬರೀ ಕಲ್ಪನೆ ಎಂದುಕೊಂಡಿದ್ದರೆ ಸ್ವಲ್ಪ ತಾಳಿ. ಹಕ್ಕಿಗಳಂತೆಯೇ ರೆಕ್ಕೆ ಬಡಿಯುತ್ತಾ ಗಾಳಿಗೇರುವ ರೋಬಾಟು ಹಾಗೂ ಮೀನುಗಳಂತೆಯೇ ರೆಕ್ಕೆಗಳನ್ನು ಬಡಿದು ದಿಕ್ಕು ಬದಲಿಸುವ ಜಲಾಂತರ್ಗಾಮಿ ರೋಬಾಟುಗಳು ಸಿದ್ಧವಾಗುತ್ತಿವೆ.
ಹಕ್ಕಿಗಳನ್ನು ಗಮನಿಸಿ. ಅವು ಹಾರಲು ಹೊರಟಾಗ ವಿಮಾನಗಳಂತೆ ಕಿಲೋಮೀಟರುಗಳಷ್ಟು ದೂರ ಓಡುವುದಿಲ್ಲ. ಒಂದಿಷ್ಟು ದೂರ ಓಡಿ ಹೋಗಿ ಥಟ್ಟನೆ ಮೇಲೆ ನೆಗೆದು ಹಾರಲು ಆರಂಭಿಸುತ್ತವೆ. ವಿಮಾನವನ್ನು ಬಿಡಿ; ಅದು ಬಹಳ ಭಾರಿ; ಕುಪ್ಪಳಿಸಿ ಮೇಲೆ ಹಾರುವುದು ಸ್ವಲ್ಪ ಕಷ್ಟವೇ. ಆದರೆ ತುಸು ಹಗುರವಾದ ಡ್ರೋನುಗಳಾದರೂ ಹೀಗೆ ಮಾಡಬಹುದಿತ್ತಲ್ಲವೇ? ಇದುವೂ ಸಾಧ್ಯವಂತೆ. ಸ್ವಿಟ್ಜರ್ಲೆಂಡಿನ ಲೌಸಾನೆಯಲ್ಲಿರುವ ಸರ್ಕಾರಿ ತಾಂತ್ರಿಕ ಸಂಶೋಧನಾಲಯದ ಯಾಂತ್ರಿಕಬುದ್ಧಿ ಇರುವ ಯಂತ್ರಗಳ ತಂತ್ರಜ್ಞ ವಾಂಗ್ ಡಾಂಗ್ ಶಿಂಗ್ ಮತ್ತು ಸಂಗಡಿಗರು ಹೀಗೆ ಓಡಿ, ನೆಗೆದು ಗಾಳಿಯೇರುವ ಡ್ರೋನನ್ನು ಸೃಷ್ಟಿಸಿದ್ದಾರೆ.
ವಾಂಗ್ ಡಾಂಗ್ ಶಿಂಗ್ ತಂಡದ ಡ್ರೋನು ಸಾಧಾರಣ ಡ್ರೋನುಗಳಂತೆ ಕಾಣುವುದಿಲ್ಲ. ನೋಡಲು ಕೂಡ ಅದು ಹಕ್ಕಿಯಂತೆಯೇ ಇದೆ. ‘ರೇವನ್’ ಎಂದು ಇದಕ್ಕೆ ಹೆಸರಿಟ್ಟಿದ್ದಾರೆ. ಎಂದರೆ ವಿಭಿನ್ನ ಪರಿಸರಗಳಿಗೆ ಯುಕ್ತವಾದ ಹಕ್ಕಿಯನ್ನು ಅಣಕಿಸುವ ರೋಬಾಟು ಎಂದು ಅರ್ಥ. ಇದರ ವಿಶೇಷ, ಅದರ ಕಾಲುಗಳು. ಹಕ್ಕಿಗಳಂತೆಯೇ ಈ ಡ್ರೋನು ನೆಲದ ಮೇಲೆ ನಡೆಯಬಲ್ಲುದು, ಓಡಬಲ್ಲುದು, ಕುಪ್ಪಳಿಸಬಲ್ಲುದು ಹಾಗೂ ಆಕಾಶದಲ್ಲಿ ಹಾರಬಲ್ಲುದು. ವಿಮಾನಗಳಿಗಾಗಲಿ, ಡ್ರೋನುಗಳಿಗಾಗಲಿ ಇದು ಸಾಧ್ಯವಿಲ್ಲ. ರೇವನ್ ಹೀಗೆ ನೆಲದಲ್ಲಿ ಸರಾಗವಾಗಿ ಚಲಿಸಿದಂತೆಯೇ ಗಾಳಿಯಲ್ಲಿಯೂ ಹಾರಬಲ್ಲುದು.
ವಿಮಾನ ಹಾಗೂ ಡ್ರೋನುಗಳು ಗಾಳಿಯಲ್ಲಿ ಹಾರಲು ಸಮರ್ಥವಾಗಿದ್ದರೂ, ನೆಲದ ಮೇಲೆ ಓಡಾಡುವುದರಲ್ಲಿ ಅಶಕ್ತರು. ಆದ್ದರಿಂದಲೇ ವಿಮಾನಗಳು ಮೇಲೇರಲು ಬಹಳಷ್ಟು ದೂರ ಓಡಬೇಕು. ಡ್ರೋನುಗಳನ್ನು ಮೇಲೆ ಎತ್ತಿ ಬಿಸಾಡಬೇಕು, ಗಾಳಿಪಟವನ್ನು ಬಿಸಾಡಿದಂತೆ. ಅಥವಾ ಹೆಲಿಕಾಪ್ಟರಿನಲ್ಲಿರುವ ರೋಟರುಗಳಿಂದ ಗಾಳಿಯನ್ನು ಬೀಸಿ ಮೇಲೆ ಎತ್ತಬೇಕು. ಅನಂತರವಷ್ಟೆ ಅವುಗಳ ಹಾರಾಟ. ರೇವನ್‌ಗೆ ಈ ಸಂಕಟವಿಲ್ಲ. ಅದರ ಕಾಲುಗಳನ್ನು ಈ ಎಲ್ಲ ಚಟುವಟಿಕೆಗಳಿಗೆ ಹೊಂದುವಂತೆ ಶಿಂಗ್ ತಂಡ ರಚಿಸಿದೆ.
ಹಕ್ಕಿಗಳ ಕಾಲು ವಿಶಿಷ್ಟ ನಮ್ಮ ಕಾಲಿನ ಹಾಗೆ ಅದು ಮಾಂಸಲವಲ್ಲ. ಕಾಲನ್ನು ಚಾಲಿಸುವ ಮಾಂಸಗಳೆಲ್ಲವೂ ಬಹುತೇಕ ಅದು ದೇಹಕ್ಕೆ ಕೂಡಿಕೊಳ್ಳುವ ಭಾಗದಲ್ಲಿ ಇರುತ್ತವೆ. ಕೊಕ್ಕರೆಯ ಕಡ್ಡಿಯಂತಹ ಕಾಲನ್ನು ನೆನಪಿಸಿಕೊಳ್ಳಿ. ಹಾಗೆಯೇ ಪಾದ, ಮೊಣಕಾಲು ಹಾಗೂ ತೊಡೆಗಳ ಸಂಧಿಗಳೂ ನಮ್ಮ ನಿಮ್ಮದರಂತೆ ಇಲ್ಲ. ಬಹುತೇಕ ಹಕ್ಕಿಗಳ ಮಂಡಿ ಹಿಮ್ಮುಖವಾಗಿ ಮಡಿಚಿಕೊಂಡಿರುತ್ತದೆ. ‘ಇದರಿಂದ ಹಕ್ಕಿಗಳ ಭಾರ ಕಡಿಮೆಯಾಗುತ್ತದೆ. ಕಾಲನ್ನು ಒದೆಯಲು ಶಕ್ತಿಯೂ ಹೆಚ್ಚುತ್ತದೆ,’ ಎಂದು ಶಿಂಗ್ ಹೇಳುತ್ತಾರೆ. ಇದೇ ರೀತಿಯಲ್ಲಿ ರೇವನ್ ಕಾಲನ್ನೂ ರಚಿಸಲಾಗಿದೆ. ರೋಬಾಟುಗಳಲ್ಲಿ ಅತಿ ಭಾರಿಯಾದ ಅಂಗಗಳೆಂದರೆ ಅವುಗಳ ಕೈ, ಕಾಲುಗಳು. ಆದರೆ ರೇವನ್ ಕಾಲುಗಳು ಕೊಕ್ಕರೆಯ ಕಾಲಿನಂತೆಯೇ ಕಡ್ಡಿ. ಅವನ್ನು ಚಾಲಿಸುವ ಮೋಟರು, ಗಿಯರು ಮೊದಲಾದವೆಲ್ಲವೂ ಮೇಲ್ಭಾಗದಲ್ಲಿ, ಡ್ರೋನಿನ ಹೊಟ್ಟೆಯ ಬಳಿ ಒಟ್ಟಾಗಿವೆ. ಜೊತೆಗೆ ಕಾಲನ್ನೂ ಹಕ್ಕಿಗಳದ್ದರಂತೆಯೇ ತೊಡೆ, ಮೊಣಕಾಲು ಹಾಗೂ ಪಾದಗಳೆಂದು ಮೂರು ಅಂಶಗಳನ್ನಾಗಿ ರಚಿಸಿದ್ದಾರೆ. ಇವು ಎಡ, ಬಲ, ಹಿಂದು, ಮುಂದು ತಿರುಗುವಂತೆ ಜೋಡಿಸಲಾಗಿದೆ.
ಆದರೆ ಇದು ಕೆಲಸ ಮಾಡೀತೇ? ಇದನ್ನೂ ಶಿಂಗ್ ತಂಡ ಪರೀಕ್ಷಿಸಿದೆಯಂತೆ. ಈ ಡ್ರೋನು ನೆಲದಿಂದ ಗಾಳಿಗೆ ಏರಲು ತೆಗೆದುಕೊಳ್ಳುವ ಸಮಯವನ್ನು ವಿವಿಧ ಸಂದರ್ಭಗಳಲ್ಲಿ ಪರೀಕ್ಷಿಸಿದೆ. ಹಕ್ಕಿಗಳು ಮರದಿಂದ ಹಾರುವಾಗ ಕುಪ್ಪಳಿಸಿ, ಗಾಳಿಗೆ ಜಿಗಿದು ಹಾಗೆಯೇ ಹಾರುತ್ತವಷ್ಟೆ. ಹಾಗೆಯೇ ರೆಂಬೆಯ ಮೇಲೆ ಒಂದಿಷ್ಟು ದೂರ ಕುಪ್ಪಳಿಸಿ ಮೇಲೇಳುತ್ತವೆ. ಇವೆಲ್ಲ ರೀತಿಯಲ್ಲಿಯೂ ರೇವನ್ ಹಾರಬಲ್ಲುದೇ ಎಂದು ಪರೀಕ್ಷಿಸಿದ್ದಾರೆ. ಕಾಲಿನ ಹೊಸ ವಿನ್ಯಾಸದಿಂದಾಗಿ ಈ ಡ್ರೋನು ಎಲ್ಲ ಸಂದರ್ಭಗಳಲ್ಲಿಯೂ ಯಶಸ್ವಿಯಾಗಿ ಗಾಳಿಗೆ ಹಾರಿತ್ತು.
ಇಂಥ ಡ್ರೋನುಗಳಿಂದ ಸಾಕಷ್ಟು ಅನುಕೂಲಗಳಿವೆ. ಸಾಧಾರಣ ಡ್ರೋನು ಮರದ ಮೇಲೆ ಅಥವಾ ಮೇಲೆ ಹಾರಲು ಸಾಕಷ್ಟು ಅವಕಾಶ ಇಲ್ಲದಾಗ, ಅದು ಸತ್ತಂತೆಯೇ ಸರಿ. ಆದರೆ ಈ ಡ್ರೋನು ಹಾಗಲ್ಲ. ಮೇಲೆ ಬಹಳ ಎತ್ತರಕ್ಕೆ ಏರಲಾಗದಿದ್ದಾಗಲೂ ಕುಪ್ಪಳಿಸಿಕೊಂಡು ನೆಲಕ್ಕ ಸಮೀಪದಲ್ಲಿಯೇ ಹಾರಬಲ್ಲುದು. ಅನಂತರ ಅವಕಾಶ ದೊರೆತಾಗ ಮೇಲಕ್ಕೆ ಏರಬಲ್ಲುದು. ಎದುರಿಗೆ ಕಲ್ಲುಬಂಡೆ ಎದುರಾದಾಗ, ಅದನ್ನೇರಿ ಅಲ್ಲಿಂದ ಮತ್ತೆ ಹಾರುವ ಹಕ್ಕಿಯಂತೆಯೇ ಇದು ಕೂಡ ಚಲಿಸುತ್ತದೆ. ಡ್ರೋನು, ವಿಮಾನಗಳಿಗೆ ಕಷ್ಟವೆನ್ನಿಸುವ ಹಲವು ಸಂದರ್ಭಗಳಲ್ಲಿ ಇದು ಸಮರ್ಥವಾಗಿ ಹಾರುತ್ತದಂತೆ. ಇವೆಲ್ಲವಕ್ಕೂ
ಪ್ರೇರಣೆ ಎಂದರೆ ಹಕ್ಕಿಯ ಕಾಲುಗಳು. ನಿಸರ್ಗದಿಂದ ನಾವು ಕಲಿಯಬೇಕಾದ್ದು ಇನ್ನೂ ಬಹಳಷ್ಟಿದೆ, ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.