ಎಮೆರಿಟಸ್ ಪ್ರೊಫೆಸರ್ ಜಾನ್ ಕ್ಲಾರ್ಕ್
ಈ ವರ್ಷದ (2025) ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರಾಧ್ಯಾಪಕ ಎಮೆರಿಟಸ್ ಪ್ರೊಫೆಸರ್ ಜಾನ್ ಕ್ಲಾರ್ಕ್ ಕೂಡ ಒಬ್ಬರು. ಇವರ ವಿಶಿಷ್ಟ ಸಂಶೋಧನೆಯು ಕ್ವಾಂಟಮ್ ಭೌತಶಾಸ್ತ್ರದ ಗಡಿಗಳನ್ನು ವಿಸ್ತರಿಸಿದ್ದು, ಭವಿಷ್ಯದ ತಂತ್ರಜ್ಞಾನಕ್ಕೆ ಹೊಸ ದಿಕ್ಕನ್ನು ನೀಡಿದೆ. ‘ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಶಕ್ತಿಯ ಕ್ವಾಂಟೈಸೇಶನ್ ಅನ್ನು ಕಂಡುಹಿಡಿದಿದ್ದಕ್ಕಾಗಿ’ ಅವರಿಗೆ ಈ ಪ್ರತಿಷ್ಠಿತ ಗೌರವ ಲಭಿಸಿದೆ ಎಂದು ನೋಬೆಲ್ ಪ್ರಶಸ್ತಿ ನೀಡಿದ ಸಮಿತಿ ತಿಳಿಸಿದೆ.
ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ 1942ರ ಫೆಬ್ರುವರಿ 10ರಂದು ಜನಿಸಿದ ಇವರು, ಬ್ರಿಟಿಷ್ ಮೂಲದ ಅಮೆರಿಕನ್ ಭೌತಶಾಸ್ತ್ರಜ್ಞರು. ಪ್ರೊ. ಕ್ಲಾರ್ಕ್ ಅವರು 1964ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಮತ್ತು 1968ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಪಡೆದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದ ಸಮಯದಲ್ಲಿ ಅವರು ಸೂಕ್ಷ್ಮ ವೋಲ್ಟ್‌ಮೀಟರ್ ‘SLUG’ ಅನ್ನು ಅಭಿವೃದ್ಧಿಪಡಿಸುವ ಮೂಲಕ ತಮ್ಮ ಸಂಶೋಧನಾ ಪಯಣವನ್ನು ಪ್ರಾರಂಭಿಸಿದರು. ನಂತರ 1969ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿ ಸೇರಿಕೊಂಡ ಅವರು ತಮ್ಮ ಸಂಶೋಧನಯಾತ್ರೆಯನ್ನು ಮುಂದುವರೆಸಿದರು. 2010ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಪ್ರೊಫೆಸರ್ ಎಮೆರಿಟಸ್ ಆಗಿ ತಮ್ಮ ಸಂಶೋಧನೆಯನ್ನು ನಡೆಸುತ್ತಿದ್ದಾರೆ.
ಪ್ರೊ. ಕ್ಲಾರ್ಕ್ ಅವರ ಸಂಶೋಧನೆಯ ಮುಖ್ಯ ಭಾಗವೆಂದರೆ ಸೂಪರ್‌ಕಂಡಕ್ಟಿಂಗ್ ಕ್ವಾಂಟಮ್ ಇಂಟರ್‌ಫೆರೆನ್ಸ್ ಡಿವೈಸಸ್ (SQUIDs) ಎಂಬ ಸೂಕ್ಷ್ಮ ಉಪಕರಣಗಳ ಅಭಿವೃದ್ಧಿ ಮತ್ತು ಅವುಗಳ ಅನ್ವಯಗಳು. ‘SQUID’ಗಳು ಸಾಮಾನ್ಯ ಕಾಂತೀಯ ಮಾಪಕಗಳಿಗಿಂತ ಲಕ್ಷಗಟ್ಟಲೆ ಪಟ್ಟು ಹೆಚ್ಚು ಸೂಕ್ಷ್ಮವಾಗಿವೆ. ಇವು ಸೂಪರ್‌ಕಂಡಕ್ಟಿಂಗ್ ಲೂಪ್‌ಗಳು ಮತ್ತು ಜೋಸೆಫ್‌ಸನ್ ಜಂಕ್ಷನ್‌ಗಳನ್ನು ಒಳಗೊಂಡಿದ್ದು, ಕಾಂತೀಯ ಹರಿವಿನಲ್ಲಿನ ಅತ್ಯಂತ ಸಣ್ಣ ಬದಲಾವಣೆಗಳನ್ನು ಸಹ ಪತ್ತೆಹಚ್ಚಬಲ್ಲವು. ಈ ಅಸಾಧಾರಣ ಸೂಕ್ಷ್ಮತೆಯು ವೈದ್ಯಕೀಯ ಇಮೇಜಿಂಗ್, ಭೂಭೌತಶಾಸ್ತ್ರ ಮತ್ತು ಮೂಲಭೂತ ಭೌತಶಾಸ್ತ್ರ ಸಂಶೋಧನೆಯಂತಹ ಕ್ಷೇತ್ರಗಳಲ್ಲಿ ಅವುಗಳ ಬಳಕೆಗೆ ನಿರ್ಣಾಯಕವಾಗಿದೆ.
ಸಾಮಾನ್ಯವಾಗಿ ನಾವು ಅತಿಸೂಕ್ಷ್ಮ ಪರಮಾಣುಗಳು ಮತ್ತು ಉಪಪರಮಾಣು ಕಣಗಳ ಜಗತ್ತಿನಲ್ಲಿ ಮಾತ್ರ ಕ್ವಾಂಟಮ್ ಪರಿಣಾಮಗಳನ್ನು ಕಾಣುತ್ತೇವೆ. ಅವರ ಅತ್ಯಂತ ಮಹತ್ವದ ಸಾಧನೆಗಳಲ್ಲಿ ಒಂದೆಂದರೆ, 1984-85ಲ್ಲಿ ತಮ್ಮ ಪಿಎಚ್.ಡಿ. ವಿದ್ಯಾರ್ಥಿ ಜಾನ್ ಎಂ. ಮಾರ್ಟಿನಿಸ್ ಮತ್ತು ಸಹಾಯಕ ಸಂಶೋಧಕ ಮೈಕೆಲ್ ಡೆವೊರೆಟ್ ಅವರೊಂದಿಗೆ ಅವರು ಈ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಬದಲಾಯಿಸಿದರು. ನಮ್ಮ ಕಣ್ಣಿಗೆ ಕಾಣುವ ಅಥವಾ ಸ್ಪರ್ಶಿಸಬಹುದಾದ ದೊಡ್ಡ ವಿದ್ಯುತ್ ಸರ್ಕ್ಯೂಟ್‌ಗಳಲ್ಲೂ ಕ್ವಾಂಟಮ್ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ಇವರು ನಡೆಸಿದ ಅದ್ಭುತ ಪ್ರಯೋಗಗಳ ಮೂಲಕ ಸಾಬೀತುಪಡಿಸಿದರು.
ಪ್ರೊ. ಕ್ಲಾರ್ಕ್ ಮತ್ತು ಅವರ ತಂಡವು, ಕಡಿಮೆ ತಾಪಮಾನದಲ್ಲಿ, ಒಂದು ಮ್ಯಾಕ್ರೋಸ್ಕೋಪಿಕ್ ಎಲೆಕ್ಟ್ರಾನಿಕ್ ಸ್ಥಿತಿಯು ಶೂನ್ಯ ವೋಲ್ಟೇಜ್‌ನಲ್ಲಿ ಕ್ವಾಂಟಮ್ ಟನೆಲಿಂಗ್‌ಗೆ ಒಳಗಾಗುತ್ತದೆ ಎಂದು ಸಾಬೀತುಪಡಿಸಿತು. ಈ ಆವಿಷ್ಕಾರವು ‘ಸರ್ಕ್ಯೂಟ್ ಕ್ವಾಂಟಮ್ ಎಲೆಕ್ಟ್ರೋಡೈನಾಮಿಕ್ಸ್’ ಎಂಬ ಹೊಸ ಕ್ಷೇತ್ರಕ್ಕೆ ಅಡಿಪಾಯ ಹಾಕಿತು, ಇದು ಇಂದು ಸೂಪರ್‌ಕಂಡಕ್ಟಿಂಗ್ ಕ್ವಾಂಟಮ್ ಕಂಪ್ಯೂಟರ್‌ಗಳ ಅಭಿವೃದ್ಧಿಗೆ ಮೂಲಭೂತವಾಗಿದೆ. ಕ್ವಾಂಟಮ್ ಕಂಪ್ಯೂಟರ್‌ಗಳು ಭವಿಷ್ಯದಲ್ಲಿ ಪ್ರಸ್ತುತ ಕಂಪ್ಯೂಟರ್‌ಗಳು ಪರಿಹರಿಸಲಾಗದ ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತವೆ. ಇದು ಕ್ಲಾಸಿಕಲ್ ಭೌತಶಾಸ್ತ್ರ ಮತ್ತು ಕ್ವಾಂಟಮ್ ಭೌತಶಾಸ್ತ್ರದ ನಡುವಿನ ಕಂದಕವನ್ನು ಕಡಿಮೆ ಮಾಡಿತು. ಕ್ವಾಂಟಮ್ ಪರಿಣಾಮಗಳು ಅತಿಸೂಕ್ಷ್ಮ ಜಗತ್ತಿಗೆ ಮಾತ್ರ ಸೀಮಿತವಲ್ಲ ಎಂದು ತೋರಿಸಿತು. ಅವರ ಈ ಕಾರ್ಯವನ್ನು ‘ಸೂಪರ್‌ಕಂಡಕ್ಟಿಂಗ್ ಎಲೆಕ್ಟ್ರಾನಿಕ್ಸ್‌ನ ಗಾಡ್‌ಫಾದರ್’ ಎಂದು ಪ್ರೊಫೆಸ್ಸರ್ ಸ್ಟೀವನ್ ಗಿರ್ವಿನ್ ಬಣ್ಣಿಸಿದ್ದಾರೆ.
ನೊಬೆಲ್ ಪ್ರಶಸ್ತಿಯು ಅವರ ಸುದೀರ್ಘ ಸಂಶೋಧನಾ ಕಾರ್ಯಕ್ಕೆ ದೊರಕಿದ ಅತ್ಯುನ್ನತ ಕಿರೀಟ. ಕಡಿಮೆ ತಾಪಮಾನದ ಭೌತಶಾಸ್ತ್ರದಲ್ಲಿನ ಅವರ ಮಹತ್ವದ ಸಂಶೋಧನೆಗಳಿಗಾಗಿ 1987ರಲ್ಲಿ ಫ್ರಿಟ್ಜ್ ಲಂಡನ್ ಪ್ರಶಸ್ತಿ ಮತ್ತು 1999ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಕಾಮ್‌ಸ್ಟಾಕ್ ಪ್ರಶಸ್ತಿ, 2004ರಲ್ಲಿ ರಾಯಲ್ ಸೊಸೈಟಿಯ ಹ್ಯೂಸ್ ಮೆಡಲ್ ಮತ್ತು 2021ರಲ್ಲಿ ಮಿಸಿಯಸ್ ಕ್ವಾಂಟಮ್ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. ಇವರು ರಾಯಲ್ ಸೊಸೈಟಿ ಆಫ್ ಲಂಡನ್, ಅಮೇರಿಕನ್ ಫಿಸಿಕಲ್ ಸೊಸೈಟಿ ಮತ್ತು ಅಮೆರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್‌ನಂತಹ ಪ್ರಮುಖ ವೈಜ್ಞಾನಿಕ ಸಂಸ್ಥೆಗಳ ಫೆಲೋ ಆಗಿದ್ದಾರೆ.
ಪ್ರೊ. ಜಾನ್ ಕ್ಲಾರ್ಕ್ ಅವರ ನಿರಂತರ ಅಧ್ಯಯನ ಮತ್ತು ಶ್ರಮವು ಆಧುನಿಕ ವಿಜ್ಞಾನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದು, ಕ್ವಾಂಟಮ್ ಯುಗದ ಕನಸನ್ನು ನನಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅವರ ಈ ನೊಬೆಲ್ ಪ್ರಶಸ್ತಿ ವಿಜ್ಞಾನ ಜಗತ್ತಿಗೆ ಮಾತ್ರವಲ್ಲದೆ, ಇಡೀ ಮಾನವಕುಲಕ್ಕೆ ಸ್ಫೂರ್ತಿಯ ಚಿಲುಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.