ADVERTISEMENT

Chandryaan-3: ಭಾರತದ ಪ್ರಯತ್ನ ಮೆಚ್ಚಿದ ಗಗನಯಾನಿ ಸುನೀತಾ ವಿಲಿಯಮ್ಸ್‌

ಪಿಟಿಐ
Published 22 ಆಗಸ್ಟ್ 2023, 10:45 IST
Last Updated 22 ಆಗಸ್ಟ್ 2023, 10:45 IST
ಸುನೀತಾ ವಿಲಿಯಮ್ಸ್‌
ಸುನೀತಾ ವಿಲಿಯಮ್ಸ್‌   ರಾಯಿಟರ್ಸ್ ಚಿತ್ರ

ನವದೆಹಲಿ: ‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಂಡಿರುವ ಚಂದ್ರಯಾನ–3 ಯೋಜನೆ ತೀವ್ರ ಕುತೂಹಲ ಮೂಡಿಸಿದೆ’ ಎಂದು ಭಾರತೀಯ ಸಂಜಾತ ಗಗನಯಾನಿ ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.

ಬಾಹ್ಯಾಕಾಶ ಯಾನದಲ್ಲಿ ಅದ್ಭುತ ಸಾಧನೆ ಮಾಡಿರುವ ಸುನೀತಾ ಅವರು ಈ ಯೋಜನೆ ಕುರಿತು ಪ್ರತಿಕ್ರಿಯಿಸಿ, ‘ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಜ್ಞಾನ್ ರೋವರ್‌ ಶೋಧನೆ ಆರಂಭಿಸುವ ಮೂಲಕ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಲಿದೆ’ ಎಂದಿದ್ದಾರೆ.

ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್‌ಗೆ ಮಾತನಾಡಿರುವ ಅವರು, ‘ಚಂದ್ರನ ಅನ್ವೇಷಣೆ ಕೇವಲ ಜ್ಞಾನಕ್ಕಾಗಿ ಅಲ್ಲ. ಬದಲಿಗೆ ಭೂಮಿಯ ಹೊರತುಪಡಿಸಿ ಬೇರೊಂದು ಜಾಗವನ್ನು ಹುಡುಕಿಕೊಳ್ಳಲು ಇರುವ ಅದ್ಭುತ ಹುಡುಕಾಟವಾಗಿದೆ’ ಎಂದಿದ್ದಾರೆ.

ADVERTISEMENT

‘ಚಂದ್ರನಲ್ಲಿ ಇಳಿಯುವ ಮೂಲಕ ಬಹಳಷ್ಟು ಹೊಸ ವಿಷಯಗಳು ಹಾಗು ಮಾಹಿತಿ ಸಿಗಲಿವೆ. ಚಂದ್ರನಲ್ಲಿ ಬದುಕಲು ಅಗತ್ಯವಿರುವ ಸೌಕರ್ಯಗಳ ಶೋಧ ಕಾರ್ಯದಲ್ಲಿ ಹಾಗೂ ಬಾಹ್ಯಾಕಾಶ ಅನ್ವೇಷನೆಯಲ್ಲಿ ಭಾರತ ಸಾಧನೆ ನಿಜಕ್ಕೂ ರೋಮಾಂಚನ ಮೂಡಿಸಿದೆ’ ಎಂದಿದ್ದಾರೆ.

‘ಚಂದ್ರಯಾನ–3ರ ಕುರಿತು ವೈಜ್ಞಾನಿಕ ಸಂಶೋಧನೆಗಳು ನಡೆಯಬೇಕು. ಜತೆಗೆ ಸುರಕ್ಷಿತ ಲ್ಯಾಂಡಿಂಗ್ ಮತ್ತು ರೋವರ್‌ ನಡೆಸುವ ಅನ್ವೇಷಣೆಗಳ ಕುರಿತೂ ಅಧ್ಯಯನ ಆಗಬೇಕು. ಅದೊಂದು ಅದ್ಭುತ ಸಾಧನೆಯಾಗಲಿದೆ. ಇವುಗಳನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಚಂದ್ರಯಾನ–3ರ ಲ್ಯಾಂಡರ್ ವಿಕ್ರಮ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಕುತೂಹಲಕಾರಿ ಘಟ್ಟದ ಕುರಿತು ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್‌ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಸುನೀತಾ ವಿಲಿಯಮ್ಸ್‌ ಮತ್ತು ಬಾಹ್ಯಾಕಾಶ ಯಾನ ನಡೆಸಿದ ಮೊದಲ ಭಾರತೀಯ ರಾಕೇಶ್ ಶರ್ಮ ಅವರ ಪ್ರತಿಕ್ರಿಯೆಗಳನ್ನೂ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.